ರಾಹುಲ್‌ಗೆ ಈಗ ‘ಜಗ’ ಮೆಚ್ಚಿಸುವ ಸವಾಲು

ಸೋಮವಾರ, ಜೂನ್ 24, 2019
26 °C

ರಾಹುಲ್‌ಗೆ ಈಗ ‘ಜಗ’ ಮೆಚ್ಚಿಸುವ ಸವಾಲು

Published:
Updated:

ಕಣ್ಣೂರು ಲೋಕೇಶ್ ರಾಹುಲ್‌ಗೆ ಆಗಿನ್ನೂ ಹತ್ತು ವರ್ಷ ವಯಸ್ಸು. ಮುದ್ದುಮುಖದ, ಗುಳಿಕೆನ್ನೆಯ ಹುಡುಗನ ಮನಸ್ಸಿನಲ್ಲಿ ಮಾತ್ರ ದೃಢವಿಶ್ವಾಸದ ಗಣಿಯೇ ಇತ್ತು. ಕೆಎಸ್‌ಸಿಎ ಮಂಗಳೂರು ವಲಯದ 13 ವರ್ಷದೊಳಗಿನವರ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ  ಆಯ್ಕೆದಾರರ ಗಮನ ಸೆಳೆಯುವಲ್ಲಿ ವಿಫಲವಾಗಿದ್ದ ಹುಡುಗ ಒಂದಿಷ್ಟು ಕನಲಿರಲಿಲ್ಲ.

ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ಕೋಚ್ ಜಯರಾಜ್ ಸ್ಯಾಮುಯೆಲ್ ಅವರ ಬಳಿ ಹೋದ ರಾಹುಲ್, ‘ನೀವು ಅನುಮತಿ ಕೊಟ್ಟರೆ ನಾನು ಬರೀ ಪ್ರಾಕ್ಟಿಸ್‌ಗೆ ಬರ್ತೇನೆ’ ಎಂದರು. ಅದಕ್ಕೆ ಜಯರಾಜ್  ಒಂದು ಕ್ಷಣ ತಡೆದು, ‘ಆಯಿತು. ನಾಳೆ ಮಧ್ಯಾಹ್ನ 3.30ಕ್ಕೆ ಬಾ’ ಎಂದರು. ಮರುದಿನ ಮಧ್ಯಾಹ್ನ ಎರಡೂವರೆಗೇ ಗ್ರೌಂಡ್‌ಗೆ ಬಂದ ಜಯರಾಜ್‌ಗೆ ಅಚ್ಚರಿ ಕಾದಿತ್ತು. ರಾಹುಲ್ ಅಲ್ಲಿ ಹಾಜರಿದ್ದರು!

ಜೀವನದಲ್ಲಿ ಎದುರಾದ ಸವಾಲುಗಳು, ಸೋಲುಗಳು, ಹತಾಶೆ, ನಿರಾಶೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ಸಿನ ಉತ್ತುಂಗಕ್ಕೆ ಏರುವ ಛಲ ರಾಹುಲ್‌ಗೆ ರಕ್ತಗತ. ಅದೇ ಗುಣ ಅವರ ಆಟದಲ್ಲಿಯೂ ಕಾಣುತ್ತದೆ. ಇದೀಗ ತಮ್ಮ ವೃತ್ತಿಜೀವನದ ಮಹತ್ವದ ಸಾಧನೆಯ ಮಾಡವತ್ತ ಚಿತ್ತ ನೆಟ್ಟಿದ್ದಾರೆ.

ಇದೇ ಮೊದಲ ಸಲ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಗಿಟ್ಟಿಸಿದ್ದಾರೆ.

ಇತ್ತೀಚೆಗೆ ನಡೆದ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಶತಕ ಬಾರಿಸಿದ್ದು ನಾಯಕ ವಿರಾಟ್ ಕೊಹ್ಲಿ ಮುಖದಲ್ಲಿ ಸಂತಸ ಪುಟಿದೇಳಲು ಕಾರಣವಾಗಿದೆ.

ಬಹುದಿನಗಳಿಂದ ಭಾರತ ತಂಡದ ನಾಲ್ಕನೇ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆಗೆ ಅವರು ಉತ್ತರವಾಗಿ ಲಭಿಸಿದ್ದಾರೆ. ಆದ್ದರಿಂದ ಈ ಟೂರ್ನಿಯ ಪಂದ್ಯಗಳಲ್ಲಿ ಅವರು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಕೆಲವು ತಿಂಗಳ ಹಿಂದೆ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ವಿವಾದಾತ್ಮಕ ಮಾತುಗಳನ್ನಾಡಿದ ಆರೋಪದಲ್ಲಿ ರಾಹುಲ್ ಸಿಲುಕಿದ್ದರು. ಆದರೆ, ತಮ್ಮ ತಪ್ಪನ್ನು ಒಪ್ಪಿಕೊಂಡು ಕೂಡಲೇ ಕ್ಷಮೆಯಾಚಿಸಿದ ರಾಹುಲ್ ಮತ್ತೆ ತಮ್ಮ ಆಟದ ಲಯಕ್ಕೆ ಮರಳಿದ್ದರು. ಅದಕ್ಕಾಗಿ ಅವರು ಮೊರೆ ಹೋಗಿದ್ದು ವ್ಯಾಯಾಮಗಳಿಗೆ.

ಜಿಮ್ನಾಷಿಯಂನಲ್ಲಿ ಹೆಚ್ಚು ಹೊತ್ತು ಕಳೆದರು. ಈಜು, ಓಟದಲ್ಲಿ ತೊಡಗಿಸಿಕೊಂಡರು. ಯೋಗ, ಧ್ಯಾನದ ಅಭ್ಯಾಸವನ್ನೂ ಮಾಡಿದರು. ಅದೆಲ್ಲದರ ಫಲವಾಗಿ ಅವರು ಮನೋಬಲವನ್ನು ಗಟ್ಟಿಗೊಳಿಸಿಕೊಂಡರು.

‘ಜೀವನದಲ್ಲಿ ಎಲ್ಲರಿಗೂ ಕಷ್ಟಕಾಲ ಬರುತ್ತದೆ. ನಾನೂ ಅಂತಹ ಕಷ್ಟವನ್ನು ಅನುಭವಿಸಿದೆ. ಈ ವಿವಾದದಿಂದ ನಾನು ಕಲಿತ ಪಾಠ ದೊಡ್ಡದು. ಈ ಸಂದರ್ಭವು ನನಗೆ ಆತ್ಮಾವಲಕೋನ ಮಾಡಿಕೊಳ್ಳುವ ಮತ್ತು ಆಟವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು ಅವಕಾಶ ನೀಡಿತು. ಜೀವನವನ್ನು ಬಂದ ಹಾಗೆಯೇ ಸ್ವೀಕರಿಸುವ ಮನೋಭಾವ ನನ್ನದು’ ಎಂದರು.

ಸವಾಲಿನ ಹಾದಿ

2010ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದರು. ಅವರೊಂದಿಗೆ ಮಯಂಕ್ ಅಗರವಾಲ್ ಕೂಡ ತಂಡದಲ್ಲಿದ್ದರು. ಅಲ್ಲಿ ಒಂದು ಅರ್ಧಶತಕ ಗಳಿಸಿದ್ದರು.  ಅಲ್ಲಿಂದ ಮರಳಿದ ಮೇಲೂ ಅವರಿಗೆ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಲಭಿಸುವುದು ಸುಲಭವಾಗಿರಲಿಲ್ಲ. ಅದಕ್ಕಾಗಿ ವಯೋಮಿತಿ ಕ್ರಿಕೆಟ್‌ನಲ್ಲಿ ರನ್‌ಗಳ ರಾಶಿ ಹಾಕಿದರು. ಕಡೆಗೂ ರಣಜಿ ತಂಡ ಕೈಬೀಸಿ ಕರೆಯಿತು.  ಆದರೆ, ಆಗ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದಾಗಲೂ ರಾಬಿನ್ ಉತ್ತಪ್ಪ, ಕೆ.ಬಿ. ಪವನ್, ಮನೀಷ್ ಪಾಂಡೆ, ಅಮಿತ್ ವರ್ಮಾ ಅವರೆಲ್ಲ ಉತ್ತಮ ಫಾರ್ಮ್‌ನಲ್ಲಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ಬೆಂಚ್ ಕಾಯಬೇಕಾಯಿತು. ಆದರೂ ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ ಪದಾರ್ಪಣೆ ಅವಕಾಶ ಸಿಕ್ಕಾಗ 18 ರನ್‌ ಗಳಿಸಿದ್ದರು. ಮುಂದಿನ ಋತುವಿನಲ್ಲಿ ಅವರು ಸ್ಥಾನ ಪಡೆಯಲಿಲ್ಲ. ಆದರೆ ಛಲ ಬಿಡದ ಹುಡುಗ 2012–13ರಲ್ಲಿ ತಂಡಕ್ಕೆ ಮರಳಿದರು. ಮೈಸೂರಿನಲ್ಲಿ ವಿದರ್ಭ ಎದುರಿನ ಪಂದ್ಯದಲ್ಲಿ 157 ರನ್‌ಗಳನ್ನು ಹೊಡೆದು ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು.


ಜಿಮ್‌ನಲ್ಲಿ ಕೆ.ಎಲ್. ರಾಹುಲ್ ಕಸರತ್ತು  ಇನ್ಸ್ಟಾಗ್ರಾಮ್ ಚಿತ್ರ

ಅದರ ನಂತರದ ೃತುವಿನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್ ಆದರು. 2014ರಲ್ಲಿ ಭಾರತ ತಂಡದ ಕರೆ ಬಂದಿತು. ಆದರೆ, ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಆಡಲು ಅವರು ಆಯ್ಕೆಯಾಗಿದ್ದರು. ಅದೇ ಸರಣಿಯಲ್ಲಿ ಮಹೇಂದ್ರಸಿಂಗ್ ಧೋನಿ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಚೊಚ್ಚಲ ಟೆಸ್ಟ್‌ನಲ್ಲಿ ಮಿಂಚಲಿಲ್ಲ. ಆದರೆ, ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸಿಬಿಟ್ಟರು.  ‘ಮತ್ತೊಬ್ಬ ರಾಹುಲ್’ ಉದಯಿಸಿದ ಎಂದು ಕ್ರಿಕೆಟ್ ವಲಯವು ರಾಹುಲ್ ದ್ರಾವಿಡ್ ಅವರ ಆಟವನ್ನು ನೆನಪಿಸಿಕೊಂಡರು.

ಆದರೆ, ಕೆ.ಎಲ್. ರಾಹುಲ್ ಅವರ ಶೈಲಿ ಕೇವಲ ಟೆಸ್ಟ್‌ಗೆ ಸೀಮಿತವಾಗಲಿಲ್ಲ. ಏಕದಿನ ಮತ್ತು ಟ್ವೆಂಟಿ–20 ಮಾದರಿಗಳಲ್ಲಿಯೂ ಶತಕ ದಾಖಲಿಸಿದರು. ಮೂರು ಮಾದರಿಗಳಲ್ಲಿಯೂ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಸ್ಥಾನ ಪಡೆದರು. ಐಪಿಎಲ್‌ನಲ್ಲಿ ಬ್ಯಾಟಿಂಗ್ ಜೊತೆಗೆ ಕೀಪಿಂಗ್‌ನಲ್ಲಿಯೂ ಮಿಂಚಿದರು. ಇದೀಗ ತಮ್ಮ ವಿಶ್ವಕಪ್ ಅಂಗಳದಲ್ಲಿ ಅಗ್ನಿಪರೀಕ್ಷೆ ಎದುರಿಸಲು ಸಿದ್ಧರಾಗಿದ್ದಾರೆ. ಅಗಾಧ ಪೈಪೋಟಿಯ ನಡುವೆಯೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

‘ದೇಶಕ್ಕಾಗಿ ಆಡುವ ಸೌಭಾಗ್ಯ ನನ್ನದಾಗಿದೆ. ಅದನ್ನು ಸದಾ ಗೌರವಿಸುತ್ತೇನೆ. ಬಾಲ್ಯದಿಂದಲೂ ಕಂಡಿದ್ದ ಕನಸು ಅದು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಆಡುತ್ತೇನೆ. ತುಂಬಾ ಪರಿಶ್ರಮದಿಂದ ಆಡಿ ಕೌಶಲ್ಯವನ್ನು ಮತ್ತಷ್ಟು ಉತ್ತಮವಾಗಿಸಿಕೊಳ್ಳುತ್ತಿದ್ದೇನೆ’ ಎಂದು ರಾಹುಲ್ ಸಂತಸ ವ್ಯಕ್ತಪಡಿಸುತ್ತಾರೆ. ಅವರ ಮಿಂಚಿನಾಟದ ನಿರೀಕ್ಷೆಯಲ್ಲಿ ಇಡೀ ದೇಶದ ಕ್ರಿಕೆಟ್‌ ಅಭಿಮಾನಿಗಳಿದ್ದಾರೆ.

ಕೆ.ಎಲ್. ರಾಹುಲ್ (27)

ಪಂದ್ಯ: 14

ರನ್: 343

ಶ್ರೇಷ್ಠ: 100*

ಶತಕ; 01

ಅರ್ಧಶತಕ: 02

ಸಿಕ್ಸರ್; 05

ಬೌಂಡರಿ: 26

ಅಪ್ಪ: ಲೋಕೇಶ್

ಅಮ್ಮ: ರಾಜೇಶ್ವರಿ ಲೋಕೇಶ್

 

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !