ಸೋಮವಾರ, ಜುಲೈ 4, 2022
21 °C

IPL-2020 | ದಾಖಲೆಯ ಗುರಿ ಬೆನ್ನಟ್ಟಿ ಗೆದ್ದ ರಾಯಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರ್ಜಾ: ಕೊನೆಯವರೆಗೂ ತೂಗುಯ್ಯಾಲೆಯಲ್ಲಿ ಸಾಗಿದ ಪಂದ್ಯವನ್ನು ರಾಜಸ್ಥಾನ್‌ ರಾಯಲ್ಸ್ ತಂಡ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು. ಇದರೊಂದಿಗೆ ಗರಿಷ್ಠ ಮೊತ್ತದ ಗುರಿ ಬೆನ್ನಟ್ಟಿ ಗೆದ್ದ ದಾಖಲೆಗೂ ಭಾಜನವಾಯಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಂಜಾಬ್‌ ಪರ ಕನ್ನಡಿಗರಾದ ಮಯಂಕ್‌ ಅಗರವಾಲ್‌ ಮತ್ತು ಕೆಎಲ್‌ ರಾಹುಲ್‌ ಉತ್ತಮ ಬ್ಯಾಟಿಂಗ್‌ ನಡೆಸಿದರು.

ಮಯಂಕ್ ವೇಗದ ಶತಕ
ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದ ಮಯಂಕ್‌ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ವೇಗವಾಗಿ ಶತಕ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿದರು. 2010ರಲ್ಲಿ ಯೂಸೂಫ್‌ ಪಠಾಣ್‌ ಮುಂಬೈ ಇಂಡಿಯನ್ಸ್‌ ವಿರುದ್ಧ 37 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಒಟ್ಟಾರೆ 56 ಎಸೆತಗಳನ್ನು ಎದುರಿಸಿದ ಮಯಂಕ್‌ 10 ಬೌಂಡರಿ ಮತ್ತು 7 ಸಿಕ್ಸರ್‌ ಸಹಿತ 106 ರನ್‌ ಗಳಿಸಿ ಔಟಾದರೆ, ನಾಯಕ ರಾಹುಲ್‌ 54 ಎಸೆತಗಳಿಂದ 7 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 69 ರನ್‌ ಬಾರಿಸಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 183 ರನ್‌ ಸೇರಿಸಿತ್ತು. ಕೊನೆಯಲ್ಲಿ ಗುಡುಗಿದ ನಿಕೋಲಸ್‌ ಪೂರನ್‌ ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್ ತಂಡದ ಮೊತ್ತವನ್ನು 223ಕ್ಕೆ ಏರಿಸಿದ್ದರು.

ಈ ಗುರಿ ಬೆನ್ನಟ್ಟಿದ ರಾಯಲ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಜಾಸ್‌ ಬಟ್ಲರ್ (4) ಬೇಗನೆ ವಿಕೆಟ್‌ ಒಪ್ಪಿಸಿದರು. ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ನಾಯಕ ಸ್ಟೀವ್‌ ಸ್ಮಿತ್ (50)‌ ಮತ್ತು ಸಂಜು ಸ್ಯಾಮ್ಸನ್‌ ಎರಡನೇ ವಿಕೆಟ್‌ಗೆ 81 ರನ್‌ ಸೇರಿಸಿದರು. ಸ್ಯಾಮ್ಸನ್‌ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 85 ರನ್‌ ಗಳಿಸಿದರು.

ತಿರುವು ನೀಡಿದ 17ನೇ ಓವರ್‌
ಸ್ಮಿತ್‌ ವಿಕೆಟ್‌ ಪತನದ ಬಳಿಕ ರಾಯಲ್ಸ್‌ ರನ್‌ ಗಳಿಕೆ ಕುಸಿದಿತ್ತು. 15 ಓವರ್‌ಗಳು ಮುಗಿದಾಗ ರಾಯಲ್ಸ್‌ 2 ವಿಕೆಟ್‌ ನಷ್ಟಕ್ಕೆ 140 ರನ್‌ ಗಳಿಸಿತ್ತು. ಆದರೆ ಕೊನೆಯ ಆರು ಓವರ್‌ಗಳಲ್ಲಿ 86 ರನ್‌ ಹರಿದು ಬಂದದ್ದರಿಂದ ಗೆಲುವು ಸಾಧ್ಯವಾಯಿತು.

21 ಎಸೆತಗಳಲ್ಲಿ 14 ರನ್‌ ಗಳಿಸಿ ಪರದಾಡುತ್ತಿದ್ದ ಆಲ್ರೌಂಡರ್ ರಾಹುಲ್‌ ತೆವಾಟಿಯಾ ಕೊನೆಯಲ್ಲಿ ಅಬ್ಬರಿಸಿದರು. ಶೇಲ್ಡನ್‌ ಕಾರ್ಟ್ರೇಲ್‌ ಎಸೆದ 17ನೇ ಓವರ್‌ನಲ್ಲಿ ಅವರು 5 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಪಂದ್ಯದ ದಿಕ್ಕು ಬದಲಿಸಿದರು. ಒಟ್ಟಾರೆಯಾಗಿ ಅವರು 31 ಎಸೆತಗಳಲ್ಲಿ 7 ಸಿಕ್ಸರ್‌ ಸಹಿತ 53 ರನ್‌ ಗಳಿಸಿದರು.

ಅಂತಿಮವಾಗಿ ರಾಯಲ್ಸ್‌ 19.3ನೇ ಓವರ್‌ನಲ್ಲಿ 226 ರನ್‌ ಗಳಿಸಿ ಜಯದ ನಗೆ ಬೀರಿತು.

ಪಂದ್ಯದಲ್ಲಿ ಪಂಜಾಬ್‌ ತಂಡದ ರವಿ ಬಿಷ್ಣೋಯಿ‌ (8.50) ಹೊರತುಪಡಿಸಿ ಎರಡೂ ತಂಡಗಳ ಉಳಿದೆಲ್ಲ ಬೌಲರ್‌ಗಳೂ 9ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು. ಇದರಿಂದಾಗಿ ಒಟ್ಟು 449 ಹರಿದು ಬಂದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು