ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020: ಹಾಲಿ ಚಾಂಪಿಯನ್ಸ್‌ಗೆ ಸೋಲುಣಿಸಿ ಪ್ಲೇ ಆಫ್ ಹಂತಕ್ಕೇರಿದ ರೈಸರ್ಸ್

Last Updated 3 ನವೆಂಬರ್ 2020, 19:18 IST
ಅಕ್ಷರ ಗಾತ್ರ
ADVERTISEMENT
""

ಶಾರ್ಜಾ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ನೀಡಿದ 150 ರನ್‌ಗಳ ಸ್ಪರ್ಧಾತ್ಮಕ ಮೊತ್ತದೆದುರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಾಹ ಜೋಡಿ ತಮ್ಮ ತಂಡಕ್ಕೆ 10 ವಿಕೆಟ್‌ ಅಂತರದ ಗೆಲುವು ತಂದುಕೊಟ್ಟಿತು. ಇದರೊಂದಿಗೆ ರೈಸರ್ಸ್‌ ತಂಡ ಸತತ ಐದನೇ ಬಾರಿಗೆ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು.

ಐಪಿಎಲ್‌–2020 ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಸನ್‌ರೈಸರ್ಸ್‌ ನಾಯಕ ಡೇವಿಡ್‌ ವಾರ್ನರ್‌ ಎದುರಾಳಿಯನ್ನು ಬ್ಯಾಟಿಂಗ್‌ ಆಹ್ವಾನಿಸಿದರು. ಇನಿಂಗ್ಸ್ ಆರಂಭಿಸಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ರೈಸರ್ಸ್‌ ಬೌಲರ್‌ಗಳು, ಚಾಂಪಿಯನ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಈ ಪಂದ್ಯದಲ್ಲಿ ಕಣಕ್ಕಿಳಿದ ನಾಯಕ ರೋಹಿತ್‌ ಶರ್ಮಾ ಕೇವಲ 4 ರನ್ ಗಳಿಸಿ ಔಟಾದರು. ತಂಡದ ಮೊತ್ತ 39 ರನ್ ಆಗುವಷ್ಟರಲ್ಲಿ ಕ್ವಿಂಟನ್‌ ಡಿ ಕಾಕ್‌ (25) ಅವರೂ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಜೊತೆಯಾದ ಸೂರ್ಯಕುಮಾರ್‌ ಯಾದವ್‌ (36) ಮತ್ತು ಇಶಾನ್ ಕಿಶನ್ (33) ಮೂರನೇ ವಿಕೆಟ್‌ಗೆ 42 ರನ್‌ ಗಳಿಸಿ ಚೇತರಿಕೆ ನೀಡಿದರು. ಆದರೆ, ಈ ಇಬ್ಬರು ಮತ್ತು ಸೌರಭ್ ತಿವಾರಿ (1) ಕೇವಲ 1 ರನ್‌ ಅಂತರದಲ್ಲಿ ವಿಕೆಟ್‌ ಒಪ್ಪಿಸಿದರು. ಇದು ದುಬಾರಿಯಾಯಿತು.

ಅನುಭವಿ ಕೀರನ್‌ ಪೊಲಾರ್ಡ್‌ ಅವರು ಕೊನೆಯಲ್ಲಿ ಜವಾಬ್ದಾರಿಯುತ ಆಟವಾಡಿದ ಕಾರಣ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 149 ರನ್‌ ಕೆಲಹಾಕಲು ಸಾಧ್ಯವಾಯಿತು.

ಪೊಲಾರ್ಡ್‌ಗೆ 3 ಸಾವಿರ ರನ್
ಮುಂಬೈ ತಂಡದ ಪರ ಈ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿದ ಪೊಲಾರ್ಡ್‌ 27 ರನ್‌ ಗಳಿಸಿದ್ದ ವೇಳೆ ಐಪಿಎಲ್‌ನಲ್ಲಿ 3 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದರು. ಇದು ಅವರಿಗೆ 162ನೇ ಪಂದ್ಯ.

ಕೇವಲ 25 ಎಸೆತಗಳನ್ನು ಎದುರಿಸಿದ ಪೊಲಾರ್ಡ್‌ 4 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 41 ರನ್ ಬಾರಿಸಿದರು.

ವಾರ್ನರ್–ಸಾಹ ಭರ್ಜರಿ ಬ್ಯಾಟಿಂಗ್
ಸ್ಪರ್ಧಾತ್ಮಕ ಗುರಿ ಎದುರು ಇನಿಂಗ್ಸ್‌ ಆರಂಭಿಸಿದ ವಾರ್ನರ್‌ ಮತ್ತು ವೃದ್ಧಿಮಾನ್ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ವಿಕೆಟ್‌ ಕಳೆದುಕೊಳ್ಳದೆ ಲೀಲಾಜಾಲವಾಗಿ ಬ್ಯಾಟ್ ‌ಬೀಸಿದ ಈ ಜೋಡಿ 17.1 ಓವರ್‌ಗಳಲ್ಲಿ 151 ರನ್‌ ಗಳಿಸುವ ಮೂಲಕ ತಮ್ಮ ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.

58 ಎಸೆತಗಳನ್ನು ಎದುರಿಸಿದ ವಾರ್ನರ್ 10 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 85 ರನ್ ಬಾರಿಸಿದರೆ, ಸಾಹ 45 ಎಸೆತಗಳಲ್ಲಿ 58ರನ್‌ ಗಳಿಸಿದರು.ಈ ಜಯದೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನ್ಕಕೇರಿದ ರೈಸರ್ಸ್‌, ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ರೈಡರ್ಸ್ಕನಸು ಛಿದ್ರ
ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ (9 ಜಯ) ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ (8 ಜಯ) ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದವು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಗಳು ತಲಾ 7 ಜಯ ಸಾಧಿಸಿ 14 ಪಾಯಿಂಟ್ಸ್‌ಗಳೊಂದಿಗೆ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದವು. ರೈಸರ್ಸ್‌ 6 ಪಂದ್ಯಗಳಲ್ಲಿ ಗೆದ್ದು 12 ಅಂಕ ಗಳಿಸಿ 5ನೇ ಸ್ಥಾನದಲ್ಲಿತ್ತು.ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ಕಾರಣ ಪಾಯಿಂಟ್ಸ್‌ ಗಳಿಕೆಯನ್ನು 14ಕ್ಕೆ ಹೆಚ್ಚಿಸಿಕೊಂಡಿತು. ಮಾತ್ರವಲ್ಲದೆ ರನ್‌ರೇಟ್‌ ಆರ್‌ಸಿಬಿ ಮತ್ತು ಕೆಕೆಆರ್‌ಗಿಂತ ಉತ್ತಮವಾಗಿರುವುದರಿಂದ ಮೂರನೇ ಸ್ಥಾನಕ್ಕೇರಿತು.

ಆರ್‌ಸಿಬಿ ನಾಲ್ಕಕ್ಕೆ ಜಾರಿದರೆ, ಪ್ಲೇ ಆಫ್‌ ಕನಸು ಕಾಣುತ್ತಿದ್ದ ಕೆಕೆಆರ್‌ 5ನೇ ಸ್ಥಾನಕ್ಕೆ ಕುಸಿಯುವುದರೊಂದಿಗೆ ಟೂರ್ನಿಯಿಂದ ಹೊರಬಿದ್ದಿತು.

ಮುಂಬೈ ಹಾಗೂ ಡೆಲ್ಲಿ ತಂಡಗಳು ನವೆಂಬರ್‌ 5ರಂದು ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್‌ಗೆ ಸಾಗಲಿದ್ದು, ಸೋಲುವ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಂದಿಗೆ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡಬಹುದಾಗಿದೆ.

ಹೈದರಾಬಾದ್ ಮತ್ತು ಬೆಂಗಳೂರು ತಂಡಗಳು ಎಲಿಮಿನೇಟರ್‌ ಪಂದ್ಯದಲ್ಲಿ (ನವೆಂಬರ್‌ 6ರಂದು) ಆಡಲಿವೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಲಿದೆ.

A look at the Road To The Final for #Dream11IPL 2020 pic.twitter.com/Zrz7Su7qa4

— IndianPremierLeague (@IPL) November 3, 2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT