ಭಾನುವಾರ, ನವೆಂಬರ್ 29, 2020
25 °C

IPL-2020 | RCB vs CSK: ಆರ್‌ಸಿಬಿ ವಿರುದ್ಧ ಧೋನಿ ಪಡೆಗೆ 8 ವಿಕೆಟ್‌ಗಳ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನೀಡಿದ 146 ರನ್‌ಗಳ ಸಾಧಾರಣ ಗುರಿಯನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿ ಜಯದ ನಗೆ ಬೀರಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಚಾಲೆಂರ್ಜಸ್‌ ಇನಿಂಗ್ಸ್‌ಗೆ ನಾಯಕ ಕೊಹ್ಲಿ (50) ಮತ್ತು ಎಬಿ ಡಿ ವಿಲಿಯರ್ಸ್‌ (39) ಬಲ ತುಂಬಿದ್ದರು. ನಿಧಾನಗತಿಯ ಪಿಚ್‌ನಲ್ಲಿ ರಕ್ಷಣಾತ್ಮಕವಾಗಿ ಆಡಿದ ಈ ಜೋಡಿ 3ನೇ ವಿಕೆಟ್ ಜೊತೆಯಾಟದಲ್ಲಿ 82 ರನ್ ಕಲೆಹಾಕಿತ್ತು.

ಒಂದು ಹಂತದಲ್ಲಿ ಆರ್‌ಸಿಬಿ 17 ಓವರ್‌ಗಳ ಆಟ‌ ಮುಕ್ತಾಯವಾದಾಗ 2 ವಿಕೆಟ್‌ ಕಳೆದುಕೊಂಡು 127 ರನ್ ಗಳಿಸಿತ್ತು. ಕೊಹ್ಲಿ ಮತ್ತು ವಿಲಿಯರ್ಸ್ ಕ್ರೀಸ್‌ನಲ್ಲಿ ಇದ್ದರು. ಹೀಗಾಗಿ ಈ ತಂಡ ಕೊನೆಯಲ್ಲಿ ಅಬ್ಬರಿಸುವ ಲೆಕ್ಕಾಚಾರದಲ್ಲಿತ್ತು. ಆದರೆ, ಅಂತಿಮ ಹಂತದಲ್ಲಿ ಪಾರಮ್ಯ ಮೆರೆದ ಸಿಎಸ್‌ಕೆ ಬೌಲರ್‌ಗಳು ಕೊನೆಯ ನಾಲ್ಕು ಓವರ್‌ಗಳಲ್ಲಿ ನಾ‌ಲ್ಕು ವಿಕೆಟ್‌ ಪಡೆದರು.

ವಿಲಿಯರ್ಸ್‌ 18ನೇ ಓವರ್‌ನಲ್ಲಿ ಔಟಾದರೆ, ಕೊಹ್ಲಿ ಮತ್ತು ಮೊಯಿನ್‌ ಅಲಿ 19ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಕೊನೆಯ ಓವರ್‌ನಲ್ಲಿ ಬೌಲಿಂಗ್‌ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ಅವರೂ ವಿಕೆಟ್‌ ಕೈಚೆಲ್ಲಿದರು. ಇದರಿಂದಾಗಿ ಆರ್‌ಸಿಬಿ 150ರ ಗಡಿ ದಾಟಲು ಸಾಧ್ಯವಾಗಲಿಲ್ಲ.

ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಚೆನ್ನೈಗೆ ಆರಂಭಿಕ ಫಾಫ್‌ ಡು ಪ್ಲೆಸಿ ಮತ್ತು ಋತುರಾಜ್‌ ಗಾಯಕವಾಡ್‌ ಜೋಡಿ ಮೊದಲ ವಿಕೆಟ್‌ಗೆ 46 ರನ್ ಗಳಿಸಿಕೊಟ್ಟಿತು. ಬಳಿಕ ಬಂದ ಅಂಬಟಿ ರಾಯುಡು (39), ಗಾಯಕವಾಡ್‌ ಜೊತೆ ಸೇರಿ ಎರಡನೇ ವಿಕೆಟ್‌ಗೆ 67 ರನ್ ಸೇರಿಸಿದರು. ಹೀಗಾಗಿ ಚೆನ್ನೈ ತಂಡ ಸುಲಭವಾಗಿ ಗುರಿ ಬೆನ್ನತ್ತಲು ಸಾಧ್ಯವಾಯಿತು.

51 ಎಸೆತಗಳನ್ನು ಎದುರಿಸಿದ ಗಾಯಕವಾಡ್‌ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ ಅಜೇಯ 65 ರನ್‌ ಬಾರಿಸಿದರು. ಇನ್ನೊಂದು ತುದಿಯಲ್ಲಿ ಧೋನಿ 19 ರನ್‌ ಗಳಿಸಿ ಔಟಾಗದೆ ಉಳಿದರು. ಇವರ ಆಟದ ಬಲದಿಂದ ಚೆನ್ನೈ ತಂಡ 19ನೇ ಓವರ್‌ನಲ್ಲಿಯೇ 150 ರನ್‌ ಗಳಿಸುವ ಮೂಲಕ 8 ವಿಕೆಟ್‌ಗಳ ಜಯವನ್ನಾಚರಿಸಿತು.

ಇದರೊಂದಿಗೆ ಕಿಂಗ್ಸ್‌ 12 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಸಾಧಿಸಿತು. ಬೆಂಗಳೂರು ತಂಡ 11 ಪಂದ್ಯಗಳಿಂದ 7 ಗೆಲುವು ಸಾಧಿಸಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಉಳಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು