ಸೋಮವಾರ, ಮಾರ್ಚ್ 1, 2021
30 °C

ಇಂಗ್ಲೆಂಡ್‌ ವಿರುದ್ಧ ಭಾರತ ಸೋಲಲು ಬದಲಾದ ಜೆರ್ಸಿಯೇ ಕಾರಣ: ಮೆಹಬೂಬಾ ಮುಫ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬರ್ಮಿಂಗಂನಲ್ಲಿ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಭಾರತ ಮೊದಲು ಸೋಲು ಅನುಭವಿಸಿದ್ದು, ಆರೆಂಜ್ ಜೆರ್ಸಿಯಿಂದಲೇ ಭಾರತಕ್ಕೆ ಹೀಗಾಯಿತು ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಟ್ವೀಟ್‌ ಮಾಡಿದ್ದಾರೆ.

‘ನನ್ನದು ಮೂಢನಂಬಿಕೆ ಎಂದರೂ ಪರವಾಗಿಲ್ಲ. ಆದರೆ, ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಸೋಲಿಗೆ ಜರ್ಸಿಯೇ ಕಾರಣ. ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದು ಬದಲಾದ ಜರ್ಸಿ‘ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ತಂಡ ಹೊರತುಪಡಿಸಿ ಇತರ ಎಲ್ಲ ತಂಡಗಳು ತಮ್ಮ ನಿಗದಿತ ಜೆರ್ಸಿಗೆ ಬದಲಾಗಿ ಕನಿಷ್ಟ ಒಂದು ಪಂದ್ಯದಲ್ಲಾದರೂ ಬೇರೆ ಬಣ್ಣದ ಜೆರ್ಸಿ ತೊಡಬೇಕು ಎಂದು ಐಸಿಸಿ ಸೂಚಿಸಿತ್ತು. ಭಾರತ ತಂಡ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಇದನ್ನು ಜಾರಿಗೊಳಿಸಿತ್ತು. ನೈಕಿ ಕಂಪನಿ ವಿನ್ಯಾಸಗೊಳಿಸಿದ ಉಡುಪನ್ನು ಶುಕ್ರವಾರ ಅನಾವರಣ ಮಾಡಿತ್ತು.

ಹೊಸ ತಲೆಮಾರಿನ ಯುವಜನರ ಉತ್ಸಾಹದ ಪ್ರತೀಕವಾಗಿರುವ ಈ ಜೆರ್ಸಿ ತಂಡದ ಆಟಗಾರರಲ್ಲಿ ಧೈರ್ಯ ಮತ್ತು ಸಾಹಸ ಮನೋಭಾವ ತುಂಬಲಿದೆ ಎಂಬ ವಿಶ್ವಾಸವಿದೆ ಎಂದು ಬಿಸಿಸಿಐ ಹೇಳಿದೆ. 

ಜೆರ್ಸಿಯನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದ್ದು ಇದನ್ನು ಧರಿಸಿ ಆಡುವುದು ಹೆಚ್ಚು ಆರಾಮದಾಯಕವಾಗಿರುತ್ತದೆ. ಹೀಗಾಗಿ ಅಂಗಣದಲ್ಲಿ ಹೆಚ್ಚು ಉಲ್ಲಾಸದಿಂದ ಇರಲು ಸಾಧ್ಯ ಎಂದು ಹೇಳಲಾಗಿದ್ದು ನೈಕಿ ಉತ್ಪನ್ನಗಳ ಅಧಿಕೃತ ಮಾರಾಟಗಾರರಾದ ಮೈಂತ್ರಾ ಮತ್ತು ಜಬಾಂಗ್‌ ಮಳಿಗೆಗಳಲ್ಲಿ ಇವುಗಳ ಮಾದರಿಗಳು ಖರೀದಿಗೆ ಲಭ್ಯವಿವೆ ಎಂದು ತಿಳಿಸಲಾಗಿದೆ.

ಭಾರತ ತಂಡದ ಹೊಸ ಜೆರ್ಸಿಯ ಬಣ್ಣ ರಾಜಕೀಯ ಚರ್ಚೆಗೂ ಗ್ರಾಸವಾಗಿತ್ತು. ಜೆರ್ಸಿ ಕೇಸರಿ ಬಣ್ಣದಲ್ಲಿರುತ್ತದೆ ಎಂದು ಹೇಳಿದ್ದ ಕೆಲವರು ಇದು ರಾಜಕೀಯ ಪಕ್ಷವೊಂದರ ಬಣ್ಣ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. 

ಇದೀಗ ಟೀಂ ಇಂಡಿಯಾ ಜರ್ಸಿ ವಿವಾದಕ್ಕೆ ಪಿಡಿಪಿ ನಾಯಕಿ ಹೊಸ ತಿರುವು ನೀಡಿದ್ದಾರೆ. ಸೋಲಿಗೆ ಜರ್ಸಿ ಕಾರಣ ಅನ್ನೋ ಮೂಲಕ ಆರೆಂಜ್‌ ಜೆರ್ಸಿ ವಿರುದ್ಧ ಕಿಡಿ ಕಾರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು