ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | ಮುಖಾಮುಖಿ ಆಗಲಿರುವ ಕಮಿನ್ಸ್‌–ಸ್ಟಾರ್ಕ್‌

ಕೆಕೆಆರ್‌– ಸನ್‌ರೈಸರ್ಸ್ ಪಂದ್ಯ ಇಂದು* ಅಯ್ಯರ್‌ಗೆ ಸತ್ವ ಪರೀಕ್ಷೆ
Published 23 ಮಾರ್ಚ್ 2024, 0:30 IST
Last Updated 23 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಕೋಲ್ಕತ್ತ: ಐಪಿಎಲ್‌ ಹರಾಜಿನಲ್ಲಿ ಅತಿ ದೊಡ್ಡ ಮೊತ್ತ ಪಡೆದ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಮಿಚೆಲ್‌ ಸ್ಟಾರ್ಕ್ ಮತ್ತು ಪ್ಯಾಟ್‌ ಕಮಿನ್ಸ್ ಶನಿವಾರ ನಡೆಯುವ ಪಂದ್ಯದಲ್ಲಿ ಮುಖಾಮುಖಿ ಆಗಿದ್ದಾರೆ. ಸ್ಟಾರ್ಕ್‌ ಕೋಲ್ಕತ್ತ ನೈಟ್‌ ರೈಡರ್ಸ್ ತಂಡದಲ್ಲಿದ್ದರೆ, ಕಮಿನ್ಸ್ ಸನ್‌ರೈಸರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯಾಳಾಗಿ ಪುನರಾಗಮನ ಮಾಡುತ್ತಿರುವ ಶ್ರೇಯಸ್‌ ಅಯ್ಯರ್‌ ಅವರ ಪ್ರದರ್ಶನದ ಮೇಲೂ ಕಣ್ಣಿರಲಿದೆ.

ಬೆನ್ನುನೋವಿನಿಂದಾಗಿ ಅಯ್ಯರ್‌ ಕಳೆದ ಋತುವಿನಲ್ಲಿ ಆಡಲು ಆಗಿರಲಿಲ್ಲ. ಈಗ ಮತ್ತೆ ತಂಡದ ನೇತೃತ್ವ ವಹಿಸಿದ್ದಾರೆ. ಇತ್ತೀಚೆಗೆ ಮುಂಬೈ ರಣಜಿ ಫೈನಲ್‌ ಗೆದ್ದ ಸಂದರ್ಭದಲ್ಲಿ ವಿದರ್ಭ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ 95 ರನ್ ಹೊಡೆದಿದ್ದರು. ಆದರೆ ಆಗಲೂ ಅವರಿಗೆ ಬೆನ್ನುನೋವು ಕಾಡಿತ್ತು.

ಹಿಂದೆ ಕೆಕೆಆರ್‌ ತಂಡದ ಯಶಸ್ವಿ ನಾಯಕ ಎನಿಸಿದ್ದ ಗೌತಮ್ ಗಂಭೀರ್‌ ಈಗ ಮೆಂಟರ್‌ ಆಗಿದ್ದಾರೆ. ನಿಪುಣ ತಂತ್ರಗಾರ ಚಂದ್ರಕಾಂತ್ ಪಂಡಿತ್‌ ಆ ತಂಡದ ಮುಖ್ಯ ಕೋಚ್‌ ಆಗಿದ್ದು ಅವರ ಪಾತ್ರವೂ ಮಹತ್ವದ್ದು.

ಸ್ಟಾರ್ಕ್‌ ಅವರನ್ನು ಕೆಕೆಆರ್‌ ತಂಡ ದಾಖಲೆಯ ಮೊತ್ತ ₹24.75 ಕೋಟಿಗೆ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈಗ ಎಡಗೈ ವೇಗದ ಬೌಲರ್ ಅದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಬೇಕಾದ  ಒತ್ತಡದಲ್ಲಿದ್ದಾರೆ. ಸ್ಟಾರ್ಕ್ ಬಿಟ್ಟರೆ ತಂಡದ ಅನುಭವಿ ಎಂದರೆ ವೆಸ್ಟ್‌ ಇಂಡೀಸ್‌ನ ಆ್ಯಂಡ್ರೆ ರಸೆಲ್‌.

ರಹಮಾನುಲ್ಲಾ ಗುರ್ಬಾಜ್‌, ಫಿಲ್‌ ಸಾಲ್ಟ್‌, ವೆಂಕಟೇಶ ಅಯ್ಯರ್, ಶ್ರೇಯಸ್‌ ಅವರಿಂದ ತಂಡದ ಬ್ಯಾಟಿಂಗ್ ಪ್ರಬಲವಾಗಿದೆ. ರಸೆಲ್ ಮತ್ತು ‘ಫಿನಿಷರ್‌’ ರಿಂಕು ಸಿಂಗ್ ಸ್ಫೋಟಕ ಆಟ ಆಡಬಲ್ಲವರು. ಆದರೆ ಸ್ಪಿನ್‌ ವಿಭಾಗದ ಸ್ವಲ್ಪ ಸೊರಗಿದೆ. ಸುನೀಲ್ ನಾರಾಯಣ್, ವರುಣ್ ಚಕ್ರವರ್ತಿ ಅವರ ಮೇಲೆ ಹೊಣೆಯಿದೆ.

ಮೇಲ್ನೋಟಕ್ಕೆ ಕೆಕೆಆರ್‌ ಗೆಲ್ಲುವ ನೆಚ್ಚಿನ ತಂಡದಂತೆ ಭಾಸವಾಗುತ್ತಿದೆ.

ಕಮಿನ್ಸ್‌, ಹರಾಜಿನಲ್ಲಿ ಎರಡನೇ ಅತಿ ಹೆಚ್ಚು (₹20.50 ಕೋಟಿ) ಪಡೆದಿದ್ದರು. ಕೆಲವು ಋತುಗಳಿಂದ ಪಾಯಿಂಟ್‌ ಪಟ್ಟಿಯ ಕೆಳಭಾಗದಲ್ಲಿ ಕಾಯಂ ಸ್ಥಾನ ಪಡೆಯುತ್ತಿರುವ ಹೈದರಾಬಾದ್ ತಂಡದ ಮನೋಬಲವನ್ನು ವೃದ್ಧಿಸಬೇಕಾದ ಸವಾಲು ಅವರ ಮುಂದಿದೆ.‌

ಆದರೆ ಕಮಿನ್ಸ್ ನಾಯಕತ್ವದ ಜೊತೆ ಟ್ರಾವಿಸ್‌ ಹೆಡ್‌, ಹೆನ್ರಿಕ್‌ ಕ್ಲಾಸೆನ್‌, ಮರ್ಕರಂ ಅವರಂಥ ಬಿರುಸಿನ ಆಟ ಆಡಬಲ್ಲ ಆಟಗಾರರು ಸನ್‌ರೈಸರ್ಸ್‌ ತಂಡದಲ್ಲಿದ್ದಾರೆ. ಕಮಿನ್ಸ್‌ ಜೊತೆಗೆ ತಂಡ ಬೌಲಿಂಗ್‌ನಲ್ಲಿ ಹಳೆ ಹುಲಿ ಭುವನೇಶ್ವರ ಕುಮಾರ್‌, ವಾಷಿಂಗ್ಟನ್ ಸುಂದರ್ ಮತ್ತು ವನಿಂದು ಹಸರಂಗ ಅವರನ್ನು ನೆಚ್ಚಿಕೊಳ್ಳಬೇಕಾಗಿದೆ. ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್‌ ಸರಣಿಯ ಪಂದ್ಯಗಳಿಗೆ ನಿಷೇಧ ಪಡೆದಿರುವ ಆಲ್‌ರೌಂಡರ್‌ ಹಸರಂಗ ಮೊದಲ ಪಂದ್ಯಕ್ಕೆ ಲಭ್ಯರಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ.

ಪಂದ್ಯ ಆರಂಭ: ರಾತ್ರಿ 7.30

ಮಿಚೆಲ್‌ ಸ್ಟಾರ್ಕ್‌
ಮಿಚೆಲ್‌ ಸ್ಟಾರ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT