ಶುಕ್ರವಾರ, ಫೆಬ್ರವರಿ 28, 2020
19 °C

ಕೆ.ಎಲ್‌.ರಾಹುಲ್ 12ನೇ ಕ್ರಮಾಂಕದಲ್ಲಿಯೂ ಶತಕ ಗಳಿಸಬಲ್ಲ: ಶಿಖರ್ ಧವನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ತಂಡದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ 12ನೇ ಕ್ರಮಾಂಕದಲ್ಲಿ ಬೇಕಾದರೂ ಶತಕ ಗಳಿಸಬಲ್ಲ ಎಂದು ಆರಂಭಿಕ ಬ್ಯಾಟ್ಸ್‌ಮನ್ ಶಿಖರ್‌ ಧವನ್‌ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 112 ರನ್‌ ಗಳಿಸಿದ್ದ ರಾಹುಲ್‌, ಭಾರತ ಸವಾಲಿನ ಮೊತ್ತ ಕಲೆಹಾಕಲು ನೆರವಾಗಿದ್ದರು. ಈ ಶತಕದೊಂದಿಗೆ ಅವರು 1999ರ ಬಳಿಕ ಏಷ್ಯಾದಿಂದ ಹೊರಗೆ ಆಡಿದ ಪಂದ್ಯಗಳಲ್ಲಿ ಶತಕ ಗಳಿಸಿದ ಭಾರತದ ವಿಕೆಟ್‌ ಕೀಪರ್‌ ಎನಿಸಿದ್ದರು.

‘ತುಂಬಾ ಚೆನ್ನಾಗಿ ಆಡಿದ್ದೀಯ. ಅಮೋಘ ಶತಕ ಸೋದರ. ಹೀಗೆಯೇ ಬ್ಯಾಟಿಂಗ್ ಮುಂದುವರಿಸು. ನೀನು ಬ್ಯಾಟಿಂಗ್ ಮಾಡುವ ರೀತಿ ನೋಡಿದರೆ, ನೀನು 12ನೇ ಬ್ಯಾಟ್ಸ್‌ಮನ್‌ ಆಗಿ ಆಡಿದರೂ ಶತಕ ಬಾರಿಸಬಲ್ಲೆ’ ಎಂದು ಇನ್ಸ್‌ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕೆಲವೇ ದಿನಗಳ ಹಿಂದೆ ಉಪನಾಯಕ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಲು ರಾಹುಲ್‌ ಮತ್ತು ಧವನ್‌ ನಡುವೆ ಪೈಪೋಟಿ ಇತ್ತು. ಬಳಿಕ ವಿಕೆಟ್‌ ಕೀಪರ್ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡ ರಾಹುಲ್‌, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದರು.

ಆಸ್ಟ್ರೇಲಿಯಾ ವಿರುದ್ಧದ ಸರಣಿ ಸಂದರ್ಭದಲ್ಲಿ ಗಾಯಗೊಂಡಿರುವ ಧವನ್‌ ತಂಡದಿಂದ ಹೊರಗುಳಿದಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದ ರಾಹುಲ್‌ ಐದು ಪಂದ್ಯಗಳಿಂದ 224 ರನ್‌ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಆಡಿ 204 ರನ್ ಗಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)