ಭಾನುವಾರ, ಸೆಪ್ಟೆಂಬರ್ 27, 2020
24 °C
ರಹಾನೆ–ಬಟ್ಲರ್ ಉತ್ತಮ ಜೊತೆಯಾಟ; 16 ರನ್‌ಗಳಿಗೆ ಆರು ವಿಕೆಟ್ ಉರುಳಿಸಿದ ಕಿಂಗ್ಸ್‌

ಗೇಲ್‌ ಗುಡುಗು: ಬೌಲರ್‌ಗಳ ಮಿಂಚು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಬ್ಯಾಟಿಂಗ್ ದೈತ್ಯ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಯುವ ಆಟಗಾರ ಸರ್ಫರಾಜ್ ಖಾನ್‌ ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಕ್ರಿಕೆಟ್ ಪ್ರಿಯರ ಮನಕ್ಕೆ ಲಗ್ಗೆ ಇರಿಸಿದರು.

ಐಪಿಎಲ್‌ ಟೂರ್ನಿಯ ಮೂರನೇ ದಿನ ನಡೆದ ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಇವರಿಬ್ಬರು ಅಬ್ಬರಿಸಿದರು. ಇದರ ಫಲವಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಸವಾಲಿನ ಮೊತ್ತ ಕಲೆ ಹಾಕಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೆ.ಎಲ್‌.ರಾಹುಲ್ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಗಳಿಸಿ ಭರವಸೆ ಮೂಡಿಸಿದರು. ವೇಗಿ ಧವಳ್‌ ಕುಲಕರ್ಣಿ ಹಾಕಿದ ಎಸೆತವನ್ನು ಕವರ್ಸ್‌ಗೆ ತಳ್ಳಿದ ರಾಹುಲ್ ಸುಲಭವಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಆದರೆ ನಾಲ್ಕನೇ ಎಸೆತದಲ್ಲಿ ಧವಳ್ ಸೇಡು ತೀರಿಸಿಕೊಂಡರು. ಆಫ್ ಸ್ಟಂಪ್‌ನಿಂದ ಆಚೆ ಇದ್ದ ಚೆಂಡನ್ನು ಥರ್ಡ್ ಮ್ಯಾನ್ ಕಡೆಗೆ ತಳ್ಳಲು ಪ್ರಯತ್ನಿಸಿದ ರಾಹುಲ್ ಎಡವಿದರು. ಚೆಂಡು ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರ ಕೈ ಸೇರಿತು.

ಕ್ರೀಸ್‌ಗೆ ಬಂದು ಕ್ರಿಸ್‌ ಗೇಲ್ ಜೊತೆಗೂಡಿದ ಮತ್ತೊಬ್ಬ ಕನ್ನಡಿಗ ಮಯಂಕ್ ಅಗರವಾಲ್‌ ಎರಡನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟವಾಡಿದರು. ಇದರಲ್ಲಿ ಹೆಚ್ಚಿನ ಕಾಣಿಕೆ ಇದ್ದದ್ದು ಗೇಲ್ ಅವರದ್ದು. ಮಯಂಕ್ 24 ಎಸೆತಗಳಲ್ಲಿ 22 ರನ್‌ ಗಳಿಸಿ ವಾಪಸಾದರು.

ಯುವ ಆಟಗಾರ ಸರ್ಫರಾಜ್ ಖಾನ್ ಕ್ರೀಸ್‌ಗೆ ಬಂದ ನಂತರ ರನ್‌ ಗಳಿಕೆ ಹೆಚ್ಚಾಯಿತು. ಗೇಲ್ ಮತ್ತು ಖಾನ್ ಮೂರನೇ ವಿಕೆಟ್‌ಗೆ 84 ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು 150ರ ಸಮೀಪ ತಲುಪಿಸಿದರು. ಸುಲಭವಾಗಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಗಳಿಸಿದ ಗೇಲ್‌ ಅಮೋಘ 79 (47 ಎಸೆತ, 4 ಸಿಕ್ಸರ್‌, 8 ಬೌಂಡರಿ) ರನ್‌ ಗಳಿಸಿ ಔಟಾದರು. ಅವರ ವಿಕೆಟ್ ಬೆನ್ ಸ್ಟೋಕ್ಸ್ ಪಾಲಾಯಿತು.

ಸವಾಲಿನ ಮೊತ್ತ ಬೆನ್ನತ್ತಿ ಗೆಲುವಿನ ಹಾದಿಯಲ್ಲಿದ್ದ ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬೌಲರ್‌ಗಳು ಸೋಲಿನ ಖೆಡ್ಡಾದಲ್ಲಿ ಕೆಡವಿದರು. ಇಲ್ಲಿನ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್ ಇಲೆವನ್‌ ರೋಚಕ ಗೆಲುವು ತನ್ನದಾಗಿಸಿಕೊಂಡಿತು.

185 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಯಲ್ಸ್‌ಗೆ ನಾಯಕ ಅಜಿಂಕ್ಯ ರಹಾನೆ ಮತ್ತು ಜೋಸ್ ಬಟ್ಲರ್ ಉತ್ತಮ ತಳಪಾಯ ಹಾಕಿದರು. ಮೊದಲ ವಿಕೆಟ್‌ಗೆ ಈ ಜೋಡಿ 78 ರನ್ ಸೇರಿಸಿತು. ಇವರಿಬ್ಬರು ಔಟಾದ ನಂತರ ಸಂಜು ಸ್ಯಾಮ್ಸನ್ ಮತ್ತು ಸ್ಟೀವ್ ಸ್ಮಿತ್ ಸುಲಭ ಜಯದ ನಿರೀಕ್ಷೆ ಮೂಡಿಸಿದರು. ಆದರೆ 16ನೇ ಓವರ್‌ ನಂತರ ಪಂದ್ಯ ತಿರುವು ಕಂಡಿತು. ಸ್ಯಾಮ್ ಕರನ್‌, ಮುಜೀಬ್ ಉರ್‌ ರಹಿಮಾನ್ ಮತ್ತು ಅಂಕಿತ್ ರಜಪೂತ್ ಅವರ ದಾಳಿಗೆ ಉತ್ತರಿಸಲು ಪರದಾಡಿದ ರಾಯಲ್ಸ್ ಪತನ ಕಂಡಿತು.

ನಾಲ್ಕು ಸಾವಿರ ರನ್‌ ಸರದಾರ ಗೇಲ್‌: ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಯುವ ಆಟಗಾರ ಸರ್ಫರಾಜ್ ಖಾನ್‌ (46; 29 ಎಸೆತ, 1 ಸಿಕ್ಸರ್‌, 6 ಬೌಂಡರಿ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಸವಾಲಿನ ಮೊತ್ತ ಕಲೆ ಹಾಕಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ತಂಡದ ಕೆ.ಎಲ್‌.ರಾಹುಲ್ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಗಳಿಸಿ ಭರವಸೆ ಮೂಡಿಸಿದರು. ಆದರೆ ನಾಲ್ಕನೇ ಎಸೆತದಲ್ಲಿ ಔಟಾದರು. ಧವಳ್ ಕುಲಕರ್ಣಿ ಹಾಕಿದ ಚೆಂಡನ್ನು ಥರ್ಡ್ ಮ್ಯಾನ್ ಕಡೆಗೆ ತಳ್ಳಲು ಪ್ರಯತ್ನಿಸಿದ ರಾಹುಲ್ ಎಡವಿದರು. ಚೆಂಡು ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರ ಕೈ ಸೇರಿತು.

ಕ್ರಿಸ್‌ ಗೇಲ್ ಜೊತೆಗೂಡಿದ ಮತ್ತೊಬ್ಬ ಕನ್ನಡಿಗ ಮಯಂಕ್ ಅಗರವಾಲ್‌ ಎರಡನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟವಾಡಿದರು. ಇದರಲ್ಲಿ ಹೆಚ್ಚಿನ ಕಾಣಿಕೆ ಗೇಲ್ ಅವರದಾಗಿತ್ತು. ಆರು ರನ್‌ ಗಳಿಸಿದ್ದಾಗ ಅವರು ಪಿಎಲ್‌ನಲ್ಲಿ ನಾಲ್ಕು ಸಾವಿರ ರನ್‌ಗಳ ಮೈಲುಗಲ್ಲು ದಾಟಿದರು. ವೇಗವಾಗಿ ನಾಲ್ಕು ಸಾವಿರ ರನ್‌ ಗಳಿಸಿದ ಆಟಗಾರ ಎಂದೆನಿಸಿಕೊಂಡರು.

24 ಎಸೆತಗಳಲ್ಲಿ 22 ರನ್‌ ಗಳಿಸಿ ಮಯಂಕ್ ವಾಪಸಾದ ನಂತರ ಸರ್ಫರಾಜ್ ಖಾನ್ ಕ್ರೀಸ್‌ಗೆ ಬಂದು ರನ್‌ ಗಳಿಕೆಗೆ ಚುರುಕು ತುಂಬಿದರು. ಗೇಲ್ ಜೊತೆ ಅವರು ಮೂರನೇ ವಿಕೆಟ್‌ಗೆ 84 ರನ್‌ಗಳನ್ನು ಸೇರಿಸಿದರು. ಗೇಲ್‌ ವಿಕೆಟ್‌ ಬೆನ್ ಸ್ಟೋಕ್ಸ್‌ ಪಾಲಾಯಿತು. ಸರ್ಫರಾಜ್ ಖಾನ್ ಪರಾಕ್ರಮ ನಂತರವೂ ಮುಂದುವರಿಯಿತು. ಅಂತಿಮ ಓವರ್‌ಗಳಲ್ಲಿ ಅವರನ್ನು ನಿಯಂತ್ರಿಸುಲು ಎದುರಾಳಿ ತಂಡದ ಬೌಲರ್‌ಗಳು ನಡೆಸಿದ ಪ‍್ರಯತ್ನಗಳು ಫಲ ಕಾಣಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು