ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ವಿರಾಟ್‌ ದಾಖಲೆಯ ಶತಕಕ್ಕೆ ಒಲಿಯದ ಗೆಲುವು: RCBಗೆ ಸತತ ಮೂರನೇ ಸೋಲು

Published 6 ಏಪ್ರಿಲ್ 2024, 18:13 IST
Last Updated 6 ಏಪ್ರಿಲ್ 2024, 18:13 IST
ಅಕ್ಷರ ಗಾತ್ರ

ಜೈಪುರ: ಆರಂಭ ಆಟಗಾರ ಜೋಸ್‌ ಬಟ್ಲರ್ ಅವರ ಅಮೋಘ ಶತಕದ (ಔಟಾಗದೇ 100, 58ಎ, 4x9, 6x4) ಮುಂದೆ ವಿರಾಟ್‌ ಕೊಹ್ಲಿ ಅವರ ಅಜೇಯ ಶತಕದ ಆಟ ಮಸುಕಾಯಿತು. ಶನಿವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಬಟ್ಲರ್‌ ಮತ್ತು ನಾಯಕ ಸಂಜು ಸ್ಯಾಮ್ಸನ್‌ (69, 42ಎ) ಅವರ ದೊಡ್ಡ ಜೊತೆಯಾದ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಆರು ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು.

ಕೊಹ್ಲಿ ಐಪಿಎಲ್‌ನ 17ನೇ ಆವೃತ್ತಿಯಲ್ಲಿ ಮೊದಲ ಶತಕ (ಔಟಾಗದೇ 114, 72 ಎ, 4x12, 6x4) ದಾಖಲಿಸಿದ್ದು, ಬೆಂಗಳೂರು ತಂಡ 3 ವಿಕೆಟ್‌ಗೆ 183 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಆದರೆ ಎಂದಿನಂತೆ ಬೌಲರ್‌ಗಳು ಪರಿಣಾಮಕಾರಿಯಾಗಲಿಲ್ಲ. ಆತಿಥೇಯ ರಾಜಸ್ಥಾನ ತಂಡ ಐದು ಎಸೆತಗಳಿರುವಂತೆ 4 ವಿಕೆಟ್‌ಗೆ 189 ರನ್‌ ಸತತ ನಾಲ್ಕನೇ ಜಯ ದಾಖಲಿಸಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಬೆಂಗಳೂರು ತಂಡ 8ನೇ ಸ್ಥಾನದಲ್ಲೇ ಮುಂದುವರಿಯಿತು.

ಈ ಹಿಂದಿನ ಪಂದ್ಯಗಳಲ್ಲಿ ವಿಫಲರಾಗಿದ್ದ ಬಟ್ಲರ್‌ ಇಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ಗೆಲುವನ್ನು ಪೂರ್ಣಗೊಳಿಸುವ ಜೊತೆಗೆ ಶತಕವನ್ನೂ ಪೂರೈಸಿದರು. ಬಟ್ಲರ್‌ ಅವರಿಗೆ ಇದು ಐಪಿಎಲ್‌ನಲ್ಲಿ ಆರನೇ ಶತಕವಾಗಿದೆ.

ಸತತವಾಗಿ ವಿಫಲವಾಗಿರುವ ಯಶಸ್ವಿ ಜೈಸ್ವಾಲ್ (0) ಅವರನ್ನು ಎರಡನೇ ಎಸೆತದಲ್ಲೇ ಕಳೆದುಕೊಂಡ ರಾಜಸ್ಥಾನ ತಂಡ ನಂತರ 148 ರನ್‌ಗಳ ದೊಡ್ಡ ಜೊತೆಯಾಟದ ಮೂಲಕ ಗೆಲುವಿನ ಹಾದಿಯಲ್ಲಿ ಹೆಜ್ಜೆಹಾಕಿತು. ನಂತರ ಈ ಋತುವಿನ ಯಶಸ್ವಿ ಆಟಗಾರ ರಿಯಾನ್ ಪರಾಗ್ ಮತ್ತು ಧ್ರುವ್ ಜುರೇಲ್ ಅವರನ್ನು ಕಳೆದುಕೊಂಡರೂ ಗುರಿ ದೂರವಿರಲಿಲ್ಲ. ಕೊನೆಯಲ್ಲಿ ಸಿಮ್ರಾನ್ ಹೆಟ್ಮೆಯರ್ 6 ಎಸೆತದಲ್ಲಿ ಔಟಾಗದೇ 11 ರನ್‌ ಗಳಿಸಿದರು. ಆರ್‌ಸಿಬಿ ಪರ ರೀಸ್‌ ಟಾಪ್ಲಿ ಎರಡು ವಿಕೆಟ್‌ ಪಡೆದರು.

ಇದಕ್ಕೆ ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಆರ್‌ಸಿಬಿ ತಂಡ, ಈ ಋತುವಿನಲ್ಲೇ ಮೊದಲ ಬಾರಿ ಉತ್ತಮ ಆರಂಭ ಪಡೆದಿತ್ತು. ಕೊಹ್ಲಿ ಮತ್ತು ನಾಯಕ ಫಫ್‌ ಡುಪ್ಲೆಸಿ (44, 33 ಎಸೆತ) ಮೊದಲ ವಿಕೆಟ್‌ಗೆ 77 ಎಸೆತಗಳಲ್ಲಿ 125 ರನ್ ಸೇರಿಸಿದ್ದರು.

ಇದು ಐಪಿಎಲ್‌ನಲ್ಲಿ ಕೊಹ್ಲಿ ಅವರಿಗೆ ಎಂಟನೇ ಶತಕ. ವಿಶೇಷ ಎಂದರೆ ಇದು ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಐಪಿಎಲ್‌ನಲ್ಲಿ ದಾಖಲಾದ ಕೇವಲ ಎರಡನೇ ಶತಕ. ಅಜಿಂಕ್ಯ ರಹಾನೆ 2019ರಲ್ಲಿ ಡೆಲ್ಲಿ ವಿರುದ್ಧ 105 ರನ್ ಗಳಿಸಿದ್ದು ಮೊದಲನೆಯದು. 72 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿ, 4 ಸಿಕ್ಸರ್‌ಗಳನ್ನು ಬಾರಿಸಿದರು.

ಆದರೆ ಬೆಂಗಳೂರು ತಂಡದ ಧಾವಂತಕ್ಕೆ ಸ್ಪಿನ್ನರ್‌ಗಳಾದ ರವಿಚಂದ್ರನ್‌ ಅಶ್ವಿನ್ ಮತ್ತು ಚಾಹಲ್ ಜೋಡಿ ರನ್‌ ವೇಗಕ್ಕೆ ಲಗಾಮು ಹಾಕಿತು. ಅನುಭವಿ ಅಶ್ವಿನ್ ನಾಲ್ಕು ಓವರುಗಳಲ್ಲಿ 28 ರನ್ ನೀಡಿದರು. ಚಾಹಲ್ 34 ರನ್ ನೀಡಿದರೂ ಎರಡು ವಿಕೆಟ್‌ ಪಡೆದರು. ಕೊಹ್ಲಿ 67 ರನ್ ಗಳಿಸಿದ್ದಾಗ, ಅವರ ಬೌಲಿಂಗ್‌ನಲ್ಲಿ ಬರ್ಗರ್ ಅವರಿಂದ ಜೀವದಾನ ಪಡೆದಿದ್ದರು.

ಚಾಹಲ್‌ ಮಾಡಿದ್ದ 14ನೇ ಓವರ್‌ನಲ್ಲಿ ಬೌಲ್ಟ್‌ ಅವರು ಸುಲಭ ಕ್ಯಾಚ್‌ ಬಿಟ್ಟರೂ, ಡುಪ್ಲೆಸಿ, ಅದರ ಲಾಭ ಪಡೆಯಲಿಲ್ಲ. ಮರು ಎಸೆತದಲ್ಲೇ ಲಾಂಗ್‌ಆನ್‌ನಲ್ಲಿ ಬಟ್ಲರ್ ಒಳ್ಳೆಯ ಕ್ಯಾಚ್‌ ಹಿಡಿದರು.

ಆದರೆ ಕೊಹ್ಲಿ ಅವರಿಗೆ ಉಳಿದವರಿಂದ ಬೆಂಬಲ ಸಿಗಲಿಲ್ಲ. ಮ್ಯಾಕ್ಸ್‌ವೆಲ್ ಮತ್ತೊಮ್ಮೆ ವಿಫಲರಾದರು. ಒಂದೇ ರನ್‌ ಗಳಿಸಿದ ಅವರು ಬರ್ಗರ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಮೊದಲ ಪಂದ್ಯ ಆಡುವ ಅವಕಾಶ ಪಡೆದ ಸೌರವ್‌ ಚೌಹಾನ್ ಒಂದು ಸಿಕ್ಸರ್ ಎತ್ತಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. 19ನೇ ಓವರ್‌ನಲ್ಲಿ (18.4) ಕೊಹ್ಲಿ ಅವರು ಬರ್ಗರ್‌ ಬೌಲಿಂಗ್‌ನಲ್ಲಿ ಬೌಲರ್ ತಲೆಯ ಮೇಲಿಂದ ಚೆಂಡನ್ನು ಎತ್ತಿ ಒಂದು ರನ್ ಗಳಿಸಿ ಶತಕ ಪೂರೈಸಿ ಸಂಭ್ರಮಿಸಿದರು. ಇದು ಕಳೆದ ಏಳು ಐಪಿಎಲ್‌ ಇನಿಂಗ್ಸ್‌ಗಳಲ್ಲಿ ಅವರಿಗೆ ಮೂರನೇ ಶತಕ. ಕೊನೆಯ ಐದು ಓವರುಗಳಲ್ಲಿ 54 ರನ್‌ಗಳು ಬಂದವು.

‘ನಾನು ತುಂಬಾ ಆಕ್ರಮಣಕಾರಿಯಾಗಲು ಬಯಸಿರಲಿಲ್ಲ. ಬೌಲರ್‌ಗಳು ಯೋಚಿಸುವಂತೆ ಆಡಿದ್ದೆ. ಅವರು ಆಕ್ರಮಣಕಾರಿ ಆಟಕ್ಕೆ ಹೋಗಿ ನಾನು ವಿಕೆಟ್‌ ನೀಡಬಹುದೆಂದು ಯೋಚಿಸುತ್ತಿದ್ದರು’ ಎಂದು ಇನಿಂಗ್ಸ್‌ ನಂತರ ಕೊಹ್ಲಿ ಪ್ರತಿಕ್ರಿಸಿದರು.

ಕೊಹ್ಲಿ ಸದ್ಯ ಐದು ಪಂದ್ಯಗಳಿಂದ 316 ರನ್‌ ಗಳಿಸಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT