ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಪಿಟಲ್ಸ್‌ಗೆ ಸಾಟಿಯಾಗುವುದೇ ‘ಸನ್‌’?

ಶ್ರೇಯಸ್ ಅಯ್ಯರ್‌, ಪಂತ್ ಆಕರ್ಷಣೆ; ಮನೀಷ್ ಪಾಂಡೆ ಮೇಲೆ ನಿರೀಕ್ಷೆಯ ಭಾರ
Last Updated 7 ಮೇ 2019, 19:48 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಗೆದ್ದರೆ ಮತ್ತೊಂದು ಸವಾಲಿಗೆ ಸಜ್ಜಾಗುವ ಅವಕಾಶ. ಸೋತರೆ ಹೊರನಡೆಯಬೇಕಾದ ಅನಿವಾರ್ಯ ಸ್ಥಿತಿ...

ಇಲ್ಲಿ ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಫೈನಲ್ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಗೆದ್ದೇ ತೀರಬೇಕು. ಇಲ್ಲಿ ಸೋತವರು ಟೂರ್ನಿಯಿಂದ ಹೊರಬೀಳಲಿದ್ದು ಗೆದ್ದವರಿಗೆ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡುವ ಅವಕಾಶವಿದೆ.

ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಟೂರ್ನಿಯುದ್ದಕ್ಕೂ ಉತ್ತಮ ಸಾಮರ್ಥ್ಯ ತೋರಿದೆ. ಲೀಗ್ ಹಂತದಲ್ಲಿ ಸನ್‌ರೈಸರ್ಸ್‌ಗಿಂತ ಮೂರು ಪಂದ್ಯಗಳನ್ನು ಹೆಚ್ಚುವರಿಯಾಗಿ ಗೆದ್ದಿರುವುದರಿಂದ ಭರವಸೆಯಿಂದಲೇ ಕ್ಯಾಪಿಟಲ್ಸ್ ಕಣಕ್ಕೆ ಇಳಿಯಲಿದೆ. ತವರಿನ ಪ್ರೇಕ್ಷಕರ ಬೆಂಬಲವನ್ನು ಸದುಪಯೋಗಪಡಿಸಿಕೊಳ್ಳಲು ಸನ್‌ರೈಸರ್ಸ್‌ ಪ್ರಯತ್ನಿಸಲಿದೆ.

ಡೇವಿಡ್ ವಾರ್ನರ್ ಮತ್ತು ಜಾನಿ ಬೇಸ್ಟೊ ವಿಶ್ವಕಪ್ ಸಿದ್ಧತೆಗಾಗಿ ತವರಿಗೆ ಮರಳಿರುವುದರಿಂದ ಸನ್‌ರೈಸರ್ಸ್‌ನ ಶಕ್ತಿ ಕುಂದಿದೆ. ಹೀಗಾಗಿ ತಂಡದ ಬ್ಯಾಟಿಂಗ್ ವಿಭಾಗದ ಭಾರ ನಾಯಕ ಕೇನ್ ವಿಲಿಯಮ್ಸನ್ ಮತ್ತು ಮಧ್ಯಮ ಕ್ರಮಾಂಕದ ಮನೀಷ್ ಪಾಂಡೆ ಹೆಗಲ ಮೇಲಿದೆ.

ಡೆಲ್ಲಿ ತಂಡ (ಈ ಹಿಂದೆ ಡೆಲ್ಲಿ ಡೇರ್ ಡೆವಿಲ್ಸ್‌) ಒಮ್ಮೆಯೂ ಐಪಿಎಲ್‌ನ ಫೈನಲ್ ಪ್ರವೇಶಿಸಲಿಲ್ಲ. ಅಗ್ರ ಎರಡರಲ್ಲೂ ಸ್ಥಾನ ಗಳಿಸಲಿಲ್ಲ. 2012ರಲ್ಲಿ ಅಗ್ರ ನಾಲ್ಕರಲ್ಲಿದ್ದದ್ದೇ ತಂಡದ ಶ್ರೇಷ್ಠ ಸಾಧನೆ. ಆರಂಭಿಕ ಜೋಡಿ ಶಿಖರ್‌ ಧವನ್‌ ಮತ್ತು ಪೃಥ್ವಿ ಶಾ ಡೆಲ್ಲಿ ತಂಡದ ಬ್ಯಾಟಿಂಗ್‌ಗೆ ಉತ್ತಮ ತಳಪಾಯ ಹಾಕಿಕೊಟ್ಟಿದ್ದಾರೆ. ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್‌ ಮತ್ತು ರಿಷಭ್ ಪಂತ್‌ ಅನೇಕ ಪಂದ್ಯಗಳಲ್ಲಿ ಸಂದರ್ಭೋಚಿತವಾಗಿ ಆಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ವೇಗಿ ಕಗಿಸೊ ರಬಾಡ ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಆದರೆ ಟ್ರೆಂಟ್ ಬೌಲ್ಟ್‌ ಹಾಗೂ ಇಶಾಂತ್ ಶರ್ಮಾ ಈ ಕೊರತೆಯನ್ನು ನೀಗಿಸಲು ಸಮರ್ಥರಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್‌–ಅಮಿತ್ ಮಿಶ್ರಾ ಜೋಡಿ ಕೂಡ ತಂಡದ ಭರವಸೆ ಎನಿಸಿದ್ದಾರೆ.

ಸನ್‌ರೈಸರ್ಸ್ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಭುವನೇಶ್ವರ್ ಕುಮಾರ್‌ ಮತ್ತು ಖಲೀಲ್ ಅಹಮ್ಮದ್ ಎಂಥ ಬ್ಯಾಟ್ಸ್‌ಮನ್‌ಗಳನ್ನೂ ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ರಶೀದ್ ಖಾನ್ ಮತ್ತು ಮೊಹಮದ್ ನಬಿ ಸ್ಪಿನ್ ವಿಭಾಗವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಆಲ್‌ರೌಂಡರ್ ವಿಜಯ ಕುಮಾರ್‌ ಕೂಡ ತಂಡಕ್ಕೆ ಆಸರೆಯಾಗಿದ್ದಾರೆ.

ತಂಡಗಳು:

ಸನ್‌ರೈಸರ್ಸ್‌ ಹೈದರಾಬಾದ್‌: ಕೇನ್ ವಿಲಿಯಮ್ಸನ್‌ (ನಾಯಕ), ವೃದ್ಧಿಮಾನ್ ಸಹಾ, ಮಾರ್ಟಿನ್ ಗಪ್ಟಿಲ್, ಮನೀಷ್ ಪಾಂಡೆ, ವಿಜಯಶಂಕರ್‌, ಯೂಸುಫ್ ಪಠಾಣ್‌, ಮೊಹಮದ್ ನಬಿ, ರಶೀದ್ ಖಾನ್, ಭುವನೇಶ್ವರ ಕುಮಾರ್, ಖಲೀಲ್ ಅಹಮ್ಮದ್‌.

ಡೆಲ್ಲಿ ಕ್ಯಾಪಿಟಲ್ಸ್‌: ಶ್ರೇಯಸ್ ಅಯ್ಯರ್‌ (ನಾಯಕ), ಪೃಥ್ವಿ ಶಾ, ಶಿಖರ್ ಧವನ್‌, ರಿಷಭ್‌ ಪಂತ್‌, ಕಾಲಿನ್ ಇಂಗ್ರಮ್‌, ಶೇರ್ಫಾನೆ ರೂದರ್‌ಫಾರ್ಡ್‌, ಕೀಮೊ ಪೌಲ್‌, ಅಕ್ಷರ್ ಪಟೇಲ್‌, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಟ್ರೆಂಟ್ ಬೌಲ್ಟ್‌.

ಪಂದ್ಯ ಆರಂಭ: 7.30

ಸ್ಥಳ: ವಿಶಾಖಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT