ಐಪಿಎಲ್ ಆಟಗಾರರ ಮೋಜು–ಮಸ್ತಿ: ತಂಡಗಳಲ್ಲಿ ನವೋಲ್ಲಾಸ

ದುಬೈ/ಅಬುಧಾಬಿ: ಪ್ರತ್ಯೇಕವಾಸ, ಕೋವಿಡ್ ಟೆಸ್ಟ್ ಇತ್ಯಾದಿ ಸವಾಲುಗಳು ಮುಗಿದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡಗಳಲ್ಲಿ ನವೋಲ್ಲಾಸ ಮೂಡಿದೆ.
ಹಾಡು, ಕುಣಿತ, ಕೌಟುಂಬಿಕ ಪಾರ್ಟಿಗಳು ಗರಿಗೆದರಿವೆ. ಅಪ್ಪ–ಅಮ್ಮನಾಗುವ ಖುಷಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ತಂಡದ ಸಹ ಆಟಗಾರರೊಂದಿಗೆ ದುಬೈನ ಖಾಸಗಿ ಬೀಚ್‌ನಲ್ಲಿ ಮೂರು ದಿನಗಳ ಹಿಂದೆ ಮಾಡಿದ್ದ ಔತಣಕೂಟದ ವಿಡಿಯೊ ಟ್ವಿಟರ್‌ನಲ್ಲಿ ಓಡಾಡುತ್ತಿದೆ.
ಆರು ದಿನಗಳ ಕ್ವಾರಂಟೈನ್ ಪೂರೈಸಿ, ಮೂರು ಕೋವಿಡ್ ಟೆಸ್ಟ್‌ಗಳಲ್ಲಿ ನೆಗೆಟಿವ್ ವರದಿ ಬಂದ ಅಭ್ಯಾಸ ಆರಂಭಿಸಿರುವ ಕೊಹ್ಲಿ ಪಡೆಯು ಮೊದಲ ಬಾರಿಗೆ ಬೀಚ್‌ನಲ್ಲಿ ಒಂದೆಡೆ ಸೇರಿದರು. ಯಜುವೇಂದ್ರ ಚಾಹಲ್, ಉಮೇಶ್ ಯಾದವ್ ಮತ್ತಿತರರು ವಿರುಷ್ಕಾ ದಂಪತಿಗಳಿಗೆ ಶುಭ ಕೋರಿದರು. ಕೇಕ್ ಕತ್ತರಿಸಿ ಸಂಭ್ರಮಿಸಿದರು. ಯಜುವೇಂದ್ರ ಚಾಹಲ್ ನೃತ್ಯ, ಹಾಡುಗಳ ಲಹರಿ ಜೋರಾಗಿತ್ತು.
ಇನ್ನೊಂದೆಡೆ ಅಬುಧಾಬಿಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿಯೂ ಉಲ್ಲಾಸದ ಹೊಳೆ ಹರಿಯಿತು. ಭಾನುವಾರ ಸಂಜೆ ತಂಡವು ತಂಗಿರುವ ಹೋಟೆಲ್‌ನಲ್ಲಿರುವ ಫ್ಯಾಮಿಲಿ ಫನ್ ಹಾಲ್ ತೆರೆಯಲಾಗಿತ್ತು. ಟೇಬಲ್ ಟೆನಿಸ್, ಸ್ನೂಕರ್, ಹಾಡು ಮತ್ತು ಹಾಸ್ಯಸಂಜೆಗಳನ್ನು ಏರ್ಪಡಿಸಲಾಗಿತ್ತು. ಈಜುಕೊಳದ ಪಕ್ಕದ ಈ ಹಾಲ್‌ನಲ್ಲಿ ತಂಡದ ನಾಯಕ ರೋಹಿತ್ ಶರ್ಮಾ, ಅವರ ಪತ್ನಿ ರಿತಿಕಾ ಸಜ್ದೆ ಮತ್ತು ಮಗಳು, ಸೂರ್ಯಕುಮಾರ್ ಯಾದವ್ ಮತ್ತಿತರರು ಹಾಜರಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಜೊತೆಯಾಗಿ ಬಾಲಿವುಡ್ ಗೀತೆಗಳನ್ನು ಹಾಡಿ ರಂಜಿಸಿದರು.
‘ಪ್ರತ್ಯೇಕವಾಸ ಮತ್ತಿತರರ ಒತ್ತಡಗಳಿಂದ ಆಟಗಾರರು ಮುಕ್ತರಾಗಲು ಇಂತಹ ಚಟುವಟಿಕೆಗಳು ಸಹಕಾರಿ. ಆದ್ದರಿಂದ ಈ ಅವಕಾಶ ನೀಡಲಾಗಿದೆ. ಆದರೆ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಲಾಗಿದೆ’ ಎಂದು ಮುಂಬೈ ತಂಡದ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.