ಶುಕ್ರವಾರ, ಏಪ್ರಿಲ್ 16, 2021
31 °C
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ದೇವದತ್ತ ಶತಕದ ಹ್ಯಾಟ್ರಿಕ್, ಸಮರ್ಥ್ ಎರಡನೇ ಶತಕ

ಎಂಟರ ಘಟ್ಟಕ್ಕೆ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಮತ್ತು ಆರ್. ಸಮರ್ಥ್ ಅವರ ಅಜೇಯ ಶತಕ ಮತ್ತು ಮುರಿಯದ ಮೊದಲ ವಿಕೆಟ್ ಜೊತೆಯಾಟದ  ಅಬ್ಬರಕ್ಕೆ ಎದುರಾಳಿ ರೈಲ್ವೆ ತಂಡವು ಹಳಿತಪ್ಪಿತು. ಆತಿಥೇಯರು 10 ವಿಕೆಟ್‌ಗಳ ಜಯ ಸಾಧಿಸಿದರು.

ಗುಂಪು ಹಂತದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು 16 ಅಂಕಗಳು ಮತ್ತು ಉತ್ತಮ ರನ್‌ ಸರಾಸರಿಯ ಆಧಾರದಲ್ಲಿ ಕರ್ನಾಟಕವು ಅಗ್ರಸ್ಥಾನ ಪಡೆಯಿತು.  ಗುಂಪಿನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಸಮರ್ಥ್ ಪಡೆಯು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಶ್ರೇಯಸ್‌ ಗೋಪಾಲ್ (41ಕ್ಕೆ3) ಮತ್ತು ಜೆ.ಸುಚಿತ್ (72ಕ್ಕೆ2) ಸ್ಪಿನ್ ಮೋಡಿಯ ನಡುವೆಯೂ ಶತಕ ಗಳಿಸಿದ ಪ್ರಥಮ್ ಸಿಂಗ್ (129 ರನ್) ಬಲದಿಂದ ರೈಲ್ವೆಸ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 284 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು 40.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 285 ರನ್ ಗಳಿಸಿ ಗೆದ್ದಿತು.  ಇದೇ ಮೊದಲ ಬಾರಿಗೆ ಕರ್ನಾಟಕ ತಂಡದ ಸಾರಥ್ಯ ನಿರ್ವಹಿಸುತ್ತಿರುವ ಸಮರ್ಥ್ ಈ ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದರು. ದೇವದತ್ತ ಜೊತೆಗೆ ಟಿ20 ಮಾದರಿಯ ಬ್ಯಾಟಿಂಗ್ ಮಾಡಿದ ಸಮರ್ಥ್ ತಂಡದ ಗೆಲುವಿಗೆ ಕಾರಣರಾದರು. 

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸಮರ್ಥ್‌ ಬಾರಿಸಿದ ಆರನೇ ಶತಕ ಇದು. ಒಂದು ವಾರದ ಹಿಂದೆ ಬಿಹಾರದ ವಿರುದ್ಧ ಶತಕ ದಾಖಲಿಸಿದ್ದರು. ಅದರ ನಂತರದ ಎರಡು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದರು. ಜನವರಿಯಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸಮರ್ಥ್ ಆಡಿರಲಿಲ್ಲ. ಆಗ ತಂಡವನ್ನು ಮುನ್ನಡೆಸಿದ್ದ ಕರುಣ್ ನಾಯರ್ ಬ್ಯಾಟಿಂಗ್ ಮತ್ತು ನಾಯಕತ್ವದ ಕೌಶಲದಲ್ಲಿ ಹಿನ್ನಡೆ ಸಾಧಿಸಿದ್ದರು. ಆದ್ದರಿಂದ ಏಕದಿನ ಮಾದರಿಯ ಟೂರ್ನಿಗೆ ಕರುಣ್ ಬದಲಿಗೆ ಸಮರ್ಥ್ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಈ ಟೂರ್ನಿಯಲ್ಲಿ ಸಮರ್ಥ್, ಐದು ಪಂದ್ಯಗಳಿಂದ 413 ರನ್‌ ಕಲೆಹಾಕಿದ್ದಾರೆ. 

ಕೇರಳ, ಉತ್ತರಪ್ರದೇಶಕ್ಕೆ ಜಯ: ಸಿ ಗುಂಪಿನ ಇನ್ನುಳಿದ ಪಂದ್ಯಗಳಲ್ಲಿ ಉತ್ತರಪ್ರದೇಶ ತಂಡವು ಒಡಿಶಾ ಎದುರು 6 ವಿಕೆಟ್‌ಗಳಿಂದ ಜಯಿಸಿ, ಎರಡನೇ ಸ್ಥಾನ ಪಡೆಯಿತು. ಕೇರಳ ತಂಡವು ಬಿಹಾರದ ಎದುರು 9 ವಿಕೆಟ್‌ಗಳಿಂದ ಗೆದ್ದು ಮೂರನೇ ಸ್ಥಾನ ಪಡೆದಿದೆ.

ಸಂಕ್ಷಿಪ್ತ ಸ್ಕೋರು:

ಒಡಿಶಾ: 40.1 ಓವರ್‌ಗಳಲ್ಲಿ 148 (ಶಂತನು ಮಿಶ್ರಾ 24, ರಾಕೇಶ್ ಪಟ್ನಾಯಕ್ 46, ಶುಭ್ರಾಂಶು ಸೇನಾಪತಿ 59, ಶಿವಂ ಶರ್ಮಾ 22ಕ್ಕೆ6)

ಉತ್ತರಪ್ರದೇಶ: 21.4 ಓವರ್‌ಗಳಲ್ಲಿ 4ಕ್ಕೆ150 (ಅಭಿಷೇಕ್ ಗೋಸ್ವಾಮಿ 25, ಕರಣ್ ಶರ್ಮಾ 25, ಸಮೀರ್ ಚೌಧರಿ ಔಟಾಗದೆ 29, ಉಪೇಂದ್ರ ಯಾದವ್ 32, ರಾಜೇಶ್ ಮೋಹಾಂತಿ 37ಕ್ಕೆ2) ಫಲಿತಾಂಶ: ಉತ್ತರಪ್ರದೇಶಕ್ಕೆ 6 ವಿಕೆಟ್‌ಗಳ ಜಯ

ಬಿಹಾರ: 40.2 ಓವರ್‌ಗಳಲ್ಲಿ 148 (ಬಾಬುಲ್ ಕುಮಾರ್ 64, ಜಲಜ್ ಸಕ್ಸೇನಾ 30ಕ್ಕೆ3, ಎಸ್‌. ಶ್ರೀಶಾಂತ್ 30ಕ್ಕೆ4, ನಿಧೀಶ್ 30ಕ್ಕೆ2)

ಕೇರಳ: ರಾಬಿನ್ ಉತ್ತಪ್ಪ ಔಟಾಗದೆ 87, ವಿಷ್ಣು ವಿನೋದ್ 37, ಸಂಜು ಸ್ಯಾಮ್ಸನ್ ಔಟಾಗದೆ 24) ಕೇರಳ ತಂಡಕ್ಕೆ 9 ವಿಕೆಟ್‌ಗಳ  ಜಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು