ಶುಕ್ರವಾರ, ಮಾರ್ಚ್ 24, 2023
24 °C
ಐಪಿಎಲ್ ಪ್ರಸಾರ ಹಕ್ಕುಗಳಿಗೆ ಬಂಪರ್ ಮೌಲ್ಯ

ಐಪಿಎಲ್: ₹100 ಕೋಟಿ ದಾಟಿದ ಪ್ರತಿ ಪಂದ್ಯದ ಮೌಲ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಟಿ.ವಿ. ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪಡೆಯಲು ಪೈಪೋಟಿ ಏರ್ಪಟ್ಟಿದೆ. ಇದರಿಂದಾಗಿ ನಿರೀಕ್ಷೆಗೂ ಮೀರಿದ ಮೌಲ್ಯವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೊಕ್ಕಸ ತುಂಬಲಿದೆ. 

ಪ್ರಕ್ರಿಯೆಯ ಮೊದಲ ದಿನವಾದ ಭಾನುವಾರದ ಮುಕ್ತಾಯಕ್ಕೆ ಐಪಿಎಲ್ ಟೂರ್ನಿಯ ಪ್ರತಿ ಪಂದ್ಯದ ಮೌಲ್ಯವು ₹ 100 ಕೋಟಿ ದಾಟಿತು. ಇದರಿಂದಾಗಿ ಒಟ್ಟಾರೆ ₹ 50 ಸಾವಿರ ಕೋಟಿಗೂ ಹೆಚ್ಚು ಮೌಲ್ಯವನ್ನು ಗಳಿಸುವ ನಿರೀಕ್ಷೆ ಮೂಡಿದೆ. ಭಾರತ ಉಪಖಂಡ ಮಟ್ಟದ ಪ್ರಸಾರ ಹಕ್ಕುಗಳಿಗಾಗಿ ಬಿಡ್ ನಡೆಯಿತು. ವಯಾಕಾಮ್ 18, ಡಿಸ್ನಿ ಸ್ಟಾರ್, ಸೋನಿ ಮತ್ತು ಝೀ ಮಾಧ್ಯಮ ಸಂಸ್ಥೆಗಳು ಕಣದಲ್ಲಿವೆ. 

ಏಳು ಗಂಟೆಗಳ ಪೈಪೋಟಿಯಲ್ಲಿ ಪ್ಯಾಕೇಜ್ ಎ (ಭಾರತದಲ್ಲಿ ಟಿ.ವಿ. ಹಕ್ಕುಗಳು) ಮತ್ತು ಪ್ಯಾಕೇಜ್ ಬಿ (ಭಾರತದಲ್ಲಿ ಡಿಜಿಟಲ್ ಹಕ್ಕುಗಳು) ಸೇರಿ ₹ 42 ಸಾವಿರ ಕೋಟಿಯವರೆಗೂ ಬಿಡ್‌ ವ್ಯಕ್ತವಾಗಿದೆ. ಇದು ಎರಡನೇ ದಿನವಾದ ಸೋಮವಾರ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. ಈ ಎರಡು ಪ್ಯಾಕೇಜ್‌ಗಳ ಹಕ್ಕುದಾರರು ಸೋಮವಾರ ಸಂಜೆಯ ವೇಳೆಗೆ ಹೊರಹೊಮ್ಮುವ ನಿರೀಕ್ಷೆ ಇದೆ. 

ನಂತರ ನಡೆಯುವ  ಪ್ಯಾಕೇಜ್ ಸಿ (ತಲಾ ₹ 16 ಕೋಟಿಯಂತೆ 18 ಪಂದ್ಯಗಳ ಹಕ್ಕು) ಪಡೆಯಲು ಬಿ ಪ್ಯಾಕೇಜ್ ವಿಜೇತರೂ ಅರ್ಹರಾಗಿದ್ದಾರೆ. ಪ್ಯಾಕೇಜ್ ಡಿ (ವಿದೇಶದಲ್ಲಿ ಟಿ.ವಿ. ಮತ್ತು ಡಿಜಿಟಲ್ ಪ್ರಸಾರ ಹಕ್ಕು–ಪಂದ್ಯವೊಂದಿಗೆ ₹ 3 ಕೋಟಿ) ಕೂಡ ಬಿಡ್ ಮಾಡಬಹುದು.  

‘ಇವತ್ತು ಸಂಜೆ 5.30ರವರೆಗಿನ ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯವೊಂದಕ್ಕೆ ಟಿ.ವಿ. ಹಕ್ಕುಗಳ  (ಮೂಲಬೆಲೆ: ₹49ಕೋಟಿ) ಬಿಡ್‌ ₹57 ಕೋಟಿಯವರೆಗೂ ಹೆಚ್ಚಿತು. ಡಿಜಿಟಲ್‌ನಲ್ಲಿ ₹ 33 ಕೋಟಿ ಮೂಲಬೆಲೆಯಿಂದ ₹ 48 ಕೋಟಿಗೆ ಅಚ್ಚರಿಯ ರೀತಿಯಲ್ಲಿ ಬೆಳೆಯಿತು’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಕಳೆದ ಐದು ವರ್ಷಗಳಲ್ಲಿ ಪ್ರತಿಯೊಂದು ಪಂದ್ಯಕ್ಕೆ ₹54.5 ಕೋಟಿ ಮೌಲ್ಯ ಇತ್ತು. ಆಗ ಟಿ.ವಿ. ಹಕ್ಕುಗಳನ್ನು ಮಾತ್ರ ನೀಡಲಾಗಿತ್ತು. ಈಗ ಟಿ.ವಿ. ಮತ್ತು ಡಿಜಿಟಲ್ ಒಟ್ಟಾರೆಯಾಗಿ ಪರಿಗಣಿಸಿದರೆ ₹ 100 ಕೋಟಿ (₹ 105 ಕೋಟಿ) ದಾಟಿದೆ. ಇದೊಂದು ಅಚ್ಚರಿಯ ಬೆಳವಣಿಗೆಯಾಗಿದೆ. ನಾಳೆಯೂ ಇದು ಮುಂದುವರಿಯಲಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ನಾಲ್ಕು ಬಿಡ್‌ದಾರರಲ್ಲಿ ಯಾರು ಮುಂಚೂಣಿಯಲ್ಲಿದ್ದಾರೆಂಬುದು ಸ್ಪಷ್ಟವಾಗಿಲ್ಲ. ಆದರೆ, ಡಿಜಿಟಲ್ ಹಕ್ಕುಗಳಿಗಾಗಿ ವಯಾಕಾಮ್ 18–ಉದಯಶಂಕರ್ ಕಾನ್‌ಸೊರ್ಟಿಯಂ ಮತ್ತು ಸದ್ಯ ಹಕ್ಕುಗಳನ್ನು ಹೊಂದಿರುವ ಡಿಸ್ನಿ (ಸ್ಟಾರ್‌) ಮಧ್ಯೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ. 

‘ಬಿಡ್‌ ಪ್ರಕ್ರಿಯೆಯ ಮುಕ್ತಾಯದ ವೇಳೆಗೆ ಇಂದಿನ ಮೊತ್ತಕ್ಕೆ ಹೆಚ್ಚೆಂದರೆ ಇನ್ನೂ ₹ 5500 ಕೋಟಿ ಸೇರಬಹುದು. ಇದರಿಂದಾಗಿ ₹45 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ’ ಎಂದು ಬಿಸಿಸಿಐನ ಮುಂಬೈನ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ವಿದೇಶಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ವೀಕ್ಷಕರನ್ನು ಹೊಂದಿರುವ ಝೀ ಸಮೂಹವು ಡಿ ಪ್ಯಾಕೇಜ್ ಪಡೆಯುವ ಸಾಧ್ಯತೆ ಹೆಚ್ಚಿದೆ. ಝೀ ಫೈವ್‌ ಆ್ಯಪ್ ಬಹಳಷ್ಟು ಜನಪ್ರಿಯವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು