ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಸಿಸಿ ವೆಬ್‌ಸೈಟ್‌ನಲ್ಲಿ ಕನ್ನಡದ ಕಂಪು: ಕನ್ನಡಿಗ ಅಂಪೈರ್ ಕುಲಕರ್ಣಿ ಸಾಧನೆ

ಕನ್ನಡಿಗ ಅಂಪೈರ್ ವಿ.ಎನ್. ಕುಲಕರ್ಣಿ ಸಾಧನೆ: ಸತತ ಮೂರನೇ ಆವೃತ್ತಿಗೆ ಸಿಕ್ಕ ಮನ್ನಣೆ
Last Updated 3 ಸೆಪ್ಟೆಂಬರ್ 2022, 3:10 IST
ಅಕ್ಷರ ಗಾತ್ರ

ಬೆಂಗಳೂರು: ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ ವೆಬ್‌ಸೈಟ್‌ನಲ್ಲಿ ‘ಕ್ರಿಕೆಟ್ ನಿಯಮಗಳು’ ಕನ್ನಡ ಅವತರಣಿಕೆಯ ಮೂರನೇ ಆವೃತ್ತಿಯನ್ನು ಪ್ರಕಟಿಸಿದೆ.

ಬೆಂಗಳೂರಿನಲ್ಲಿರುವ ಮಾಜಿ ಅಂತರರಾಷ್ಟ್ರೀಯ ಅಂಪೈರ್ ವಿನಾಯಕ ನಾರಾಯಣರಾವ ಕುಲಕರ್ಣಿ ಅವರು ಸತತ ಮೂರನೇ ಬಾರಿ ಕನ್ನಡಕ್ಕೆ ಕ್ರಿಕೆಟ್‌ ನಿಯಮಗಳನ್ನು ಅನುವಾದಿಸಿ ಮತ್ತು ಪರಿಷ್ಕರಿಸಿ ಕೊಟ್ಟಿದ್ದಾರೆ. 123 ಪುಟಗಳ ಪುಸ್ತಕ ಈಗ ಎಂ.ಸಿ.ಸಿಯ ಅಧಿಕೃತ ವೆಬ್‌ಸೈಟ್‌ (https://www.lords.org/mcc/about-the-laws-of-cricket) ನಲ್ಲಿ ಲಭ್ಯವಿದೆ.

ಈ ವೆಬ್‌ಸೈಟ್‌ನಲ್ಲಿ 2017ರಲ್ಲಿ ಮೊದಲ ಬಾರಿಗೆ ಕುಲಕರ್ಣಿಯವರು ಅನುವಾದಿಸಿದ ನಿಯಮದ ಪುಸ್ತಕ ಪ್ರಕಟವಾಗಿತ್ತು. ನಂತರ 2019ರಲ್ಲಿ ಪರಿಷ್ಕೃತ ನಿಯಮಗಳನ್ನು ಕೂಡ ವೆಬ್‌ನಲ್ಲಿ ಪ್ರಕಟಿಸಲಾಗಿತ್ತು. ಇದೀಗ ಮತ್ತೊಮ್ಮೆ ಬದಲಾದ ನಿಯಮಗಳನ್ನು ಸೇರ್ಪಡೆ ಮಾಡಿರುವ ಕೃತಿಯನ್ನುಎಂಸಿಸಿ ಪ್ರಕಟಿಸಿದೆ.

‘ಈ ಬಾರಿ ಸುಮಾರು ಮೂರು ಪ್ರಮುಖ ನಿಯಮಗಳ ಪರಿಷ್ಕರಣೆಗಳನ್ನು ಸೇರ್ಪಡೆ ಮಾಡಲಾಗಿದೆ. ಸುಮಾರು 20 ಕಡೆ ಪದಗಳ ಬದಲಾವಣೆ ಸೇರಿದಂತೆ ಕೆಲವು ಸಣ್ಣಪುಟ್ಟ ಪರಿಷ್ಕರಣೆಗಳನ್ನು ಮಾಡಲಾಗಿದೆ. ಬದಲೀ ಆಟಗಾರ ಅಥವಾ ಆಟಗಾರ್ತಿಗೆ ಅನ್ವಯಿಸುವ ನಿಯಮವೂ ಪರಿಷ್ಕೃತಗೊಂಡಿದೆ. ಈ ಕೃತಿಯಲ್ಲಿರುವ ಕೆಂಪುಗುರುತಿನ ಪ್ಯಾರಾ ಮತ್ತು ಸಾಲುಗಳು ಈ ಬಾರಿ ಪರಿಷ್ಕರಣೆಗೊಂಡಂತಹ ಅಂಶಗಳು’ ಎಂದು ಅಂಪೈರ್‌ಗಳ ಅಕಾಡೆಮಿಯ ಕೋಚ್‌ ಕೂಡ ಆಗಿರುವ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರತದಲ್ಲಿ ಅಂಪೈರ್‌ಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವುದಕ್ಕಾಗಿ ಕೆಲವು ವರ್ಷಗಳ ಹಿಂದೆ ಬಿಸಿಸಿಐ ನಾಗಪುರದಲ್ಲಿ ಅಂಪೈರ್‌ಗಳ ಅಕಾಡೆಮಿ ಆರಂಭಿಸಿತ್ತು. ಈ ಅಕಾಡೆಮಿಯ ಮೊದಲ ಕೋಚ್‌ ಕೂಡ ಆಗಿದ್ದಕುಲಕರ್ಣಿಯವರು ನಿಯಮಪುಸ್ತಕವನ್ನು ಕನ್ನಡದಲ್ಲಿ ಅನುವಾದಿಸಿದ್ದರು.

ರಾಜ್ಯದ ಅಂಪೈರ್‌ಗಳಿಗೆ ಮಾತೃಭಾಷೆಯಲ್ಲಿಯೇ ಸರಳವಾಗಿ ನಿಯಮಗಳನ್ನು ಮನವರಿಕೆ ಮಾಡಿಕೊಡುವ ಉದ್ದೇಶ ಅವರದ್ದು. ಪಂದ್ಯದ ವೇಳೆ ಅಂಪೈರ್‌ಗಳು ಹೇಗೆ ನಡೆದುಕೊಳ್ಳಬೇಕು, ಆಟಗಾರರ ಜವಾಬ್ದಾರಿಗಳೇನು, ನಿಯಮಕ್ಕೆ ಅನುಗುಣವಾಗಿ ಪಂದ್ಯಗಳನ್ನು ಹೇಗೆ ನಡೆಸಬೇಕು ಎನ್ನುವ ವಿವರವಿದೆ.

‘ಎಂಸಿಸಿಯು ಸುಲಭವಾಗಿ ಪರಿಷ್ಕರಣೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬಹಳಷ್ಟು ಪೂರ್ವಸಿದ್ಧತೆ ಹಾಗೂ ಪೂರಕವಾದ ಅಂಶಗಳೊಂದಿಗೆ ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಯಶಸ್ವಿಯಾದ ತೃಪ್ತಿ ಇದೆ. ಎಂಸಿಸಿಯು ಮೂರನೇ ಬಾರಿ ಪ್ರಕಟಿಸಿರುವುದು ದೊಡ್ಡ ಗೌರವ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹಕಾರವೂ ಇದೆ’ ಎಂದು 67 ವರ್ಷದ ಕುಲಕರ್ಣಿ ಸಂತಸ ವ್ಯಕ್ತಪಡಿಸಿದರು.

ಈಚೆಗೆ ಮಂಕಡಿಂಗ್ ನಿಯಮವನ್ನು ರನೌಟ್‌ ನಿಯಮಕ್ಕೆ ವಿಲೀನ ಮಾಡಿರುವುದು ಕೂಡ ಹೊಸ ಸೇರ್ಪಡೆಯಾಗಿದೆ.

2017ರಲ್ಲಿ ಫ್ರೆಂಚ್ ಹಾಗೂ ಕನ್ನಡದಲ್ಲಿ ಅನುವಾದಗೊಂಡ ನಿಯಮಗಳ ಕೃತಿ ಪ್ರಕಟಿಸಿತ್ತು. ಅದಕ್ಕೂ ಮುನ್ನ ಗುಜರಾತಿ ಹಾಗೂ ಉರ್ದು ಭಾಷೆಯಲ್ಲಿಯೂ ಇತ್ತು.

2019ರಲ್ಲಿ ಎಂಸಿಸಿಯು ಕನ್ನಡ, ಮರಾಠಿ, ಹಿಂದಿ ಹಾಗೂ ಫ್ರೆಂಚ್‌ ಭಾಷೆಗಳಲ್ಲಿ ಪ್ರಕಟವಾಗಿತ್ತು. ಈ ಬಾರಿ ಕನ್ನಡವೇ ಮೊದಲಿಗೆ ಪರಿಷ್ಕೃತಗೊಂಡು ಪ್ರಕಟವಾಗಿದೆ. ಇನ್ನುಳಿದಿರುವ ಭಾಷೆಗಳಲ್ಲಿ ತೃತೀಯ ಪರಿಷ್ಕರಣೆಗಳು ಪ್ರಕಟವಾಗುವ ನಿರೀಕ್ಷೆಯಿದೆ.

ವಿನಾಯಕಅವರು 60 ರಣಜಿ, ಎರಡು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT