ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ 12ರಿಂದ ಐಪಿಎಲ್ ಮೆಗಾ ಹರಾಜು: ಶಿಖರ್, ಶ್ರೇಯಸ್‌ಗೆ ಗರಿಷ್ಠ ಮೂಲಬೆಲೆ

ಬೆಂಗಳೂರಿನಲ್ಲಿ ಫೆ 12ರಿಂದ ಐಪಿಎಲ್ ಮೆಗಾ ಹರಾಜು: ಆಫ್‌ಸ್ಪಿನ್ನರ್ ಅಶ್ವಿನ್‌ಗೆ ₹ 2 ಕೋಟಿ ಮೂಲಬೆಲೆ
Last Updated 1 ಫೆಬ್ರುವರಿ 2022, 14:03 IST
ಅಕ್ಷರ ಗಾತ್ರ

ನವದೆಹಲಿ: ಇದೇ ತಿಂಗಳು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ಆರ್. ಅಶ್ವಿನ್ ಸೇರಿದಂತೆ ಪ್ರಮುಖ ಆಟಗಾರರು ಗರಿಷ್ಠ ಮೂಲಬೆಲೆ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.

ಇದೇ 12 ಮತ್ತು 13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಬಿಡ್ ಆಗುವ 590 ಆಟಗಾರರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಗರಿಷ್ಠ ಮೂಲಬೆಲೆಯಾದ ಎರಡು ಕೋಟಿ ರೂಪಾಯಿ ವಿಭಾಗದಲ್ಲಿ ಖ್ಯಾತನಾಮ ಆಟಗಾರರಿದ್ದಾರೆ. ಅದರಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಶಿಖರ್, ಮಧ್ಯಮಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್, ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಇದ್ದಾರೆ. ಯುವ ಆಟಗಾರರಾದ ಕರ್ನಾಟಕದ ದೇವದತ್ತ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಹೋದ ಸಲದ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಹರ್ಷಲ್ ಪಟೇಲ್, ಸ್ಪಿನ್ನರ್ ಯಜುವೇಂದ್ರ ಚಾಹಲ್, ಮಧ್ಯಮವೇಗಿ ಶಾರ್ದೂಲ್ ಠಾಕೂರ್, ಅನುಭವಿಗಳಾದ ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರು ಇದೇ ವಿಭಾಗದಲ್ಲಿದ್ದಾರೆ. ದೇಶ ಮತ್ತು ವಿದೇಶದ ಒಟ್ಟು 48 ಆಟಗಾರರು ಈ ವಿಭಾಗದಲ್ಲಿದ್ದಾರೆ. ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್ ಬೌಲ್ಟ್‌, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಮಾರ್ಷ್ ಪ್ರಮುಖರಾಗಿದ್ದಾರೆ.

ಕನ್ನಡಿಗ ರಾಬಿನ್ ಉತ್ತಪ್ಪ ಮತ್ತು ಅನುಭವಿ ಆಟಗಾರ ಸುರೇಶ್ ರೈನಾ ಕೂಡ ₹ 2 ಕೋಟಿ ಮೂಲಬೆಲೆ ವಿಭಾಗದಲ್ಲಿ ಕೊನೆಯ ಸ್ಥಾನಗಳಲ್ಲಿದ್ದಾರೆ. ಒಟ್ಟು 20 ಆಟಗಾರರು ₹ 1.5 ಕೋಟಿ ಮತ್ತು 34 ಆಟಗಾರರು ಒಂದು ಕೋಟಿ ರೂಪಾಯಿ ವಿಭಾಗದಲ್ಲಿದ್ದಾರೆ.

19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿರುವ ಯಶ್ ಧುಳ್, ವಿಕ್ಕಿ ಓಸ್ವಾಲ್ ಅವರಿಗೆ ತಲಾ ₹ 20 ಲಕ್ಷ ಮತ್ತು ರಾಜವರ್ಧನ್ ಹಂಗರಗೇಕರ್ ಅವರಿಗೆ ₹ 30 ಲಕ್ಷ ಮೂಲಬೆಲೆ ನಿಗದಿಯಾಗಿದೆ. ಅವರಿಗೆ ಉತ್ತಮ ಬೇಡಿಕೆ ಕುದುರುವ ನಿರೀಕ್ಷೆ ಇದೆ. ತಮಿಳುನಾಡಿನ ಶಾರೂಖ್ ಖಾನ್, ದೀಪಕ್ ಹೂಡಾ ಮತ್ತು ಆವೇಶ್ ಖಾನ್ ಕೂಡ ಉತ್ತಮ ಮೌಲ್ಯ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದಾರೆ.

ದಕ್ಷಿಣ ಆಫ್ರಿಕದ 42 ವರ್ಷದ ಸ್ಪಿನ್ನರ್ ಇಮ್ರಾನ್ ತಾಹೀರ್ ಬಿಡ್‌ನಲ್ಲಿರುವ ಅತಿ ಹಿರಿಯ ವಯಸ್ಸಿನ ಆಟಗಾರನಾಗಿದ್ದಾರೆ.

ಪಂಜಾಬ್‌ ಕಿಂಗ್ಸ್‌ನಲ್ಲಿ ಹೆಚ್ಚು ಸ್ಥಾನ

ಪಂಜಾಬ್ ಕಿಂಗ್ಸ್‌ ತಂಡವು 23 ಆಟಗಾರರನ್ನು ಖರೀದಿಸುವ ಅವಕಾಶ ಹೊಂದಿದೆ. ಇದು ಉಳಿದೆಲ್ಲ ತಂಡಗಳಿಗಿಂತ ಹೆಚ್ಚು. ತಂಡದ ಪರ್ಸ್‌ನಲ್ಲಿ ಅತಿ ಹೆಚ್ಚು ಹಣ (₹ 72 ಕೋಟಿ) ಕೂಡ ಹೊಂದಿದೆ. ಡೆಲ್ಲಿ ತಂಡದ ಪರ್ಸ್‌ (₹ 47.5 ಕೋಟಿ) ಅತಿ ಕಡಿಮೆ ಹಣ ಹೊಂದಿದೆ.

ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್‌, ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ತಲ 21 ಆಟಗಾರರನ್ನು ಖರೀದಿಸಲಿವೆ. ಉಳಿದ ತಂಡಗಳಲ್ಲಿ ತಲಾ 22 ಸ್ಥಾನಗಳು ತೆರವಾಗಿವೆ.

ಆಸ್ಟ್ರೇಲಿಯಾದ 47 ಆಟಗಾರರು

ವಿದೇಶಿ ಆಟಗಾರರು ದೊಡ್ಡ ಮೌಲ್ಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾದ ಆಟಗಾರರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಒಟ್ಟು 47 ಆಟಗಾರರು ಪೈಪೋಟಿಯಲ್ಲಿದ್ದಾರೆ. ವೆಸ್ಟ್ ಇಂಡೀಸ್ (34), ದಕ್ಷಿಣ ಆಫ್ರಿಕಾ (33),ಇಂಗ್ಲೆಂಡ್ (24), ನ್ಯೂಜಿಲೆಂಡ್ (24) ಶ್ರೀಲಂಕಾ (23) ಮತ್ತು ಆಫ್ಗಾನಿಸ್ಥಾನ (17) ಆಟಗಾರರೂ ಸ್ಪರ್ಧೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT