‘ಸೂಪರ್ ಕಿಂಗ್’ ದೀಪಕ್ ಚಾಹರ್: ರಸೆಲ್ ಅರ್ಧಶತಕ ವ್ಯರ್ಥ

ಶನಿವಾರ, ಏಪ್ರಿಲ್ 20, 2019
27 °C
ಚೆಪಾಕ್ ಅಂಗಳದಲ್ಲಿ ಧೋನಿ ತಂತ್ರಕ್ಕೆ ಮೇಲುಗೈ

‘ಸೂಪರ್ ಕಿಂಗ್’ ದೀಪಕ್ ಚಾಹರ್: ರಸೆಲ್ ಅರ್ಧಶತಕ ವ್ಯರ್ಥ

Published:
Updated:
Prajavani

ಚೆನ್ನೈ: ಮಹೇಂದ್ರಸಿಂಗ್ ಧೋನಿ ಬಳಗವು ಚೆಪಾಕ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ತೋಡಿದ್ದ ಖೆಡ್ಸಾದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವು ಬಹುತೇಕ ಬಿತ್ತು. ಮಧ್ಯಮವೇಗಿ ದೀಪಕ್ ಚಾಹರ್ (20ಕ್ಕೆ3) ಅವರ ಬೌಲಿಂಗ್‌ಗೆ ಗೆಲುವು ಒಲಿಯಿತು. ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ ಆರ್ಧಶತಕ ವ್ಯರ್ಥವಾಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್‌ ಆರಂಭದಲ್ಲಿಯೇ ಯಶಸ್ಸು ಗಳಿಸಿತು.ಕೆಕೆಆರ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 108 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಸಿಎಸ್‌ಕೆ ತಂಡವು 17.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 111 ರನ್‌ ಗಳಿಸಿತು.

ದೀಪಕ್ ಚಾಹರ್‌ ಮತ್ತು ಇಮ್ರಾನ್ ತಾಹೀರ್ (21ಕ್ಕೆ2) ಅವರ ಬೌಲಿಂಗ್‌ ಮೋಡಿಗೆ ಕೆಕೆ ಆರ್ ತಂಡವು ಆರಂಭಿಕ ಹಂತದಲ್ಲಿಯೇ ಪೆಟ್ಟು ತಿಂದಿತು.  47 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತು. ಆದರೆ ಟೂರ್ನಿಯ ಆರಂಭದಿಂದಲೂ ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಅಬ್ಬರಿಸುತ್ತಿರುವ ರಸೆಲ್ ಇಲ್ಲಿ ಒಂಚೂರು ತಾಳ್ಮೆಗೆ ಮೊರೆ ಹೋಗಿದ್ದರು.

ಆದರೆ,  13ನೇ ಓವರ್‌ನಲ್ಲಿ ಇಮ್ರಾನ್ ತಾಹೀರ್ ಎಸೆತವನ್ನು ರಸೆಲ್ ಸಿಕ್ಸರ್‌ಗೆ ಹೊಡೆಯಲು  ಯತ್ನಿಸಿದರು. ಮಿಡ್‌ವಿಕೆಟ್‌ ಫೀಲ್ಡರ್ ಹರಭಜನ್ ಸಿಂಗ್ ಸುಲಭ ಕ್ಯಾಚ್‌ ಕೈಚೆಲ್ಲಿದರು. ಆಗ ತಂಡದ ಮೊತ್ತವು 6 ವಿಕೆಟ್‌ಗಳಿಗೆ 56 ಆಗಿತ್ತು. ರಸೆಲ್ 10 ಎಸೆತಗಳಿಂದ ಎಂಟು ರನ್ ಹೊಡೆದಿದ್ದರು! ನಂತರ ತಮ್ಮ ನೈಜ ಆಟಕ್ಕೆ ಕುದುರಿಕೊಂಡ ರಸೆಲ್ (ಔಟಾಗದೆ 50; 44ಎಸೆತ, 5ಬೌಂಡರಿ, 3ಸಿಕ್ಸರ್) ಅವರು ತಂಡವು ನೂರರ ಗಡಿ ದಾಟಿಸಿದರು. ಇನಿಂಗ್ಸ್‌ನ ಕೊನೆಯ ಒಂದು ಓವರ್‌ನಲ್ಲಿ ರಸೆಲ್ ಎರಡು ಬೌಂಡರಿ, ಒಂದು ಸಿಕ್ಸರ್ ಇದ್ದ 15 ರನ್‌ಗಳನ್ನು ಕೊಳ್ಳೆ ಹೊಡೆದರು. ರಸೆಲ್ ಬಿಟ್ಟರೆ ರಾಬಿನ್ ಉತ್ತಪ್ಪ (11 ರನ್), ದಿನೇಶ್ ಕಾರ್ತಿಕ್ (19 ರನ್)ಅವರಿಬ್ಬರು ಮಾತ್ರ ಎರಡಂಕಿ ಮೊತ್ತ ಗಳಿಸಿದ ಬ್ಯಾಟ್ಸ್‌ಮನ್‌ಗಳು.

ಗುರಿ ಬೆನ್ನತ್ತಿದ ಆತಿಥೇಯ ತಂಡಕ್ಕೆ ಶೇನ್ ವಾಟ್ಸನ್‌ (17ರನ್) ಮತ್ತು ಫಾಫ್ ಡು ಪ್ಲೆಸಿ (ಔಟಾಗದೆ 43; 45ಎ, 3ಬೌಂ) ಉತ್ತಮ ಆರಂಭ ನೀಡಿದರು. ಮೂರನೇ ಓವರ್‌ನಲ್ಲಿ ಶೇನ್ ಔಟಾದರು. ಸುರೇಶ್ ರೈನಾ ಕೂಡ ಐದನೇ ಓವರ್‌ನಲ್ಲಿ ನಿರ್ಗಮಿಸಿದರು. ಫಾಪ್ ಜೊತೆಗೂಡಿದ ಅಂಬಟಿ ರಾಯುಡು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 46 ರನ್‌ ಗಳಿಸಿದರು. ರಾಯುಡು ಔಟಾದಾಗ ತಂಡ ಇನ್ನೂ ನೂರರ ಗಡಿ ಮುಟ್ಟಿರಲಿಲ್ಲ. ತಾಳ್ಮೆಯಿಂದ ಆಡಿದ ಫಾಫ್ ಮತ್ತು ಕೇದಾರ್ ಜಾಧವ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !