ಶುಕ್ರವಾರ, ಜನವರಿ 28, 2022
25 °C

ರಹಾನೆಗೆ ವಿರಾಟ್ ಕೊಹ್ಲಿ ಬೆಂಬಲ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್‌ ವೈಫಲ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಅವರನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ. 

ನ್ಯೂಜಿಲೆಂಡ್ ಎದುರಿನ ಮೊದಲ ಪಂದ್ಯ ಡ್ರಾ ಆಗಿತ್ತು. ಆ ಪಂದ್ಯದಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದ್ದರು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 35 ಮತ್ತು ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ರನ್ ಮಾತ್ರ ಗಳಿಸಲು ಅವರಿಗೆ ಸಾಧ್ಯವಾಗಿತ್ತು. ಹಿಂದಿನ 12 ಪಂದ್ಯಗಳಲ್ಲಿ ಅವರ ಒಟ್ಟಾರೆ ಸರಾಸರಿ 20ಕ್ಕೂ ಕಡಿಮೆ. 32 ವರ್ಷದ ಅಜಿಂಕ್ಯ ಅವರನ್ನು ಮುಂಬೈ ಟೆಸ್ಟ್‌ಗೆ ಆಯ್ಕೆ ಮಾಡಿರಲಿಲ್ಲ. 

‘ಹಿಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದವರು ಸ್ವಲ್ಪ ಹಿನ್ನಡೆ ಅನುಭವಿಸಿದಾಗ ಎಲ್ಲರೂ ಅವರಿಗೆ ನೈತಿಕ ಬೆಂಬಲ ನೀಡಬೇಕು. ನಿಮಗೆ ಈಗ ಏನಾಗಿದೆ ಎಂದು ಯಾರೂ ಕೇಳಬಾರದು‘ ಎಂದು ಕೊಹ್ಲಿ ಹೇಳಿದರು. 

ಮನಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲ

ಮುಖ್ಯ ಕೋಚ್ ಸೇರಿದಂತೆ ತಂಡದ ನೆರವು ಸಿಬ್ಬಂದಿ ಬದಲಾಗಿದ್ದರೂ ಆಟಗಾರರ ಮನಸ್ಥಿತಿಯಲ್ಲಿ ಮಹತ್ವದ ಬದಲಾವಣೆಗಳೇನೂ ಆಗಿಲ್ಲ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು. 

ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿ ಅವರ ಸ್ಥಾನದಲ್ಲಿ ಈಗ ರಾಹುಲ್ ದ್ರಾವಿಡ್ ಇದ್ದಾರೆ. ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್ ಸ್ಥಾನಕ್ಕೆ ಪಾರಸ್ ಮಹಾಂಬ್ರೆ ಅವರು ಬಂದಿದ್ದು ಆರ್‌.ಶ್ರೀಧರ್‌ ಬದಲಿಗೆ ಬೌಲಿಂಗ್ ಕೋಚ್ ಆಗಿ ಟಿ.ದಿಲೀಪ್ ತಂಡದೊಂದಿಗೆ ಇದ್ದಾರೆ.

ಆಟಗಾರರ ಜೊತೆ ಸಂವಾದ ಅಗತ್ಯ: ದ್ರಾವಿಡ್‌

ಆಯ್ಕೆಯ ಸಂದರ್ಭದಲ್ಲಿ ಸಮಸ್ಯೆಗಳು ತಲೆದೋರಿದಾಗ ಆಟಗಾರರ ಜೊತೆ ಆಯ್ಕೆ ಸಮಿತಿಯವರು ಸಂವಾದ ನಡೆಸಬೇಕಾದ ಅಗತ್ಯವಿದೆ ಎಂದು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟರು. 

ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಯಿಂದ ಆರಂಭಕಾರ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ವೇಳೆ ವಿಶ್ರಾಂತಿ ಪಡೆದುಕೊಂಡಿದ್ದರು. ಶ್ರೇಯಸ್ ಅಯ್ಯರ್ ಮತ್ತು ಮಯಂಕ್ ಅಗರವಾಲ್ ಕ್ರಮವಾಗಿ ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಅಕ್ಷರ್ ಪಟೇಲ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಾಮರ್ಥ್ಯ ತೋರಿದ್ದರು. ಜಯಂತ್ ಯಾದವ್ ಎರಡನೇ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಉರುಳಿಸಿದ್ದರು.

ಮುಂದಿನ ದಿನಗಳಲ್ಲಿ ತಂಡಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಇದರ ಪರಿಹಾರಕ್ಕೆ ಆಟಗಾರರ ಜೊತೆ ಸಂವಾದ ನಡೆಸುವ ಅಗತ್ಯವಿದೆ ಎಂದು ದ್ರಾವಿಡ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು