ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | SRH vs DC: ಫೈನಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್

ಕೇನ್ ವಿಲಿಯಮ್ಸನ್ ಹೋರಾಟ ವ್ಯರ್ಥ: ಸ್ಟೋಯಿನಿಸ್–ರಬಾಡ ಮಿಂಚು
Last Updated 9 ನವೆಂಬರ್ 2020, 1:39 IST
ಅಕ್ಷರ ಗಾತ್ರ
ADVERTISEMENT
""

ಅಬುಧಾಬಿ: ಅಮೋಘ ಬೌಲಿಂಗ್ ಮಾಡಿರುವ ಕಗಿಸೊ ರಬಾಡ ಮತ್ತು ಮಾರ್ಕಸ್‌ ಸ್ಟೋಯಿನಿಸ್ ಆಲ್‌ರೌಂಡ್ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್‌ನಲ್ಲಿ ಮೊದಲ ಬಾರಿ ಫೈನಲ್‌ ತಲುಪಿತು.

ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 17 ರನ್‌ಗಳಿಂದ ಸನ್‌ರೈಸರ್ಸ್ ತಂಡವನ್ನು ಡೆಲ್ಲಿಸೋಲಿಸಿತು. ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿಯು ಪ್ರಶಸ್ತಿಗಾಗಿ ಮುಂಬೈ ಇಂಡಿಯನ್ಸ್ ಎದುರು ಸೆಣಸಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾರ್ಕಸ್ ಸ್ಟೊಯಿನಿಸ್ (38; 27ಎ) ಮತ್ತು ಶಿಖರ್ ಧವನ್ (78; 50ಎ) ಉತ್ತಮ ಆರಂಭ ಕೊಟ್ಟರು. ಅವರ ಆಟದ ಬಲದಿಂದ ಡೆಲ್ಲಿ 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 189 ರನ್‌ ಗಳಿಸಿತು. ಕೇನ್ ವಿಲಿಯಮ್ಸನ್ ದಿಟ್ಟ ಹೋರಾಟದ (67; 45ಎ, 5ಬೌಂ 4ಸಿ) ಫಲವಾಗಿ ಸನ್‌ರೈಸರ್ಸ್‌ ತಂಡವು ಜಯದತ್ತ ಸಾಗಿತ್ತು. ಆದೆ 19ನೇ ಓವರ್‌ನಲ್ಲಿ ಮೂರು ವಿಕೆಟ್ ಕಿತ್ತ ರಬಾಡ ಡೆಲ್ಲಿಗೆ ಜಯದ ಕಾಣಿಕೆ ನೀಡಿದರು. ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 172 ರನ್ ಗಳಿಸಿತು.

ಗಾಯಗೊಂಡಿರುವ ವೃದ್ಧಿಮಾನ್ ಸಹಾ ಇಲ್ಲದಿರುವುದು ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ಬಲ ಕುಂದಿಸಿತು. ಪ್ರಿಯಂ ಗರ್ಗ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಕೇವಲ ಎರಡು ರನ್‌ ಗಳಿಸಿದರು. ಎರಡನೇ ಓವರ್‌ನಲ್ಲಿಯೇ ಅವರಿಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ರಬಾಡ ಯಶಸ್ವಿಯಾದರು.

ಇನ್ನೊಂದೆಡೆ ಮಾರ್ಕಸ್ ಸ್ಟೋಯಿನಿಸ್ ಅವರು ಪ್ರಿಯಂ (17) ಮತ್ತು ಮನೀಷ್ ಪಾಂಡೆ (21 ರನ್) ವಿಕೆಟ್ ಗಳಿಸಿ ಬಲವಾದ ಪೆಟ್ಟು ಕೊಟ್ಟರು. ಈ ಹಂತದಲ್ಲಿ ಗಟ್ಟಿಯಾಗಿ ನಿಂತು ಆಡಿದ ವಿಲಿಯಮ್ಸನ್ ಅರ್ಧಶತಕ ಪೂರೈಸಿದರು. ಆದರೂ ಎಸೆತಗಳು ಮತ್ತ ಅಗತ್ಯ ರನ್‌ಗಳ ಅಂತರವೂ ಹೆಚ್ಚಿತ್ತು. 12ನೇ ಓವರ್‌ನಲ್ಲಿ ಜೇಸನ್ ಹೋಲ್ಡರ್ ಔಟಾದಾಗ ತಂಡದ ಮೊತ್ತವು 100ರ ಗಡಿಯನ್ನೂ ದಾಟಿರಲಿಲ್ಲ. ಅಬ್ದುಲ್ ಸಮದ್ (33; 16ಎ) ಭರವಸೆ ಮುಡಿಸಿದರು. ಕೇನ್ ಜೊತೆಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು.

ಆದರೆ ವಿಲಿಯಮ್ಸನ್‌ ಅವರನ್ನು ಸ್ಟೋಯಿನಿಸ್ ಔಟ್ ಮಾಡಿದರು. ಸಮದ್ ಜೊತೆಗೂಡಿದ ರಶೀದ್ ಖಾನ್ (11; 7ಎ) ಭರವಸೆ ಮೂಡಿಸಿದರು. ಒಂದು ಸಿಕ್ಸರ್, ಬೌಂಡರಿ ಬಾರಿಸಿದರು. ಇದರಿಂದಾಗಿ ತಂಡವು ಜಯಿಸುವ ನಿರೀಕ್ಷೆ ಮೂಡಿತ್ತು. 19ನೇ ಓವರ್‌ನಲ್ಲಿ ರಬಾಡ ಹಾಕಿದ ಎರಡನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಸಮದ್ ನಂತರದ ಎಸೆತದಲ್ಲಿ ಔಟಾದರು. ಅವರ ಹಿಂದೆಯೇ ರಶೀದ್ ಮತ್ತು ಶ್ರೀವತ್ಸ ಗೋಸ್ವಾಮಿಯನ್ನು ರಬಾಡ ಪೆವಿಲಿಯನ್‌ಗೆ ಕಳುಹಿಸಿಕೊಟ್ಟರು!

ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಸ್‌ಪ್ರೀತ್ ಬೂಮ್ರಾ ಅವರನ್ನು ಹಿಂದಿಕ್ಕಿದ ಕಗಿಸೊ ರಬಾಡ ಪರ್ಪಲ್ ಕ್ಯಾಪ್ ಪಡೆದರು. ಈ ಪಂದ್ಯದಲ್ಲಿ ಅವರು ನಾಲ್ಕು ಮತ್ತು ಸ್ಟೋಯಿನಿಸ್ ಮೂರು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT