ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿಯನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡದಂತೆ ಕಾರಣ ಹುಡುಕಲಾಗುತ್ತಿದೆ: ಪಾಂಟಿಂಗ್

Published 22 ಮೇ 2024, 8:06 IST
Last Updated 22 ಮೇ 2024, 8:06 IST
ಅಕ್ಷರ ಗಾತ್ರ

ಬೆಂಗಳೂರು: ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ ಅವರನ್ನು ಆಯ್ಕೆ ಮಾಡಬಾರದು ಎಂದು ಕಾರಣಗಳನ್ನು ಹುಡುಕಲಾಗುತ್ತಿದೆ ಎಂಬುದಾಗಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಹೇಳಿದ್ದಾರೆ.

ಪ್ರಸಕ್ತ ಐಪಿಎಲ್‌ನಲ್ಲಿ ಅತ್ಯುತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಕೊಹ್ಲಿ, 14 ಪಂದ್ಯಗಳಿಂದ 708 ರನ್‌ ಗಳಿಸಿದ್ದಾರೆ. ಅದರೊಂದಿಗೆ ಅವರು ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. 155ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದರೂ, ಬಿರುಸಾಗಿ ರನ್‌ ಗಳಿಸಲಾರರು ಎಂದು ಟೀಕಿಸಲಾಗುತ್ತಿದೆ. ಇದೇ ಕಾರಣಕ್ಕೆ, ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಕೊಹ್ಲಿ ಬದಲು ಬೇರೆಯವರಿಗೆ ಸ್ಥಾನ ನೀಡಬೇಕು ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆದಿತ್ತು.

ಈ ಕುರಿತು ಮಾತನಾಡಿರುವ ಪಾಂಟಿಂಗ್, 'ಭಾರತ ತಂಡದ ವಿಚಾರದಲ್ಲಿ ಕೊಹ್ಲಿಯೇ ನನ್ನ ಮೊದಲ ಆಯ್ಕೆ. ಅಂತಹ ಗುಣಮಟ್ಟ ಮತ್ತು ಅನುಭವವುಳ್ಳ ಆಟಗಾರರನ್ನು ಕೈಬಿಡಲು ಸಾಧ್ಯವೇ ಇಲ್ಲ' ಎಂದಿದ್ದಾರೆ.

ಕೊಹ್ಲಿಯನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಬಾರದು ಎಂದು ಕಾರಣಗಳನ್ನು ಹುಡುಕಲು ಅಥವಾ ಟಿ20 ಮಾದರಿಯಲ್ಲಿ ಅಷ್ಟೇನೂ ಶ್ರೇಷ್ಠರಲ್ಲ ಎಂಬುದನ್ನು ಸಾಬೀತು ಮಾಡಲು ಭಾರತದಲ್ಲಿ ಜನರು ಪ್ರಯತ್ನಿಸುತ್ತಿದ್ದಾರೆ ಎನಿಸುತ್ತದೆ. ಇದು ಹಾಸ್ಯಾಸ್ಪದ ಎಂದು ಪಾಂಟಿಂಗ್ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಇನಿಂಗ್ಸ್‌ ಆರಂಭಿಸಲಿ
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಕೊಹ್ಲಿ, ಭಾರತ ತಂಡದಲ್ಲೂ ಅದೇ ಪಾತ್ರ ಮುಂದುವರಿಸಬೇಕು. ಮುಂದಿನ ತಿಂಗಳು ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ನಾಯಕ ರೋಹಿತ್‌ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಬೇಕು ಎಂದು ಪಾಂಟಿಂಗ್‌ ಹೇಳಿದ್ದಾರೆ.

ಹೆಚ್ಚು ಎಡಗೈ ಬ್ಯಾಟರ್‌ಗಳು ಇಲ್ಲ ಎಂಬ ಕಾರಣಕ್ಕೆ ಯಶಸ್ವಿ ಜೈಸ್ವಾಲ್‌ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಿರಬಹುದು. ಆದರೆ, ಕೊಹ್ಲಿ ಮತ್ತು ರೋಹಿತ್‌ ಭಾರತ ಪರ ಇನಿಂಗ್ಸ್‌ ಆರಂಭಿಸುವುದು ಉತ್ತಮ. ಕೊಹ್ಲಿ, ಅಗ್ರ ಕ್ರಮಾಂಕದಲ್ಲಿ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಬಲ್ಲರು. ಅವರ ಸುತ್ತಲೂ ಸೂರ್ಯಕುಮಾರ್‌ ಯಾದವ್‌, ರೋಹಿತ್‌ ಶರ್ಮಾ ಅವರಂತಹ ಆಟಗಾರರು ರನ್‌ ಗತಿಯನ್ನು ಏರಿಸಬಲ್ಲರು. ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಆಡುವುದರಿಂದ ಉಳಿದವರು, ತಮ್ಮದೇ ಶೈಲಿಯಲ್ಲಿ ಆಡಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT