ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | SRH vs CSK- ಏಡನ್ ಮರ್ಕರಂ ಅಬ್ಬರ: ಸನ್ ರೈಸರ್ಸ್‌ಗೆ ಸುಲಭ ಗೆಲುವು

Published 5 ಏಪ್ರಿಲ್ 2024, 17:53 IST
Last Updated 5 ಏಪ್ರಿಲ್ 2024, 17:53 IST
ಅಕ್ಷರ ಗಾತ್ರ

ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳ ಶಿಸ್ತಿನ ದಾಳಿ ಮತ್ತು ಏಡನ್ ಮರ್ಕರಂ ಅವರ ಅಬ್ಬರದ ಬ್ಯಾಟಿಂಗ್ ಮುಂದೆ ‘ಹಾಲಿ ಚಾಂಪಿಯನ್’ ಚೆನ್ನೈ ಸೂಪರ್ ಕಿಂಗ್ಸ್ ಮಂಡಿಯೂರಿತು.

ಉಪ್ಪಳದ ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆತಿಥೇಯ ಸನ್‌ರೈಸರ್ಸ್ ತಂಡವು 6 ವಿಕೆಟ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ಸನ್‌ರೈಸರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಪ್ಯಾಟ್ ಕಮಿನ್ಸ್ ಸೇರಿದಂತೆ ಏಳು ಮಂದಿ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಿದರು.

ಶಿವಂ ದುಬೆ (45; 24ಎ) ಮತ್ತು ರವೀಂದ್ರ ಜಡೇಜ (31; 23ಎ) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಚೆನ್ನೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 165 ರನ್ ಗಳಿಸಿತು. ಹೈದರಾಬಾದ್ ತಂಡದ ಬ್ಯಾಟಿಂಗ್ ಪಡೆಯ ಹಿಂದಿನ ಸಾಧನೆ ನೋಡಿದರೆ ಚೆನ್ನೈ ನೀಡಿರುವುದು ಸಾಧಾರಣ ಗುರಿಯಂತೆ ಕಾಣಿಸಿತು.

ಏಡನ್ ಮರ್ಕರಂ (50; 36ಎ, 4X4, 6X1) ಅವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ತಂಡವು 18.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 166 ರನ್ ಗಳಿಸಿ ಜಯಿಸಿತು. ಟೂರ್ನಿಯಲ್ಲಿ ತಂಡಕ್ಕೆ ಇದು ಎರಡನೇ ಜಯವಾಗಿದೆ.

ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅಬ್ಬರದ ಆರಂಭ ನೀಡಿದರು. ಇಬ್ಬರೂ ಸೇರಿ ಕೇವಲ 16 ಎಸೆತಗಳಲ್ಲಿ 46 ರನ್‌ ಸೇರಿಸಿದರು. ಅದರಲ್ಲಿ ಎರಡನೇ ಓವರ್‌ನಲ್ಲಿ ಅಭಿಷೇಕ್ 27 ರನ್‌ ಹೊಡೆದರು. ಮೂರನೇ ಓವರ್‌ನಲ್ಲಿ ಅಭಿಷೇಕ್ ಔಟಾದರು. ಕ್ರೀಸ್‌ಗೆ ಬಂದ ಮರ್ಕರಂ ಅಬ್ಬರಿಸಿದರು. ಟ್ರಾವಿಸ್ ಮತ್ತು ಮರ್ಕರಂ ಎರಡನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿದರು. ಇದರಿಂದಾಗಿ ಹತ್ತು ಓವರ್‌ಗಳು ದಾಟುವ ಮುನ್ನವೇ ತಂಡವು ಶತಕದ ಗಡಿ ದಾಟಿತು.

ಆದರೆ ಈ ಹಂತದಲ್ಲಿ ಸ್ಪಿನ್ನರ್ ಮೋಯಿನ್ ಅಲಿ ಮರ್ಕರಂ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ಶಾಬಾಜ್ ಅಹಮದ್ ಅವರ ವಿಕೆಟ್ ಕೂಡ ಕಬಳಿಸಿದರು. ಇದರಿಂದಾಗಿ ರನ್‌ ಗಳಿಕೆಯ ವೇಗ ಕಡಿಮೆಯಾಯಿತು. ಈ ಹಂತದಲ್ಲಿ ಒಂದಿಷ್ಟು ಚುರುಕಾದ ಫೀಲ್ಡಿಂಗ್ ಮಾಡಿದ ಚೆನ್ನೈ ಆಟಗಾರರು ಸನ್‌ರೈಸರ್ಸ್‌ ಗೆಲುವನ್ನು ಕಸಿದುಕೊಳ್ಳುವ ಯತ್ನ ಮಾಡಿದರು. ಆದರೆ ಹೆನ್ರಿಚ್ ಕ್ಲಾಸನ್ ಮತ್ತು ನಿತೀಶ್ ರೆಡ್ಡಿ ಅದಕ್ಕೆ ಆಸ್ಪದ ನೀಡಲಿಲ್ಲ.

ಉತ್ತಮ ಬ್ಯಾಟಿಂಗ್ ಪಡೆ ಇರುವ ಆತಿಥೇಯ ತಂಡಕ್ಕೆ ದೊಡ್ಡ ಮೊತ್ತದ ಗುರಿ ನೀಡದೇ ಇರುವುದು ಚೆನ್ನೈ ಸೋಲಿಗೆ ಪ್ರಮುಖ ಕಾರಣವಾಯಿತು.

ಅಜಿಂಕ್ಯ ರಹಾನೆ (35; 30ಎ), ಶಿವಂ ದುಬೆ ( 24 ಎಸೆತಗಳಲ್ಲಿ 45) ಮಧ್ಯಮ ಕ್ರಮಾಂಕದಲ್ಲಿ ಮಿಂಚಿದರು. ಶಿವಂ ನಾಲ್ಕು ಸಿಕ್ಸರ್‌ ಎತ್ತಿದ ಅವರು ಎರಡು ಬೌಂಡರಿ ಕೂಡ ಬಾರಿಸಿದರು. ಎಡಗೈ ವೇಗಿ ಟಿ. ನಟರಾಜನ್ ಹಾಕಿದ 12ನೇ ಓವರ್‌ನಲ್ಲಿ ಎರಡು ಸಿಕ್ಸರ್ ಸಹಿತ 15 ರನ್ ಸೂರೆ ಮಾಡಿದ ದುಬೆ ಮಿಂಚಿದರು.

ಆದರೆ, 14ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್‌ ಹಾಕಿದ ನಿಧಾನಗತಿಯ ಬೌನ್ಸರ್‌ನಲ್ಲಿ ಶಿವಂ ಅವರು ಫೀಲ್ಡರ್ ಭುವನೇಶ್ವರ್ ಕುಮಾರ್ ಕ್ಯಾಚ್ ಪಡೆದರು. ಅಲ್ಲಿಗೆ ಜೊತೆಯಾಟವೂ ಮುರಿದುಬಿತ್ತು. ನಂತರದ ಓವರ್‌ನಲ್ಲಿ ಅಜಿಂಕ್ಯ ಕೂಡ ಔಟಾದರು. ಇದರಿಂದಾಗಿ ತಂಡದ ರನ್‌ ವೇಗ ಕುಂಠಿತವಾಯಿತು. ಕೊನೆಯ ಐದು ಓವರ್‌ಗಳಲ್ಲಿ ಕೇವಲ 38 ರನ್‌ಗಳು ಮಾತ್ರ ಸೇರಿದವು. ಅದರಲ್ಲಿ ಜಡೇಜ ಅವರ ಕೊಡುಗೆ ಹೆಚ್ಚಿತ್ತು. ಮಹೇಂದ್ರಸಿಂಗ್ ಧೋನಿ ಎರಡು ಎಸೆತ ಎದುರಿಸಿ ಒಂದು ರನ್ ಮಾತ್ರ ಮಾಡಿದರು.

ಸ್ಕೋರ್ ಕಾರ್ಡ್

ಚೆನ್ನೈ ಸೂಪರ್‌ ಕಿಂಗ್ಸ್‌: 5ಕ್ಕೆ165 (20 ಓವರುಗಳಲ್ಲಿ)

ರವೀಂದ್ರ ಸಿ ಮರ್ಕರಂ ಬಿ ಕುಮಾರ್ 12 (9ಎ, 4x2)‌

ಋತುರಾಜ್ ಸಿ ಸಮದ್ ಬಿ ಶಾಬಾಜ್ 26 (21, 4x3, 6x1)‌

ಅಜಿಂಕ್ಯ ಸಿ ಮಾರ್ಕಂಡೆ ಬಿ ಉನದ್ಕತ್ 35 (30ಎ, 4x2, 6x1)‌

ದುಬೆ ಸಿ ಕುಮಾರ್ ಬಿ ಕಮಿನ್ಸ್ 45 (24, 4x2, 6x4)

ಜಡೇಜ ಔಟಾಗದೇ 31 (23ಎ, 4x4)

ಮಿಚೆಲ್‌ ಸಿ ಸಮದ್‌ ಬಿ ನಟರಾಜನ್‌ 13 (11ಎ, 4x1)

ಧೋನಿ ಔಟಾಗದೇ 1 (2ಎ)

ಇತರೆ: 2 (ಲೆಗ್‌ಬೈ 1, ವೈಡ್‌ 1)

ವಿಕೆಟ್ ಪತನ: 1–25 (ರಚಿನ್ ರವೀಂದ್ರ, 3.1), 2–54 (ಋತುರಾಜ್ ಗಾಯಕವಾಡ್, 7.1), 3–119 (ಶಿವಂ ದುಬೆ, 13.4), 4–127 (ಅಜಿಂಕ್ಯ ರಹಾನೆ, 14.6), 5–160 (ಡೇರಿಲ್ ಮಿಚೆಲ್‌, 19.3).

ಬೌಲಿಂಗ್‌: ಅಭಿಷೇಕ್ ಶರ್ಮಾ 1–0–7–0; ಭುವನೇಶ್ವರ ಕುಮಾರ್ 4-0-28-1; ಟಿ.ನಟರಾಜನ್ 4–0–39–1, ಪ್ಯಾಟ್‌ ಕಮಿನ್ಸ್‌ 4-0-29-1, ಮಯಂಕ್ ಮಾರ್ಕಂಡೆ 2-0-21-0, ಶಾಬಾಜ್ ಅಹ್ಮದ್ 1-0-11-1, ಜೈದೇವ್ ಉನದ್ಕತ್‌ 4-0-29-1

ಸನ್‌ರೈಸರ್ಸ್‌ ಹೈದರಾಬಾದ್: 4ಕ್ಕೆ166 (18.1 ಓವರುಗಳಲ್ಲಿ)

ಹೆಡ್‌ ಸಿ ರವೀಂದ್ರ ಬಿ ತೀಕ್ಷಣ 31 (24ಎ, 4x3, 6x1)

ಅಭಿಷೇಕ್ ಸಿ ಜಡೇಜ ಬಿ ಚಾಹರ್ 37 (12ಎ, 4x3, 6x4)

ಮರ್ಕರಂ ಎಲ್‌ಬಿಡಬ್ಲ್ಯು ಅಲಿ 50 (36ಎ, 4x4, 6x1)

ಶಾಬಾಜ್ ಎಲ್‌ಬಿಡಬ್ಲ್ಯು ಅಲಿ 18 (19ಎ, 6x1)

ಕ್ಲಾಸೆನ್‌ ಔಟಾಗದೇ 10 (11ಎ, 4x1)

ನಿತೀಶ್ ರೆಡ್ಡಿ ಔಟಾಗದೇ 14 (8ಎ, 4x1, 6x1)

ಇತರೆ:

6 (ಬೈ3, ಲೆಗ್‌ಬೈ 1, ನೋಬಾಲ್ 1, ವೈಡ್‌ 1)

ವಿಕೆಟ್ ಪತನ: 1–46 (ಅಭಿಷೇಕ್ ಶರ್ಮಾ, 2.4), 2–106 (ಹೆಡ್‌, 9.4), 3–132 (ಏಡನ್ ಮರ್ಕರಂ, 13.6), 4–141 (ಶಾಬಾಜ್ ಅಹ್ಮದ್, 15.4)

ಬೌಲಿಂಗ್‌: ದೀಪಕ್ ಚಾಹರ್ 3.1–0–32–1; ಮುಕೇಶ್ ಚೌಧರಿ 1–0–27–0, ಮಹೀಷ ತೀಕ್ಷಣ 4–0–27–1; ತುಷಾರ ದೇಶಪಾಂಡೆ 2–0–20–0; ರವೀಂದ್ರ ಜಡೇಜ 4–0–30–0, ಮೊಯಿನ್ ಅಲಿ 3–0–23–2; ರಚಿನ್ ರವೀಂದ್ರ 1–0–3–0.

ಪಂದ್ಯದ ಆಟಗಾರ: ಅಭಿಷೇಕ್ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT