ಮಂಗಳವಾರ, ನವೆಂಬರ್ 24, 2020
24 °C

IPL-2020 | SRH vs DC: ಸನ್‌ರೈಸರ್ಸ್‌ ‘ದ್ವಿಶತಕ’ದ ಮುಂದೆ ಮುಗ್ಗರಿಸಿದ ಡೆಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಆರಂಭಿಕ ಜೋಡಿ ಡೇವಿಡ್ ವಾರ್ನರ್, ವೃದ್ಧಿಮಾನ್ ಸಹಾ ಶತಕದ ಜೊತೆಯಾಟ ಮತ್ತು ಸ್ಪಿನ್ನರ್ ರಶೀದ್ ಖಾನ್ ಬಿಗಿ ದಾಳಿಯಿಂದಾಗಿ ಸನ್‌ರೈಸರ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 88 ರನ್‌ಗಳಿಂದ ಜಯಿಸಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ  20 ಓವರ್‌ಗಳಲ್ಲಿ 2 ವಿಕೆಟ್‌ ಗಳಿಗೆ 219 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ರಶೀದ್ ಮ್ಯಾಜಿಕ್ ಬೌಲಿಂಗ್ (4–0–7–3) ಮುಂದೆ ಕುಸಿದ ಡೆಲ್ಲಿ ತಂಡವು 19 ಓವರ್‌ಗಳಲ್ಲಿ 131 ರನ್ ಗಳಿಸಿ ಆಲೌಟ್ ಆಯಿತು.  ಐಪಿಎಲ್‌ನಲ್ಲಿ ನಾಲ್ಕು ಓವರ್‌ಗಳಲ್ಲಿ ಅತಿ ಕಡಿಮೆ ರನ್‌ಗಳನ್ನು ನೀಡಿದ ಬೌಲರ್ ಎಂಬ ಹೆಗ್ಗಳಿಕೆಗೆ ಅಫ್ಗಾನಿಸ್ತಾನದ ರಶೀದ್ ಪಾತ್ರರಾದರು.

ಈ ಜಯದೊಂದಿಗೆ ಒಟ್ಟು ಹತ್ತು ಪಾಯಿಂಟ್ಸ್‌ ಗಳಿಸಿರುವ ಸನ್‌ರೈಸರ್ಸ್ ಆರನೇ ಸ್ಥಾನಕ್ಕೇರಿದೆ. ಇನ್ನೂ ಎರಡು ಪಂದ್ಯಗಳಲ್ಲಿ ಆಡಲಿದೆ.

ವಾರ್ನರ್–ಸಹಾ ಜೊತೆಯಾಟ: ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಶ್ರೇಯಸ್ ಅಯ್ಯರ್ ಬಳಗವು  ಇದಕ್ಕಾಗಿ ಪಶ್ಚಾತ್ತಾಪ ಪಡಬೇಕಾಯಿತು. ಅದಕ್ಕೆ ಕಾರಣವಾಗಿದ್ದು ವಾರ್ನರ್ (66; 34ಎಸೆತ, 8ಬೌಂಡರಿ, 2ಸಿಕ್ಸರ್) ಮತ್ತು ಸಹಾ (87;45ಎ, 12ಬೌಂ, 2ಸಿ) ಜೊತೆಯಾಟ. ಕೇವಲ 9.4 ಓವರ್‌ಗಳಲ್ಲಿ 107 ರನ್‌ಗಳನ್ನು ಈ ಜೋಡಿ ಸೇರಿಸಿತು.

ಸ್ಪಿನ್ನರ್ ಆರ್. ಅಶ್ವಿನ್ ಓವರ್‌ನಲ್ಲಿ ವಾರ್ನರ್ ಔಟಾದಾಗ ಜೊತೆಯಾಟಕ್ಕೆ ತೆರೆಬಿತ್ತು. ಆದರೆ, ನಂತರ ಸಿಡಿದಿದ್ದು ಬೌಂಡರಿಗಳು, ಸಿಕ್ಸರ್‌ಗಳು. ಏಕೆಂದರೆ ಉತ್ತಮ ಲಯದಲ್ಲಿದ್ದ ಸಹಾ, ಮನೀಷ್ ಪಾಂಡೆ ಜೊತೆಗೂಡಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 63 ರನ್‌ಗಳನ್ನು ಸೂರೆ ಮಾಡಿದರು. ಅದಕ್ಕಾಗಿ ಇವರಿಬ್ಬರೂ ಆಡಿದ್ದು 29 ಎಸೆತಗಳನ್ನು ಮಾತ್ರ.

ಆಸ್ಟ್ರೇಲಿಯಾಕ್ಕೆ ತೆರಳಲಿರುವ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ವಿಕೆಟ್‌ಕೀಪರ್ ಸಹಾ, ತಾವು ಚುಟುಕು ಕ್ರಿಕೆಟ್‌ಗೂ ಸೈ ಎಂಬುದನ್ನು ತೋರಿಸಿಕೊಟ್ಟರು.  

15ನೇ ಓವರ್‌ನಲ್ಲಿ ಅವರು ಎನ್ರಿಕ್ ನಾಕಿಯಾ ಬೌಲಿಂಗ್‌ನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್ ಆದರು. ಕೇವಲ 13 ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಮನೀಷ್ (ಔಟಾಗದೆ 44; 31ಎ, 4ಬೌಂ, 1ಸಿ) ಮತ್ತು ಕೇನ್ ವಿಲಿಯಮ್ಸನ್ (ಔಟಾಗದೆ 11, 10ಎ) ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 49 ರನ್‌ ಸೇರಿಸಿದರು.

ರಬಾಡ ಓಟಕ್ಕೆ ಬ್ರೇಕ್‌
ಡೆಲ್ಲಿಯ ಪ್ರಮುಖ ವೇಗಿ ಕಗಿಸೊ ರಬಾಡ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್‌ ಮಾಡಿ 54 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಸತತ 25 ಇನಿಂಗ್ಸ್‌ಗಳಲ್ಲಿ ಕನಿಷ್ಠ ಒಂದಾದರೂ ವಿಕೆಟ್‌ ಪಡೆದಿದ್ದ ರಬಾಡ ಈ ಪಂದ್ಯದಲ್ಲಿ ವಿಕೆಟ್‌ ಪಡೆಯಲು ವಿಫಲರಾದರು. ಹೀಗಾಗಿ ಅವರ ದಾಖಲೆಯ ಓಟಕ್ಕೆ ಬ್ರೇಕ್‌ ಬಿದ್ದಿತು. ಉಳಿದಂತೆ ಎನ್ರಿಚ್‌ ನೋರ್ಟ್ರ್ಜೆ, ಆರ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್ ಪಡೆದರು.

ಬ್ಯಾಟಿಂಗ್‌ನಲ್ಲಿ ರಿಷಭ್ ಪಂತ್ (36 ರನ್) ಬಿಟ್ಟರೆ ಉಳಿದವರಿಂದ ಛಲದ ಆಟ ಮೂಡಿಬರಲಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು