ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 KKR vs RCB: ಸೋಲುಗಳ ಸಂಕೋಲೆ ಕಳಚುವುದೇ ಆರ್‌ಸಿಬಿ?

ಈಡನ್ ಗಾರ್ಡನ್‌ನಲ್ಲಿ ಡುಪ್ಲೆಸಿ ಪಡೆಗೆ ಕೋಲ್ಕತ್ತ ನೈಟ್‌ರೈಡರ್ಸ್ ಸವಾಲು
Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕೋಲ್ಕತ್ತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ದುರ್ಗಮ ಹಾದಿಗೆ ಬಂದು ನಿಂತಿದೆ. 

ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಅರ್ಧಡಜನ್ ಸೋಲುಂಡಿರುವ ಫಫ್ ಡುಪ್ಲೆಸಿ ಬಳಗಕ್ಕೆ ಪ್ಲೇಆಫ್ ಹಾದಿ ಕಠಿಣವಾಗಿದೆ. ಆದರೂ ಉಳಿದಿರುವ ಏಳು ಪಂದ್ಯಗಳಲ್ಲಿಯೂ ಗೆದ್ದರೆ ಒಂದು ಸಣ್ಣ ಅವಕಾಶ ಸೃಷ್ಟಿಯಾಗಬಹುದು ಎಂಬಂತಹ ಲೆಕ್ಕಾಚಾರವೂ ಇದೆ. ಆದರೆ ಈ ಹಾದಿಯಲ್ಲಿ ಒಂದೇ ಒಂದು ಸೋಲು ಕೂಡ ಆರ್‌ಸಿಬಿ ಟೂರ್ನಿಯಿಂದ ಹೊರಬೀಳುತ್ತದೆ. 

ಐದು ದಿನಗಳ ವಿಶ್ರಾಂತಿಯ ನಂತರ ಕಣಕ್ಕಿಳಿಯುತ್ತಿರುವ ಬೆಂಗಳೂರು ತಂಡಕ್ಕೆ ಟೂರ್ನಿಯ ದ್ವಿತೀಯಾರ್ಧದ ಮೊದಲ ಸವಾಲು ಭಾನುವಾರ ಎದುರಾಗಲಿದೆ. ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫಫ್ ಬಳಗವು  ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರು ಬಳಗಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶವಿದೆ. ಎಂಟು ಅಂಕ ಗಳಿಸಿರುವ ಕೋಲ್ಕತ್ತ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಕೊನೆ ಸ್ಥಾನದಲ್ಲಿದೆ. 

ತಂಡದ ಈ ಹೀನಾಯ ಸ್ಥಿತಿಗೆ ಪ್ರಮುಖವಾಗಿ ಕಾರಣವಾಗಿದ್ದು ದುರ್ಬಲ ಬೌಲಿಂಗ್ ಪಡೆ.  ಅನುಭವಿ ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲಿ, ವೈಶಾಖ ವಿಜಯಕುಮಾರ್, ಯಶ್ ದಯಾಳ್, ಅಲ್ಜರಿ ಜೋಸೆಫ್, ಲಾಕಿ ಫರ್ಗ್ಯುಸನ್, ಮಯಂಕ್ ದಾಗರ್ ಅವರೆಲ್ಲರೂ ದುಬಾರಿ ದಂಡ ತೆತ್ತಿದ್ದಾರೆ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಬೆಂಗಳೂರು ಎದುರು 287 ರನ್‌ಗಳ ದಾಖಲೆಯ ಮೊತ್ತ ಪೇರಿಸಿತ್ತು. ಆ ಪಂದ್ಯದಲ್ಲಿ ವಿರಾಟ್, ಫಫ್ ಮತ್ತು ದಿನೇಶ್ ಮಿಂಚಿದ್ದರಿಂದ ಬೆಂಗಳೂರು ತಂಡವು ಕಡಿಮೆ ಅಂತರದಿಂದ ಸೋತಿತ್ತು. ಈ ಮೂವರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ಭರವಸೆಯ ಆಟವಾಡಿಲ್ಲ. ಅದರಲ್ಲೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಸತ  ವೈಫಲ್ಯಗಳ ನಂತರ ವಿರಾಮ ಪಡೆದಿದ್ದಾರೆ. ಯುವ ಆಟಗಾರರಾದ ರಜತ್ ಪಾಟೀದಾರ್,ಅನುಜ್ ರಾವತ್, ವಿಲ್ ಜ್ಯಾಕ್ಸ್‌ ಅವರು ತಮಗೆ ಸಿಕ್ಕ ಅವಕಾಶ ಬಳಸಿಕೊಂಡಿಲ್ಲ. ತಂಡದ ಆಟದಲ್ಲಿ ಸುಧಾರಣೆ ಕಾಣದಿದ್ದರೆ ಗೆಲುವಿನ ಫಲಿತಾಂಶ ಸಿಗುವುದು ಕಡುಕಷ್ಟ.

ಏಕೆಂದರೆ ಶ್ರೇಯಸ್ ಅಯ್ಯರ್ ಬಳಗವು ಎಲ್ಲ ವಿಭಾಗಗಳಲ್ಲಿ ಉತ್ತಮವಾಗಿದೆ. ಸುನಿಲ್ ನಾರಾಯಣ, ಆ್ಯಂಡ್ರೆ ರಸೆಲ್,  ಅಂಗಕ್ರಿಷ್ ರಘುವಂಶಿ, ವೆಂಕಟೇಶ್ ಅಯ್ಯರ್,  ರಿಂಕು ಸಿಂಗ್ ಅವರು ರನ್‌ಗಳ ಹೊಳೆಯನ್ನೇ ಹರಿಸಬಲ್ಲ ಬಿರುಸಿನ ಬ್ಯಾಟರ್‌ಗಳು. ಬೆಂಗಳೂರಿನಲ್ಲಿ  ಉಭಯ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಸುನಿಲ್ ಮಿಂಚಿದ್ದರು. ಕೆಕೆಆರ್ ಜಯಿಸಿತ್ತು. 

ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿಯವರು ಮೋಡಿ ಮಾಡುವ ಚತುರರು. ಬ್ಯಾಟರ್‌ಗಳು ಇವರನ್ನು ಸಮರ್ಥವಾಗಿ ಎದುರಿಸಿದರೆ ಮಾತ್ರ ಆರ್‌ಸಿಬಿಗೆ ಗೆಲವಿನ ಅವಕಾಶ ಹೆಚ್ಚು. 

ಕೋಲ್ಕತ್ತದಲ್ಲಿ ಬಿಸಿಗಾಳಿ ಬೀಸುತ್ತಿದೆ. 41 ಡಿಗ್ರಿ ತಾಪಮಾನವೂ ಇರಬಹುದೆಂಬ ಅಂದಾಜು ಕೂಡ. ಪಂದ್ಯವು ಮಧ್ಯಾಹ್ನ ಆರಂಭವಾಗುವುದರಿಂದ ಟಾಸ್ ಗೆದ್ದ ತಂಡವು ತೆಗೆದುಕೊಳ್ಳುವ ನಿರ್ಣಯುವ ಕೂಡ ಅತ್ಯಂತ ಮಹತ್ವದ್ದಾಗಲಿದೆ. 

ಪಂದ್ಯ ಆರಂಭ: ಮಧ್ಯಾಹ್ನ 3.30

ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಸುನಿಲ್ ನಾರಾಯಣ
ಸುನಿಲ್ ನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT