ಬುಧವಾರ, ಏಪ್ರಿಲ್ 8, 2020
19 °C
ಕರ್ನಾಟಕ ತಂಡದ ಆಲ್‌ರೌಂಡರ್ ಕೆ. ಗೌತಮ್ ಅಭಿಮತ

ರಾಹುಲ್ ಆಗಮನದಿಂದ ತಂಡದ ಶಕ್ತಿ ಇಮ್ಮಡಿ: ಕೆ. ಗೌತಮ್ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ತಂಡವು ಸತತ ಮೂರನೇ ವರ್ಷ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಇದೇ ಶನಿವಾರದಿಂದ ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ ಬಂಗಾಳ ವಿರುದ್ಧ ಆಡಲಿದೆ.

ಗುರುವಾರ ಬೆಳಿಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡವು ಅಭ್ಯಾಸ ನಡೆಸಿತು. ಮಧ್ಯಾಹ್ನ ಕೋಲ್ಕತ್ತಕ್ಕೆ ಪ್ರಯಾಣ ಬೆಳೆಸಿತು. ನೆಟ್ಸ್‌ ಸಂದರ್ಭದಲ್ಲಿ ಅಲ್‌ರೌಂಡರ್ ಕೃಷ್ಣಪ್ಪ ಗೌತಮ್ ಪತ್ರಿಕೆಗೆ ನೀಡಿದ ಸಂದರ್ಶನ ಇಲ್ಲಿದೆ.

 ಕೆ.ಎಲ್. ರಾಹುಲ್, ಮನೀಷ್, ಕರುಣ್ ಇರುವುದು ತಂಡಕ್ಕೆ ಯಾವ ರೀತಿ ಲಾಭವಾಗಿದೆ?

ಬಂಗಾಳ ತಂಡವು ಈ ಮೂರು ಹೆಸರುಗಳ ಬಗ್ಗೆ ಯೋಚನೆ ಮಾಡಿದರೆ ಖಂಡಿತವಾಗಿ ಹೆಚ್ಚು ಒತ್ತಡಕ್ಕೊಳಗಾಗುತ್ತದೆ. ಏಕೆಂದರೆ, ವಿಶ್ವದರ್ಜೆಯ ಆಟಗಾರರ ಹೆಸರುಗಳಿವು. ಅದರಲ್ಲೂ ಭಾರತ ತಂಡದಲ್ಲಿ ಉತ್ತಮವಾಗಿ ಆಡಿ ಮರಳಿರುವ ಕೆ.ಎಲ್. ರಾಹುಲ್ ಇರುವುದು ನಮ್ಮ ತಂಡಕ್ಕೆ ನೂರಾನೆ ಬಲ ಬಂದಂತಾಗಿದೆ. ಈ ಬಾರಿ ಸೆಮಿಫೈನಲ್‌ನಲ್ಲಿ ಎಲ್ಲವೂ ನಾವಂದುಕೊಂಡಂತೆ ಮತ್ತು ನಮ್ಮ ಪರವಾಗಿ ಆಗುವ ವಿಶ್ವಾಸವಿದೆ.

 ಕ್ವಾರ್ಟರ್‌ಫೈನಲ್‌ನಲ್ಲಿ ಜಮ್ಮು–ಕಾಶ್ಮೀರ ತಂಡದ ಎದುರಿನ ಗೆಲುವು ತಂಡದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ?

ಜಯ ಎನ್ನುವುದು ಯಾವಾಗಲೂ ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ. 206 ರನ್‌ಗಳ ಸಾಧಾರಣ ಮೊತ್ತವನ್ನು ರಕ್ಷಿಸಿಕೊಂಡು ಮುನ್ನಡೆ ಪಡೆಯುವುದು ಮತ್ತು ಜಯಿಸುವುದು ವಿಶೇಷವೇ ಸರಿ. ಆ ತಂಡವು 88 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಅವರಿಗೂ ಆಗ ಮುನ್ನಡೆ ಪಡೆಯುವ ಅವಕಾಶ ಇತ್ತು. ಪಿಚ್ ಕೂಡ ಬ್ಯಾಟಿಂಗ್ ಸ್ನೇಹಿಯಾಗಿತ್ತು. ನಮ್ಮ ಮಧ್ಯಮವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್ ಸುಚಿತ್ ಉತ್ತಮವಾಗಿ ಬೌಲಿಂಗ್ ಆಡಿದರು. ತಂಡದ ಛಲದ ಗುಣವನ್ನು ಸಾಬೀತು ಮಾಡಿದರು. 14 ರನ್‌ಗಳ ಅಲ್ಪ ಮುನ್ನಡೆಯಿದ್ದಾಗ, ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ಸ್‌
ಮನ್‌ಗಳು ಆಡಿದ ರೀತಿ ಅಮೋಘವಾಗಿತ್ತು. ಅದು ಬೌಲರ್‌ಗಳಲ್ಲಿ ಹೊಸ ಉತ್ಸಾಹ ತುಂಬಿತು.  

ರಣಜಿ ಟೂರ್ನಿಯಲ್ಲಿ ಕರ್ನಾಟಕದ ತಂಡದ ಸ್ಥಿರತೆ ಬಗ್ಗೆ.

ಆಗಿ ಹೋಗಿದ್ದರ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಆಗಿದ್ದು ಆಗಿ ಹೋಯಿತು. ಅದರಿಂದ ಕಲಿತ ಪಾಠಗಳಷ್ಟೇ ಮಹತ್ವದ್ದು. ಅದನ್ನು ಬಳಸಿಕೊಂಡು ಮುಂದಿನ ಗುರಿಯತ್ತ ಗಮನ ನೀಡಬೆಕು. ಸಕಾರಾತ್ಮಕ ಮನಸ್ಥಿತಿ ಬಹುಮುಖ್ಯ. ಹೋದ ಎರಡು ಋತುಗಳಲ್ಲಿ ಸೆಮಿಫೈನಲ್‌ಗಳಲ್ಲಿ ಸೋತಿದ್ದೇವೆ. ಆ ಎರಡೂ ಪಂದ್ಯಗಳಲ್ಲಿಯೂ  ನಾನು ಆಡಿದ್ದೆ.  ಆಗ ನಾವೆಲ್ಲರೂ ದುಃಖಿಸಿದ್ದೆವು. ಅದೇ ಸಂದರ್ಭದಲ್ಲಿ ಕಲಿತ ಪಾಠಗಳೂ ಹತ್ತಾರು. ಇದೀಗ ಸುಧಾರಿತ ಆಟದೊಂದಿಗೆ ಯಶಸ್ಸು ಸಾಧಿಸುವ ಸಮಯ ಬಂದಿದೆ.

 ಬಂಗಾಳ ತಂಡ, ಈಡನ್ ಗಾರ್ಡನ್ ಮತ್ತು ಒತ್ತಡಗಳ ಕುರಿತು..

ಅವರ ಮೇಲೆ (ಬಂಗಾಳ) ಹೆಚ್ಚು ಒತ್ತಡವಿದೆ ಎಂದು ನನಗನಿಸುತ್ತದೆ. ನಾವು ಉತ್ತಮವಾಗಿ ಆಡಿದಾಗಲೆಲ್ಲ ಫಲಿತಾಂಶವೂ ನಮ್ಮ ಪರವಾಗಿಯೇ ಬಂದಿದೆ. ಬಂಗಾಳ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸಿದಾಗ ಸಿಗುವ ತೃಪ್ತಿಯನ್ನು ಅನುಭವಿಸುವುದೇ ನಮ್ಮ ಗುರಿ.

 ನಿಮ್ಮ  ಉತ್ತಮ ಫಾರ್ಮ್‌ನ ಗುಟ್ಟು ಏನು?

ನನ್ನೊಳಗಿನ ಶ್ರೇಷ್ಠ ಸಾಮರ್ಥ್ಯವನ್ನು ಪಣಕ್ಕಿಡುವುದಷ್ಟೇ ಗುರಿ. ಪ್ರತಿ ಬಾರಿ ಕಣಕ್ಕಿಳಿದಾಗಲೂ ಅತ್ಯುತ್ತಮವಾಗಿ ಆಡುವತ್ತ ಮಾತ್ರ ಗಮನ ಇಡುತ್ತೇನೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು