ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಕ್ರಿಕೆಟಿಗನ ಜೀವನಗಾಥೆ | ಕೈಗಳಿಲ್ಲದಿದ್ದರೂ ಕುಗ್ಗದ ಆಮಿರ್‌ ಹುಸೇನ್ ಲೋನ್

Published 10 ಫೆಬ್ರುವರಿ 2024, 23:30 IST
Last Updated 10 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಜಮ್ಮು–ಕಾಶ್ಮೀರದ ಪ್ಯಾರಾ ಕ್ರಿಕೆಟಿಗ ಆಮಿರ್‌ ಹುಸೇನ್ ಲೋನ್ ಅವರು ಅಪಘಾತವೊಂದರಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರು. ಜೀವನದಲ್ಲಿ ಎದುರಾದ ಕಷ್ಟಗಳೆಲ್ಲವನ್ನೂ ದಿಟ್ಟತನದಿಂದ ಎದುರಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ಇವರು ಇದೀಗ ಉದ್ಯಮಿ ಗೌತಮ್ ಅದಾನಿ ಸೇರಿದಂತೆ ಹಲವು ಖ್ಯಾತನಾಮರ ಗಮನ ಸೆಳೆದಿದ್ದಾರೆ. ಆಮಿರ್‌ ಅವರ ಜೀವನಗಾಥೆಯ ಬಯೋಪಿಕ್ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ಅವರ ಜೀವನದ ಕಥೆಯನ್ನು ಅವರಿಂದಲೇ ಕೇಳೋಣ ಬನ್ನಿ

ನಾನು ಕ್ರಿಕೆಟ್ ಆಟಗಾರನಾಗುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಎರಡು ಕೈಗಳೇ ಇಲ್ಲದ ನಾನು ಆಡುವುದು ದೂರದ ಮಾತು ಎಂದು ಹೇಳಿದವರೇ ಹೆಚ್ಚು. ಆದರೆ ಇವತ್ತು ನಾನು ಜಮ್ಮು–ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ. ಭುಜ ಮತ್ತು ಕುತ್ತಿಗೆಯ ನಡುವೆ ಬ್ಯಾಟ್‌ ಹಿಡಿದು ಆಡುವ ಮತ್ತು ಕಾಲಿನಿಂದ ಬೌಲಿಂಗ್ ಮಾಡುವ ನನ್ನ ಆಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಹರಭಜನ್ ಸಿಂಗ್, ಆಶಿಶ್ ನೆಹ್ರಾ, ವಿರಾಟ್ ಕೊಹ್ಲಿ ಮತ್ತು ಅಜಯ್ ಜಡೇಜ ಅವರಂತಹ ಖ್ಯಾತನಾಮ ಕ್ರಿಕೆಟಿಗರೂ ನನ್ನ ಆಟ ನೋಡಿ ಬೆರಗಾಗಿದ್ದಾರೆ. ಇತ್ತೀಚೆಗಷ್ಟೇ ಉದ್ಯಮಿ ಗೌತಮ್ ಅದಾನಿಯವರೂ ‘ಎಕ್ಸ್‌’ ಮೂಲಕ ನೆರವಿನ ಹಸ್ತ ಚಾಚುವುದಾಗಿ ಭರವಸೆ ನೀಡಿದ್ದಾರೆ. ಇದೆಲ್ಲದರಿಂದ ಅರಿವಾಗಿದ್ದಿಷ್ಟೇ. ಸಾಧಿಸುವ ಛಲ ಮತ್ತು ಬದ್ಧತೆಗಳಿದ್ದರೆ ಯಾವುದೂ ಅಸಾಧ್ಯವಲ್ಲ. ಅಂಗವೈಕಲ್ಯ ಏನೇ ಇದ್ದರೂ ಜಯಿಸಿಬಿಡಬಹುದು. ದೃಢ ಮನಸ್ಸು ಇದ್ದಲ್ಲಿ ದೇವರ ದಯೆಯೂ ಇರುತ್ತದೆ. ಮರದಿಂದ ಆಕ್ರೋಟ್ ಬೀಳಿಸುವುದನ್ನು ಕಲಿತೆ, ಬಾತುಕೋಳಿ ಈಜುವುದನ್ನು ನೋಡಿ ನಾನೂ ಈಜಿದೆ. ಚಹಾ ಮಾಡುವುದನ್ನು, ಬಟ್ಟೆ ಹಾಕಿಕೊಳ್ಳುವುದನ್ನು ಹಟಹಿಡಿದು ಕಲಿತೆ.

ಆದರೆ, ನಾನು ಕ್ರಿಕೆಟಿಗನಾಗಬೇಕೆಂದು ಅನಿಸಿದ್ದು 11–12 ವರ್ಷದವನಿದ್ದಾಗ. ಅದೊಂದು ದಿನ ಪಕ್ಕದ ಮನೆಯಲ್ಲಿ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದೆ. ಆದರೆ ಆ ಮನೆಯವರು ಟಿ.ವಿ ಆಫ್‌ ಮಾಡಿ ‘ಮ್ಯಾಚ್ ಮುಗೀತು ಮನೆಗ್ಹೋಗು’ ಎಂದು ಹೊರಹಾಕಿದರು. ನಾನು ಹೊಸ್ತಿಲು ದಾಟಿ ಬಂದ ತಕ್ಷಣವೇ ಆನ್ ಮಾಡಿದರು. ಸದ್ದು ಕೇಳಿತು. ಬಹಳ ಬೇಸರವಾಯಿತು. ಆದರೆ ಅವರ ಮನೆಯ ಕಿಟಕಿ ಮೂಲಕ ಇಣುಕಿದೆ. ಟಿ.ವಿ ಪರದೆಯಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಕಾಣಿಸತೊಡಗಿತು. ತುದಿಗಾಲಿನಲ್ಲಿ ನಿಂತು ನೋಡಿದೆ. ನನಗೂ ಸಚಿನ್ ಅವರಂತೆ ಬ್ಯಾಟಿಂಗ್ ಮಾಡುವ ಆಸೆ ಚಿಗುರಿತು. ಮನದೊಳಗೇ ಹೆಮ್ಮರವಾಗಿ ಬೆಳೆಯತೊಡಗಿತು.

ಮನೆಗೆ ಬಂದವನೇ, ಅಜ್ಜಿಗೆ ಕ್ರಿಕೆಟ್ ಆಡಲು ಬಾ ಎಂದು ಕರೆದೆ. ನಗುತ್ತ ಚೆಂಡು ಹಾಕಿದರು. ಬ್ಯಾಟ್‌ ತೆಗೆದುಕೊಂಡು ಆಡಲು ಪ್ರಯತ್ನಿಸಿದೆ. ಹೇಗೆ ಆಡುವುದೆಂದೇ ಗೊತ್ತಾಗಲಿಲ್ಲ. ದಿನವೂ ಅಭ್ಯಾಸಕ್ಕಿಳಿದೆ. ಕಾಲಿನಿಂದ ಚೆಂಡು ಒಗೆಯುವುದನ್ನು ರೂಢಿಸಿಕೊಂಡೆ. ಹೊರಗೆ ಆಡಲು ಅವಕಾಶವಿರಲಿಲ್ಲ. ಬೇರೆ ಹುಡುಗರು ನನ್ನ ಸಮೀಪಕ್ಕೂ ಬರುತ್ತಿರಲಿಲ್ಲ ಮತ್ತು ನಿಂದಿಸುತ್ತಿದ್ದರು. ನನ್ನ ಆಸಕ್ತಿ ನೋಡಿದ್ದ ಶಿಕ್ಷಕರೊಬ್ಬರು, ಒಂಬತ್ತನೇ ತರಗತಿಯಲ್ಲಿದ್ದಾಗ ಶೂ, ಬಟ್ಟೆ ಕೊಡಿಸುವುದಾಗಿ ಹೇಳಿದರು. ಆದರೆ ಸ್ವಾಭಿಮಾನಿ ಅಪ್ಪ ನಿರಾಕರಿಸಿದರು. ‘ನೀನು ಅಪಘಾತಕ್ಕೊಳಗಾಗಿ ಕೈಗಳನ್ನು ಕಳೆದುಕೊಂಡಾಗ ನೂರು ರೂಪಾಯಿ ಸಹಾಯ ಮಾಡಿದ್ದವರೊಬ್ಬರು ಈಗಲೂ ಹಂಗಿಸುತ್ತಾರೆ. ಮತ್ತೆಲ್ಲೂ ನೆರವು ಬೇಡ’ ಎಂದು ಅಪ್ಪ ಖಡಾಖಂಡಿತವಾಗಿ ಹೇಳಿದ್ದರು.

ಆಮಿರ್‌ ಹುಸೇನ್ ಲೋನ್ ಬೌಲಿಂಗ್ 
–ಪಿಟಿಐ ಚಿತ್ರ
ಆಮಿರ್‌ ಹುಸೇನ್ ಲೋನ್ ಬೌಲಿಂಗ್  –ಪಿಟಿಐ ಚಿತ್ರ

ಹೌದು. ನನ್ನನ್ನು ಶಾಶ್ವತ ಅಂಗವಿಕಲನನ್ನಾಗಿ ಮಾಡಿದ ಆ ಕರಾಳದಿನವನ್ನು ಮರೆಯುವುದಾದರೂ ಹೇಗೆ? ನಾನು ಎಂಟನೇ ವರ್ಷದವನಿದ್ದೆ. ಅಪ್ಪ ಮತ್ತು ಅಣ್ಣ ಕಟ್ಟಿಗೆಯ ಪೆಟ್ಟಿಗೆಗಳನ್ನು ತಯಾರಿಸುವ ಸಾ ಮಿಲ್ ಇಟ್ಟುಕೊಂಡಿದ್ದರು. ಅದೊಂದು ಭಾನುವಾರ ಮಧ್ಯಾಹ್ನ ಆಟವಾಡಿಕೊಂಡಿದ್ದ ನನ್ನನ್ನು ಅಮ್ಮ ಕರೆದರು. ಅಣ್ಣನಿಗೆ ಊಟದ ಡಬ್ಬಿ ಕೊಟ್ಟು ಬಾ ಎಂದರು. ಮಿಲ್‌ನಲ್ಲಿ ಡಬ್ಬಿ ಕೊಡುವ ಸಂದರ್ಭದಲ್ಲಿ ಅಲ್ಲಿದ್ದ ಕಟ್ಟಿಗೆ ಕತ್ತರಿಸುವ ಯಂತ್ರಕ್ಕೆ ನಾನು ಧರಿಸಿದ್ದ ಜಾಕೆಟ್ ಸಿಲುಕಿತು. ಕೆಲವೇ ಕ್ಷಣಗಳಲ್ಲಿ ನನ್ನ ಎರಡೂ ಕೈಗಳು ದೇಹದಿಂದ ಬೇರ್ಪಟ್ಟವು. ರಕ್ತದ ಮಡುವಿನಲ್ಲಿ ಬಿದ್ದಿದ್ದಷ್ಟೇ ನೆನಪು. ನಂತರ ಹಲವಾರು ದಿನಗಳ ಚಿಕಿತ್ಸೆಯಲ್ಲಿ ಜೀವ ಉಳಿಯಿತು. ಆದರೆ ನನ್ನನ್ನು ಬದುಕಿಸಲು ಅಪ್ಪ ತಮ್ಮ ಮಿಲ್, ಜಮೀನು ಎಲ್ಲವನ್ನೂ ಮಾರಿಕೊಂಡಿದ್ದರು. ಕುಟುಂಬವು ಬಡತನದ ಬೇಗೆಯಲ್ಲಿ ಮುಳುಗಿತ್ತು.

ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು ಹಲವಾರು. ‘ವಿಷ ಹಾಕಿ ಸಾಯಿಸಿಬಿಡಿ. ಈ ಹುಡುಗ ನಿಮಗೆ ಹೊರೆ’ ಎಂದ ನೆರೆಹೊರೆಯವರ ಮಾತುಗಳನ್ನು ನನ್ನ ಕುಟುಂಬ ನಿರ್ಲಕ್ಷಿಸಿತು. ಅಜ್ಜಿಯಂತೂ ನನ್ನನ್ನು ಕಣ್ರೆಪ್ಪೆಗಳಂತೆ ಸಲುಹಿದರು. ಅವರೇನಾದರೂ ಇವತ್ತು ನನ್ನ ಸಾಧನೆಗಳನ್ನು ನೋಡಿದ್ದರೆ ಎಲ್ಲರಿಗಿಂತ ಹೆಚ್ಚು ಸಂತಸ ಪಡುತ್ತಿದ್ದರು. ಆದರೆ ಅವರು ತೀರಿಹೋಗಿ ಹದಿಮೂರು ವರ್ಷಗಳಾಗಿವೆ. 

2013ರಲ್ಲಿ ಹನ್ನೊಂದನೆ ತರಗತಿ ಓದಲು ಸೇರಿದಾಗ ಅಲ್ಲಿ ಕ್ರಿಕೆಟ್  ಆಡುವವರನ್ನು ನೋಡುತ್ತಿದ್ದೆ. ಅವರು ನನಗೆ ಆಡಲು ಕರೆದರು. ಮೊದಲ ಬಾರಿಗೆ ಲೆದರ್‌ ಬಾಲ್‌ನಲ್ಲಿ ಆಡಲು ಪ್ರಯತ್ನಿಸಿದೆ. ಕಾಲಿನಲ್ಲಿ ಬೌಲಿಂಗ್ ಮಾಡುವುದನ್ನು ನೋಡಿದ ಜನರೆಲ್ಲರೂ ಖುಷಿಪಟ್ಟರು. ನಗರದಲ್ಲಿ ನಡೆಯುತ್ತಿರುವ ಪ್ಯಾರಾ ಕ್ರಿಕೆಟ್ ಶಿಬಿರಕ್ಕೆ ಸೇರುವಂತೆ ಸಲಹೆ ನೀಡಿದರು. ನನ್ನ ಶಿಕ್ಷಕರೊಬ್ಬರು ಕರೆದುಕೊಂಡು ಹೋಗಿ ಸೇರಿಸಿದರು. 

ಅಲ್ಲಿ ಕ್ರಿಕೆಟ್ ತರಬೇತಿ ಸಿಕ್ಕಿತು. ಒಂದು ಪಂದ್ಯದಲ್ಲಿ 30 ರನ್ ಗಳಿಸಿದೆ. ಕುತ್ತಿಗೆ ಮತ್ತು ತೋಳುಗಳ ನಡುವೆ ಬ್ಯಾಟ್‌ ಹಿಡಿಯುವುದನ್ನು ರೂಢಿಸಿಕೊಂಡೆ. ದೆಹಲಿಯಲ್ಲಿ ನಡೆಯಲಿದ್ದ ರಾಷ್ಟ್ರೀಯ ಪ್ಯಾರಾ ಕ್ರಿಕೆಟ್‌ಗೆ ಆಯ್ಕೆ ಮಾಡಿದರು. ಅಷ್ಟೇ ಅಲ್ಲ; ಜಮ್ಮು–ಕಾಶ್ಮೀರ ತಂಡಕ್ಕೆ ನಾಯಕನನ್ನಾಗಿಯೂ ನೇಮಕ ಮಾಡಿದರು. 

ದೆಹಲಿಯ ಪಂದ್ಯದಲ್ಲಿ ಕಾಲಿನಿಂದ ಬೌಲಿಂಗ್ ಮಾಡಿದ ಮೊದಲ ಎಸೆತದಲ್ಲಿಯೇ ವಿಕೆಟ್ ಗಳಿಸಿದೆ. ಬ್ಯಾಟಿಂಗ್‌ನಲ್ಲಿ 25 ರನ್ ಗಳಿಸಿದೆ. ಅಲ್ಲಿದ್ದ ಹಲವರು ತಮ್ಮ ಮೊಬೈಲ್‌ಗಳಲ್ಲಿ ನನ್ನ ಆಟವನ್ನು ಚಿತ್ರೀಕರಿಸಿಕೊಂಡು ಸೋಷಿಯಲ್ ಮಿಡಿಯಾದಲ್ಲಿ ಹಾಕಿದರು. ಪಂದ್ಯ ಮುಗಿದ ನಂತರ ಎದುರಾಳಿ ತಂಡದ ಆಟಗಾರರು ಸೇರಿ ತಮ್ಮ ಹೆಗಲ ಮೇಲೆ ನನ್ನನ್ನು ಹೊತ್ತು ಮೆರೆಸಿದರು. ‘ಭಾರತ್ ಮಾತಾ ಕೀ ಜೈ..’ ಎಂದು ಕೂಗಿದರು. ನಾನು ಗಳಗಳನೇ ಅತ್ತುಬಿಟ್ಟಿದ್ದೆ.

ಆಮಿರ್ ಹುಸೇನ್ ಲೋನ್ ಬ್ಯಾಟಿಂಗ್  –ಪಿಟಿಐ ಚಿತ್ರ
ಆಮಿರ್ ಹುಸೇನ್ ಲೋನ್ ಬ್ಯಾಟಿಂಗ್  –ಪಿಟಿಐ ಚಿತ್ರ

2014ರಲ್ಲಿ ಲಖನೌನಲ್ಲಿ ರಾಷ್ಟ್ರೀಯ ಟೂರ್ನಿಯಲ್ಲಿ ಆಡಿದೆ. 2016ರಲ್ಲಿ ಭಾರತ ತಂಡದ ಆಟಗಾರ ಆಶಿಶ್ ನೆಹ್ರಾ ಅವರು ಆಹ್ವಾನಿಸಿದರು. ಆ ವರ್ಷ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಆಡಿದ್ದವು. ಆ ಪಂದ್ಯ ವೀಕ್ಷಣೆಗೆ ನಮ್ಮನ್ನು ಕರೆದಿದ್ದರು. ಸಚಿನ್ ತೆಂಡೂಲ್ಕರ್ ಅವರು ತಮ್ಮ ಹಸ್ತಾಕ್ಷರವಿದ್ದ ಜೆರ್ಸಿ ಕಳಿಸಿದರು. ಬಾಂಗ್ಲಾ, ಶ್ರೀಲಂಕಾ ಎದುರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದೆ.

ಆದರೆ ಈ ನಡುವೆ ನೌಕರಿಗಾಗಿ ಮಾಡಿದ ಪ್ರಯತ್ನಗಳು ಕೈಗೂಡಲಿಲ್ಲ. ನಮ್ಮ ರಾಜ್ಯ ಸರ್ಕಾರ, ಬೇರೆ ಸಂಸ್ಥೆಗಳಲ್ಲಿ ಮಾಡಿದ ಪ್ರಯತ್ನಗಳು ಫಲ ನೀಡಿಲ್ಲ. ಮದುವೆ ಆಗಿದೆ. ಪತ್ನಿ ಮತ್ತು ಮಕ್ಕಳು ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಅಪ್ಪ ದುಡಿಯುತ್ತಿದ್ದಾರೆ. ಈಗ ನನಗೆ 32 ವರ್ಷ. ಈಗಲೂ ಆಡುತ್ತಿದ್ದೇನೆ. ನನ್ನ ಜೀವನಗಾಥೆಯಾಧಾರಿತ ಚಲನಚಿತ್ರ ಕೂಡ ಸಿದ್ಧವಾಗುತ್ತಿದೆ. ಆರ್ಥಿಕ ಪರಿಸ್ಥಿತಿ ಇಂದಲ್ಲ ನಾಳೆ ಸುಧಾರಣೆಯಾಗಿ ಕುಟುಂಬಕ್ಕೆ ನಾನು ಆಸರೆಯಾಗುವ ಕನಸು ನನಸಾಗುವುದನ್ನು ಕಾಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT