ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದತ್ತ ಬ್ಯಾಟಿಂಗ್ ವೈಭವ: ಆಂಧ್ರ ಎದುರು ಕರ್ನಾಟಕಕ್ಕೆ 5 ವಿಕೆಟ್ ಜಯ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿ
Last Updated 12 ನವೆಂಬರ್ 2019, 4:52 IST
ಅಕ್ಷರ ಗಾತ್ರ

ವಿಶಾಖಪಟ್ಟಣಂ:ಡಾ ವೈ ಎಸ್ ರಾಜಶೇಖರ ರೆಡ್ಡಿ ಎಸಿಎ–ವಿಡಿಸಿಎಮೈದಾನದಲ್ಲಿ ದೇವದತ್ತ ಪಡಿಕ್ಕಲ್ ಅವರ ಬ್ಯಾಟಿಂಗ್ ವೈಭವಕ್ಕೆ ಆಂಧ್ರದ ಬೌಲರ್‌ಗಳು ಕಕ್ಕಾಬಿಕ್ಕಿಯಾದರು.

ಪಡಿಕ್ಕಲ್ (ಅಜೇಯ 122, 60 ಎಸೆತ, 7 ಸಿಕ್ಸರ್‌, 13 ಬೌಂಡರಿ) ಅವರ ಸ್ಫೋಟಕ ಶತಕದ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಆಂಧ್ರ ತಂಡ ಅಶ್ವಿನ್ ಕಟ್ಟಿಂಗೇರಿ (61; 44 ಎ, 2 ಸಿ, 7 ಬೌಂ) ಮತ್ತು ಪ್ರಶಾಂತ್ ಬೆಂಗಿಮೆನ್ (79; 51 ಎ, 6 ಸಿ, 3 ಬೌಂ) ಅವರ ಅಮೋಘ ಜೊತೆಯಾಟದ ನೆರವಿನಿಂದ 5ಕ್ಕೆ 184 ರನ್ ಗಳಿಸಿತ್ತು. ಕರ್ನಾಟಕ 18.5 ಓವರ್‌ಗಳಲ್ಲಿ ಗುರಿ ಮುಟ್ಟಿತು. ತಂಡ 7 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಕಳೆದುಕೊಂಡಿತು. ರೋಹನ್ ಕದಂ ಮತ್ತು ಲವನೀತ್ ಸಿಸೋಡಿಯಾ ತಲಾ 1 ರನ್ ಗಳಿಸಿ ವಾಪಸಾಗಿದ್ದರು.

ಈ ಸಂದರ್ಭದಲ್ಲಿ ಕೃಷ್ಣಪ್ಪ ಗೌತಮ್ (35; 17 ಎ, 1 ಸಿ, 5 ಬೌಂ) ಮತ್ತು ದೇವದತ್ತ ಪಡಿಕ್ಕಲ್ 63 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ನಾಯಕ ಕರುಣ್ ನಾಯರ್ ಮತ್ತು ಶ್ರೇಯಸ್ ಗೋಪಾಲ್ ಕ್ರಮವಾಗಿ 3 ಮತ್ತು 11 ರನ್‌ ಗಳಿಸಿ ಔಟಾದಾಗ ತಂಡದ ಭರವಸೆಯ ಮೇಲೆ ಕಾರ್ಮೋಡ ಕವಿಯಿತು. ಆದರೆ ಪಡಿಕ್ಕಲ್ ಕ್ರೀಸ್‌ನಲ್ಲಿ ತಳವೂರಿ ಏಕಾಂಗಿ ಹೋರಾಟ ನಡೆಸಿದರು. ಪ್ರವೀಣ್ ದುಬೆ ಜೊತೆ 6ನೇ ವಿಕೆಟ್‌ಗೆ 33 ರನ್‌ಗಳನ್ನು ಸೇರಿಸಿ ತಂಡವನ್ನು ಸುಲಭವಾಗಿ ದಡ ಮುಟ್ಟಿಸಿದರು.

ಶತಕದ ಜೊತೆಯಾಟ: ಆಂಧ್ರ ತಂಡ ಕೂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 5 ರನ್‌ ಗಳಿಸುಷ್ಟರಲ್ಲಿ ತಂಡದ ಕ್ರಾಂತಿ ಕುಮಾರ್ ವಾಪಸಾಗಿದ್ದರು. ಆದರೆ ಅಶ್ವಿನ್ ಮತ್ತು ಪ್ರಶಾಂತ್ 139 ರನ್‌ಗಳ ಜೊತೆಯಾಟವಾಡಿದರು. ಈ ಜೊತೆಯಾಟವನ್ನು ಶ್ರೇಯಸ್ ಗೋಪಾಲ್ ಮುರಿದರು. ನಂತರ ತಂಡ ಹೆಚ್ಚು ಪ್ರತಿರೋಧ ತೋರಲಿಲ್ಲ. ಕೌಶಿಕ್ ವಾಸುಕಿ 3 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು
ಆಂಧ್ರ ಪ್ರದೇಶ:20 ಓವರ್‌ಗಳಲ್ಲಿ 5ಕ್ಕೆ 184

ಅಶ್ವಿನ್ ಕಟ್ಟಿಂಗೇರಿ 61, ಪ್ರಶಾಂತ್ ಬೆಂಗಿಮೆನ್ 79, ಕೌಶಿಕ್ ವಾಸುಕಿ 35ಕ್ಕೆ3
ಕರ್ನಾಟಕ: 18.5 ಓವರ್‌ಗಳಲ್ಲಿ 5ಕ್ಕೆ 189
ಕೃಷ್ಣಪ್ಪ ಗೌತಮ್ 35, ದೇವದತ್ತ ಪಡಿಕ್ಕಲ್ ಅಜೇಯ 122, ಸ್ಟೀಫನ್ ಚಿಪುರುಪಳ್ಳಿ 39ಕ್ಕೆ2
ಫಲಿತಾಂಶ: ಕರ್ನಾಟಕಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT