ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜವಾನ್ಸ್‌, ಸೆಂಚುರಿ ಕ್ಲಬ್ ಪರ ತೀರ್ಪು

ಕ್ರಿಕೆಟ್ ಋತು ವಿಳಂಬಕ್ಕೆ ಕಾರಣವಾಗಿದ್ದ ಪ್ರಕರಣ ‘ಇತ್ಯರ್ಥ’
Published 31 ಮೇ 2024, 0:12 IST
Last Updated 31 ಮೇ 2024, 0:12 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಸಕ್ತ ಋತುವಿನ ಕ್ರಿಕೆಟ್‌ ಟೂರ್ನಿಗಳು ವಿಳಂಬವಾಗಲು ಕಾರಣವಾದ ಮೂರು ಕ್ಲಬ್‌ಗಳ  ನಡುವಣ ವಿವಾದವು ‘ಇತ್ಯರ್ಥ’ವಾಗಿದೆ. ಇದರಿಂದಾಗಿ ಹೊಸ ಋತುವಿನ ಟೂರ್ನಿಗಳು ಆರಂಭವಾಗುವ ನಿರೀಕ್ಷೆ ಮೂಡಿದೆ.  

ಎರಡನೇ ಡಿವಿಷನ್ ಲೀಗ್  (ಎಂ.ಎ.ಟಿ ಆಚಾರ್ಯ ಶೀಲ್ಡ್‌) ಪಂದ್ಯಗಳಲ್ಲಿ ವಿಸಿಸಿ ತಂಡವು ಗ್ರಾಮಾಂತರ ಆಟಗಾರರನ್ನು ಆಡಿಸಿರುವ ನಿಯಮ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದ ಜವಾನ್ಸ್‌ ಕ್ರಿಕೆಟ್ ಕ್ಲಬ್ ಹಾಗೂ ಸೆಂಚುರಿ ಕ್ಲಬ್‌  ಕೆಎಸ್‌ಸಿಎ ತಾಂತ್ರಿಕ ಸಮಿತಿಗೆ ದೂರು ಸಲ್ಲಿಸಿದ್ದವು.  ವಿಸಿಸಿ ತಂಡವು ಜವಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿ 3 ಅಂಕ ಪಡೆದಿತ್ತು. ಸೆಂಚುರಿ ಕ್ಲಬ್ ಎದುರಿನ ಪಂದ್ಯದಲ್ಲಿ ಇನಿಂಗ್ಸ್ ಮತ್ತು 237 ರನ್‌ಗಳಿಂದ ಜಯಿಸಿತ್ತು. 

ಈ ಎರಡೂ ದೂರುಗಳ ಕುರಿತು ವಿಚಾರಣೆ ನಡೆಸಿದ ನಂತರ ತಾಂತ್ರಿಕ ಸಮಿತಿಯು ಎರಡೂ ಪಂದ್ಯಗಳ ಫಲಿತಾಂಶಗಳನ್ನು ರದ್ದು ಮಾಡಿದೆ. ಇದರಿಂದಾಗಿ ಜವಾನ್ಸ್‌ ಕ್ಲಬ್‌ ಮೊದಲ ಡಿವಿಷನ್‌ (ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್) ಟೂರ್ನಿಗೆ ಬಡ್ತಿ ಗಳಿಸಿತು. ವಿಸಿಸಿ ಎರಡನೇ ಡಿವಿಷನ್‌ನಲ್ಲಿಯೇ ಉಳಿಯಿತು.

ಈ ಕುರಿತು ಪ್ರತಿಕ್ರಿಯಿಸಿರುವ ವಿಸಿಸಿಯ ಪ್ರತಿನಿಧಿ, ‘ಇದುವರೆಗೂ ನಮಗೆ ಲಿಖಿತವಾಗಿ ಯಾವುದೇ ಮಾಹಿತಿ ಅಥವಾ ಸೂಚನೆ ಬಂದಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಈ ದೂರುಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ನಮಗೆ ತಿಳಿಸಲಾಗಿತ್ತು. ನಾವು ನಿಯಮ ಉಲ್ಲಂಘಿಸಿಲ್ಲವೆಂದು ಸಾಬೀತುಮಾಡುವ ಎಲ್ಲ ಅಂಶಗಳನ್ನು ಸಾಕ್ಷಿ ಸಮೇತ ಉಲ್ಕೇಖಿಸಿ ಐದು ಪುಟಗಳ ಉತ್ತರವನ್ನು ನೀಡಿದ್ದೆವು’ ಎಂದಿದ್ದಾರೆ.

‘ನಮ್ಮ ಮೇಲೆ ದೂರು ಸಲ್ಲಿಸಿರುವ ಎರಡೂ ಕ್ಲಬ್‌ಗಳ ವಿರುದ್ಧ ಮತ್ತೊಮ್ಮೆ ಪಂದ್ಯಗಳನ್ನು ಆಡಬೇಕು. ಆ ಪಂದ್ಯಗಳಲ್ಲಿ ಕೆಲವು ಗ್ರಾಮಾಂತರ ಆಟಗಾರರನ್ನು ಕೈಬಿಡಬೇಕು ಎಂದು ಸೂಚಿಸಿದರು. ನಾವು ಸಮ್ಮತಿಸಲಿಲ್ಲ.  ತದನಂತರದಲ್ಲಿ ಕೆಎಸ್‌ಸಿಎ ನೀಡಿದ್ದ ಎಲ್ಲ ನೋಟಿಸ್‌ಗಳಿಗೂ ಸೂಕ್ತ ಉತ್ತರ ನೀಡಿದ್ದೇವೆ. ಈಗ ಕೆಎಸ್‌ಸಿಎ ಉಪಾಧ್ಯಕ್ಷರು ಕೈಗೊಂಡಿದ್ದಾರೆನ್ನಲಾದ ನಿರ್ಣಯದ ಕುರಿತ ಲಿಖಿತ ಮಾಹಿತಿ ನಮ್ಮ ಕೈಸೇರಿದ ನಂತರ ಮುಂದಿನ ನಡೆಯ ಕುರಿತು ಯೋಚಿಸುತ್ತೇವೆ’  ಎಂದಿದ್ದಾರೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕೆಎಸ್‌ಸಿಎ ಉಪಾಧ್ಯಕ್ಷ ಸಂಪತ್ ಕುಮಾರ್, ‘ಈ ನಿರ್ಣಯದಿಂದಾಗಿ  ಒಂದು ಕ್ಲಬ್‌ಗೆ ಸಂತೋಷವಾಗುವುದು ಮತ್ತೊಬ್ಬರಿಗೆ ಬೇಸರವಾಗಿರುವುದು ಸಹಜ. ಆದರೆ ನಾವು ಕಾನೂನುಪ್ರಕಾರ ನಿರ್ಣಯ ನೀಡಿದ್ದೇವೆ. ಇದಕ್ಕೂ ಮುನ್ನ  ಆ ಎರಡೂ ಪಂದ್ಯಗಳನ್ನು ಮರು ಆಯೋಜಿಸಲು ಸಿದ್ಧರಾಗಿದ್ದೆವು. ಆದರೆ ಅವರು ಒಪ್ಪಲಿಲ್ಲ. ಆದ್ದರಿಂದ ನಿರ್ಣಯ ಕೈಗೊಂಡು ಹೊಸ  ಋತುವಿನ ಆರಂಭಕ್ಕೆ ದಾರಿ ಸುಗಮಗೊಳಿಸಬೇಕಾಯಿತು. ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳೂ ಇಲ್ಲಿ ನಡೆಯುತ್ತಿದ್ದ ಕಾರಣ ಎಲ್ಲರೂ ಕಾರ್ಯನಿರತರಾಗಿದ್ದರು. ಆದ್ದರಿಂದ  ವಿಳಂಬವಾಯಿತು’ ಎಂದೂ ಸಂಪತ್,  ಗುರುವಾರ ಪ್ರಜಾವಾಣಿಗೆ ತಿಳಿಸಿದರು. 

‘ನಿರ್ಣಯ ಕೈಗೊಂಡಿದ್ದೇವೆ. ಮುಂದಿನ ಋತು ಆರಂಭಿಸಬೇಕಿದೆ. ಮಳೆಗಾಲವೂ ಸಮೀಪಿಸಿದೆ. ಆದ್ದರಿಂದ ಹೊಸ ಋತುವಿನ ಟೂರ್ನಿಗಳನ್ನು ಆಡಿಸಲು ಹೆಚ್ಚು ಗಮನ ನೀಡಲಿದ್ದೇವೆ’ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹೇಳಿದರು. 

ಡಿವಿಷನ್ ಲೀಗ್ ಮತ್ತಿತರ ಟೂರ್ನಿಗಳು ವಿಳಂಬವಾಗುತ್ತಿರುವುದರಿಂದ ಮುಂಬರುವ ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್ ಟೂರ್ನಿಗಳಿಗೆ ಆಟಗಾರರನ್ನು ಆಯ್ಕೆ ಮಾಡಲು ಸೀನಿಯರ್ ಆಯ್ಕೆ ಸಮಿತಿಗೆ ತೊಡಕಾಗಿದೆ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT