ಶುಕ್ರವಾರ, ಜುಲೈ 30, 2021
22 °C

ಸೆಪ್ಟೆಂಬರ್‌ನಲ್ಲಿ ಐಪಿಎಲ್ ಸರಣಿ ಪುನರಾರಂಭ: 3 ವಾರ ಟೂರ್ನಿಗೆ ಬಿಸಿಸಿಐ ಸಜ್ಜು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯು ಸೆಪ್ಟೆಂಬರ್ 18 ಅಥವಾ 19 ರಂದು ಯುಎಇಯಲ್ಲಿ ಪುನರಾರಂಭಗೊಳ್ಳಲಿದ್ದು, ಮೂರು ವಾರಗಳ ಸರಣಿಯಲ್ಲಿ 10 ದಿನಗಳ ಕಾಲ ಎರಡೆರಡು ಪಂದ್ಯಗಳನ್ನು ಆಯೋಜಿಸುವ ನಿರೀಕ್ಷೆ ಇದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ.

ಫೈನಲ್ ಪಂದ್ಯವು ಅಕ್ಟೋಬರ್ 9 ಅಥವಾ 10 ರಂದು ನಡೆಯಬಹುದು. ಈ ಋತುವಿನ ಉಳಿದ 31 ಪಂದ್ಯಗಳನ್ನು ಪೂರ್ಣಗೊಳಿಸಲು ಮೂರು ವಾರಗಳ ಸಮಯ ಸಾಕಾಗಲಿದೆ ಎಂದು ಅವರು ಹೇಳಿದ್ದಾರೆ.

ಬಯೊಬಬಲ್‌ನಲ್ಲಿದ್ದ ಹಲವು ಆಟಗಾರರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ಬಳಿಕ ಮೇ 4ರಂದು ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗಿತ್ತು.

ಈ ಬಗ್ಗೆ ‘ಬಿಸಿಸಿಐ ಸಂಬಂಧಿಸಿದ ಎಲ್ಲರ ಜೊತೆ ಮಾತನಾಡಿದೆ. ಸೆಪ್ಟೆಂಬರ್ 18 ರಿಂದ 20 ರ ನಡುವೆ ಪಂದ್ಯಾವಳಿ ಪ್ರಾರಂಭವಾಗಬಹುದು. ಸೆಪ್ಟೆಂಬರ್ 18 ಮತ್ತು 19 ಕ್ರಮವಾಗಿ ಶನಿವಾರ ಮತ್ತು ಭಾನುವಾರ ಆಗಿರುವುದರಿಂದ, ವಾರಾಂತ್ಯದಂದು ಪಂದ್ಯಾವಳಿಯನ್ನು ಮರು ಆರಂಭಿಸಲು ಬಯಸುತ್ತಿದ್ದೇವೆ,’ ಎಂದು ಹೇಸರೇಳಲಿಚ್ಛಿಸದ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಒದಿ.. ಎಂಟು ದಿನ ಬಯೊಬಬಲ್‌ನಲ್ಲಿ ವಾಸ: ಭಾರತ ಕ್ರಿಕೆಟ್ ತಂಡಗಳ ಕ್ವಾರಂಟೈನ್ ಆರಂಭ

‘ಅದೇ ರೀತಿ, ಅಕ್ಟೋಬರ್ 9 ಅಥವಾ 10 ರಂದು ವಾರಾಂತ್ಯದಲ್ಲಿ ಫೈನಲ್ ನಡೆಸಲು ಉದ್ದೇಶಿಸಲಾಗಿದೆ. ಈ ಕುರಿತ ವಿವರವನ್ನು ಅಂತಿಮಗೊಳಿಸುತ್ತಿದ್ದೇವೆ. 10 ಡಬಲ್ ಹೆಡರ್, ಏಳು ಸಂಜೆ ಪಂದ್ಯಗಳು ಮತ್ತು ನಾಲ್ಕು ಪ್ರಮುಖ ಪಂದ್ಯಗಳೊಂದಿಗೆ (ಎರಡು ಕ್ವಾಲಿಫೈಯರ್ ಪಂದ್ಯಗಳು, ಒಂದು ಎಲಿಮಿನೇಟರ್ ಮತ್ತು ಫೈನಲ್) 31 ಪಂದ್ಯಗಳ ಪಟ್ಟಿ ಪೂರ್ಣಗೊಳ್ಳುತ್ತದೆ ’ ಎಂದು ಅಧಿಕಾರಿ ಹೇಳಿದ್ದಾರೆ.

ಸೆಪ್ಟೆಂಬರ್ 14 ರಂದು ಮ್ಯಾಂಚೆಸ್ಟರ್‌ನಲ್ಲಿ ಭಾರತ ತಂಡದ ಕೊನೆಯ ಟೆಸ್ಟ್ ಪಂದ್ಯ ಮುಗಿಯಲಿದೆ. ಮರುದಿನ ಇಡೀ ತಂಡವನ್ನು (ಹನುಮಾ ವಿಹಾರಿ ಮತ್ತು ಅಭಿಮನ್ಯು ಈಶ್ವರನ್ ಅವರನ್ನು ಬಿಟ್ಟು) ಯುಎಇಗೆ ಚಾರ್ಟರ್ಡ್ ಫ್ಲೈಟ್‌ ಮೂಲಕ ‘ಬಬಲ್ ಟು ಬಬಲ್’ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

‘ಭಾರತೀಯ ತಂಡ ಮತ್ತು ಲಭ್ಯವಿರುವ ಇಂಗ್ಲಿಷ್ ಆಟಗಾರರು ಮ್ಯಾಂಚೆಸ್ಟರ್‌ನಿಂದ ದುಬೈಗೆ ಒಂದೇ ಚಾರ್ಟರ್ ವಿಮಾನದಲ್ಲಿ ಪ್ರಯಾಣ ನಡೆಸಲಿದ್ದಾರೆ. ಅದೇ ರೀತಿ, ಕೆರಿಬಿಯನ್ ಪ್ರೀಮಿಯರ್ ಲೀಗ್ ಪೂರ್ಣಗೊಳಿಸಿದ ನಂತರ ವೆಸ್ಟ್ ಇಂಡೀಸ್ ಆಟಗಾರರು ಸಹ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಯುಕೆ ಮತ್ತು ಕೆರಿಬಿಯನ್‌ನಿಂದ ಆಗಮಿಸುವ ಆಟಗಾರರಿಗೆ ಮೂರು ದಿನಗಳ ಕ್ವಾರಂಟೈನ್ ಇರುತ್ತದೆ’ಎಂದು ಮೂಲಗಳು ತಿಳಿಸಿವೆ.

ಈ ವಿಷಯದ ಬಗ್ಗೆ ಬಿಸಿಸಿಐನಿಂದ ಮಾಹಿತಿ ಬಂದಿದೆ ಎಂದು ಫ್ರ್ಯಾಂಚೈಸಿಯೊಂದರ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

‘ಟೂರ್ನಮೆಂಟ್‌ಗೆ ಸಿದ್ಧರಾಗಿರಲು ಬಿಸಿಸಿಐ ನಮಗೆ ತಿಳಿಸಿದೆ. ಸೆಪ್ಟೆಂಬರ್ 15 ರಿಂದ 20 ರ ಅವಧಿಯನ್ನು ನಮಗೆ ನೀಡಲಾಗಿದೆ’ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ರದ್ದು: ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಬೇಕಾಗಿದ್ದ ಟಿ20 ಸರಣಿಯನ್ನು ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಟಿ20 ವಿಶ್ವಕಪ್ ಟೂರ್ನಿಯ ಸಿದ್ಧತೆಗೆ ಈ ಸರಣಿ ಅನುಕೂಲ ಎಂದೆನಿಸಲಾಗಿತ್ತು.  

‘ವಿಶ್ವಕಪ್ ಸಿದ್ಧತೆಗೆ ಐಪಿಎಲ್‌ಗಿಂತ ಉತ್ತಮ ಟೂರ್ನಿ ಯಾವುದೂ ಇಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಮುಂದೆ ಯಾವತ್ತಾದರೂ ಆಯೋಜಿಸಬಹುದು‘ ಎಂದು ಅಧಿಕಾರಿ ಹೇಳಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್ ಸರಣಿ ಮುಂದೂಡುವ ಸಾಧ್ಯತೆ: ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ಎದುರು ನವೆಂಬರ್‌ನಲ್ಲಿ ಆಡಬೇಕಿರುವ ಟೆಸ್ಟ್ ಸರಣಿಯ ವೇಳಾಪಟ್ಟಿಯೂ ಬದಲಾಗುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು