ಬುಧವಾರ, ಅಕ್ಟೋಬರ್ 21, 2020
24 °C

IPL-2020 | ಕೆಕೆಆರ್ ವಿರುದ್ಧ ಜಯ; ಮತ್ತೆ ಅಗ್ರಸ್ಥಾನಕ್ಕೇರಿದ ಡೆಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 229 ರನ್‌ಗಳ ಬೃಹತ್‌ ಗುರಿ ಎದುರು ಕೊನೆಯವರೆಗೂ ಹೋರಾಟ ನಡೆಸಿದ ಕೋಲ್ಕತ್ತ ನೈಟ್‌ರೈಡರ್ಸ್‌ 8 ವಿಕೆಟ್‌ ಕಳೆದುಕೊಂಡು 210 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಈ ತಂಡ 18 ರನ್ ಅಂತರದ ಸೋಲು ಅನುಭವಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪೃಥ್ವಿ ಶಾ (66; 41 ಎಸೆತ, 4 ಸಿಕ್ಸರ್, 4 ಬೌಂಡರಿ), ಶ್ರೇಯಸ್ ಅಯ್ಯರ್ (ಔಟಾಗದೆ 88; 38 ಎ, 6 ಸಿ, 7 ಬೌಂ) ಮತ್ತು ರಿಷಭ್ ಪಂತ್‌ (38; 17ಎ, 1 ಸಿ, 5 ಬೌಂ) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 228 ರನ್ ‌ಗಳಿಸಿತ್ತು.

ಈ ಗುರಿ ಬೆನ್ನತ್ತಿದ ಕೆಕೆಆರ್‌ ಪರ ಆರಂಭದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಮೂಡಿ ಬರಲಿಲ್ಲ.‌ ಈ ತಂಡ 122 ಆಗುವಷ್ಟರಲ್ಲಿ ಪ್ರಮುಖ ಆರು ವಿಕೆಟ್‌ ಕಳೆದುಕೊಂಡಿತ್ತು. ಹೀಗಾಗಿ ಡೆಲ್ಲಿ ತಂಡ ಸುಲಭ ಗೆಲುವಿನ ಲೆಕ್ಕಾಚಾರದಲ್ಲಿತ್ತು. ಆದರೆ, ರಾಹುಲ್‌ ತ್ರಿಪಾಠಿ ಮತ್ತು ಎಯೋನ್ ಮಾರ್ಗನ್‌ ಅದಕ್ಕೆ ಅವಕಾಶ ನೀಡಲಿಲ್ಲ. ಈ ಜೋಡಿ 7ನೇ ವಿಕೆಟ್‌ ಜೊತೆಯಾಟದಲ್ಲಿ ಕೇವಲ 36 ಎಸೆತಗಳಲ್ಲಿ 78 ರನ್‌ ಕಲೆಹಾಕಿತು.

18 ಎಸೆತಗಳನ್ನು ಎದುರಿಸಿದ ಮಾರ್ಗನ್‌ 1 ಬೌಂಡರಿ ಮತ್ತು 5 ಸಿಕ್ಸರ್‌ ಸಹಿತ 44 ರನ್‌ ಗಳಿಸಿದರೆ, 16 ಎಸೆತಗಳನ್ನು ಆಡಿದ ತ್ರಿಪಾಠಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದ 36 ರನ್‌ ಚಚ್ಚಿದರು. ಕೊನೆಯ ಹಂತದಲ್ಲಿ ಈ ಇಬ್ಬರು ವಿಕೆಟ್‌ ಒಪ್ಪಿಸಿದ್ದು ಕೆಕೆಆರ್‌ಗೆ ಮುಳುವಾಯಿತು. ಇದಕ್ಕೂ ಮೊದಲು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ ಅರ್ಧಶತಕ (58) ಗಳಿಸಿ ಹೋರಾಟ ನಡೆಸಿದ್ದರು.

ಡೆಲ್ಲಿ ಪರ ಎನ್ರಿಚ್‌ ನೋರ್ಟ್ಜೆ 33 ರನ್‌ ನೀಡಿ 3 ವಿಕೆಟ್‌, ಹರ್ಷಲ್‌ ಪಟೇಲ್‌ 34ಕ್ಕೆ 2 ವಿಕೆಟ್ ಪಡೆದರೆ, ಕಗಿಸೊ ರಬಾಡ, ಮಾರ್ಕಸ್‌ ಸ್ಟೋಯಿನಸ್‌, ಅಮಿತ್‌ ಶಾ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಈ ಗೆಲುವಿನೊಂದಿಗೆ ಡೆಲ್ಲಿ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ತಂಡಗಳು ಕ್ರಮವಾಗಿ 2, 3 ಮತ್ತು 4ನೇ ಸ್ಥಾನಗಳಲ್ಲಿವೆ.

ಈ ಪಂದ್ಯದಲ್ಲಿ ಒಟ್ಟು 438 ರನ್‌ ಹರಿದು ಬಂದವು. ಜೊತೆಗೆ 28 ಸಿಕ್ಸರ್‌ ಮತ್ತು 30 ಬೌಂಡರಿ ದಾಖಲಾದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು