ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರತ್ ದಾಳಿಗೆ ಶರಣಾದ ಮೈಸೂರು

ಕೆಪಿಎಲ್: ಶಿವಮೊಗ್ಗ ಲಯನ್ಸ್‌ಗೆ ಸತತ ಎರಡನೇ ಜಯ; ಸಿದ್ಧಾರ್ಥ ಅರ್ಧಶತಕ ವ್ಯರ್ಥ
Last Updated 18 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗ ಲಯನ್ಸ್‌ ಮತ್ತೊಮ್ಮೆ ಗರ್ಜಿಸಿತು. ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ತಂಡದ ವಿರೋಚಿತ ಹೋರಾಟಕ್ಕೆ ಫಲ ಸಿಗಲಿಲ್ಲ. ಅದಕ್ಕೆ ಕಾರಣರಾಗಿದ್ದು ‘ಮಂಡ್ಯದ ಹುಡುಗ’ ಎಚ್‌.ಎಸ್. ಶರತ್ (36ಕ್ಕೆ3) ಅವರ ಮೊನಚಾದ ದಾಳಿ. ಲಯನ್ಸ್ ತಂಡವು 14 ರನ್‌ಗಳಿಂದ ಗೆದ್ದಿತು. ಶಿವಮೊಗ್ಗ ತಂಡವು ಶನಿವಾರ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಜಯಿಸಿತ್ತು.

ಮೈಸೂರು ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಿವಮೊಗ್ಗ ತಂಡವು ಪವನ್ ದೇಶಪಾಂಡೆ (53; 42ಎಸೆತ, 3ಬೌಂಡರಿ, 2ಸಿಕ್ಸರ್) ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 166 ರನ್ ಗಳಿಸಿತು. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಪವನ್ ದೇಶಪಾಂಡೆ ಅತಿ ಹೆಚ್ಚು ಮೌಲ್ಯ ಪಡೆದು ಲಯನ್ಸ್‌ ತಂಡ ಸೇರಿದ್ದರು. ತಂಡವು 60 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡ ಸಂದರ್ಭದಲ್ಲಿ ಅವರು ಏಕಾಂಗಿ ಹೋರಾಟ ನಡೆಸಿದರು. 42 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ದೊಡ್ಡ ಮೊತ್ತದ ಜೊತೆಯಾಟ ಕುದುರಿಸಲು ಅವರಿಗೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಸೂಕ್ತ ಬೆಂಬಲ ಲಭಿಸಲಿಲ್ಲ.

ಈ ಗುರಿ ಬೆನ್ನಟ್ಟಿದ ಅಮಿತ್ ವರ್ಮಾ ಬಳಗವು 19.2 ಓವರ್‌ಗಳಲ್ಲಿ 152 ರನ್‌ ಗಳಿಸಿ ಆಲೌಟ್ ಆಯಿತು. ಲಯನ್ಸ್ ತಂಡದ ಮಧ್ಯಮವೇಗಿ ಎಚ್‌.ಎಸ್. ಶರತ್ ಅವರು ಎದುರಾಳಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಶೋಯಬ್ ಮ್ಯಾನೇಜರ್, ಜೆ. ಸುಚಿತ್ ಮತ್ತು ಅನಿರುದ್ಧ ಜೋಶಿ ಅವರ ವಿಕೆಟ್ ಕಬಳಿಸಿದರು. ಇದರಿಂದಾಗಿ ಮಧ್ಯಮ ಕ್ರಮಾಂಕವು ಕುಸಿಯಿತು. ಮೈಸೂರಿನ ಆರಂಭಿಕ ಬ್ಯಾಟ್ಸ್‌ಮನ್ ಕೆ.ವಿ. ಸಿದ್ಧಾರ್ಥ್ (77; 54ಎಸೆತ, 10ಬೌಂಡರಿ, 1ಸಿಕ್ಸರ್) ಅವರ ಹೋರಾಟ ಫಲಿಸಲಿಲ್ಲ.

ಶಿವಮೊಗ್ಗದ ಶರತ್‌ಗೆ ಉತ್ತಮ ಜೊತೆ ನೀಡಿದ ಟಿ.ಪ್ರದೀಪ್ ಕೂಡ ಮೂರು ವಿಕೆಟ್ ಕಿತ್ತರು. ಅನುಭವಿ ಬೌಲರ್ ಅಭಿಮನ್ಯು ಮಿಥುನ್ ಮತ್ತು ಎಸ್‌.ಪಿ. ಮಂಜುನಾಥ್ ಕೂಡ ತಲಾ ಎರಡು ವಿಕೆಟ್ ಗಳಿಸಿ ತಮ್ಮ ತಂಡದ ಜಯಕ್ಕೆ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 166 (ಅರ್ಜುನ್ ಹೊಯ್ಸಳ 28, ನಿಹಾಲ್ ಉಳ್ಳಾಲ 28, ಅಕ್ಷಯ್ ಬಲ್ಲಾಳ 13, ಪವನ್ ದೇಶಪಾಂಡೆ 53, ಎಚ್‌.ಎಸ್. ಶರತ್ 10, ಎಸ್‌.ಪಿ. ಮಂಜುನಾಥ್ 14, ಅಭಿಮನ್ಯು ಮಿಥುನ್ 10, ಕೆ.ಎಸ್. ದೇವಯ್ಯ 17ಕ್ಕೆ1, ವೈಶಾಖ್ ವಿಜಯಕುಮಾರ್ 41ಕ್ಕೆ2, ಅನಿರುದ್ಧ ಜೋಶಿ 23ಕ್ಕೆ1, ಎಂ. ವೆಂಕಟೇಶ್ 26ಕ್ಕೆ1 ಸಿದ್ಧಾರ್ಥ್ 4ಕ್ಕೆ1) ಮೈಸೂರು ವಾರಿಯರ್ಸ್: 19.2 ಓವರ್‌ಗಳಲ್ಲಿ 152 (ಸಿದ್ಧಾರ್ಥ್ 77, ಅಮಿತ್ ವರ್ಮಾ 14, ಅನಿರುದ್ಧ ಜೋಶಿ 26, ಎಂ. ವೆಂಕಟೇಶ್ 13, ಅಭಿಮನ್ಯು ಮಿಥುನ್ 34ಕ್ಕೆ2, ಟಿ. ಪ್ರದೀಪ್ 22ಕ್ಕೆ3, ಎಚ್‌.ಎಸ್. ಶರತ್ 25ಕ್ಕೆ3, ಎಸ್‌.ಪಿ. ಮಂಜುನಾಥ್ 17ಕ್ಕೆ2) ಫಲಿತಾಂಶ: ಶಿವಮೊಗ್ಗ ಲಯನ್ಸ್‌ ತಂಡಕ್ಕೆ 14 ರನ್‌ಗಳ ಜಯ. ಪಂದ್ಯಶ್ರೇಷ್ಠ: ಎಚ್.ಎಸ್. ಶರತ್.

ಇಂದಿನ ಪಂದ್ಯಗಳು: ಹುಬ್ಬಳ್ಳಿ ಟೈಗರ್ಸ್–ಬಳ್ಳಾರಿ ಟಸ್ಕರ್ಸ್‌ (ಮಧ್ಯಾಹ್ನ 3) ಮೈಸೂರು ವಾರಿಯರ್ಸ್–ಬೆಳಗಾವಿ ಪ್ಯಾಂಥರ್ಸ್ (ಸಂಜೆ 7)

ಬೆಳಗಾವಿ ತಂಡಕ್ಕೆ ಮರಳಿದ ಮನೀಷ್
ಬೆಂಗಳೂರು:
ಭಾರತ ತಂಡದ ಆಟಗಾರ ಮನೀಷ್ ಪಾಂಡೆ ಭಾನುವಾರ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಮರಳಿದ್ದಾರೆ.

ವೆಸ್ಟ್ ಇಂಡೀಸ್‌ನಲ್ಲಿ ಈಚೆಗೆ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಬೆಳಗಾವಿ ತಂಡವು ಖರೀದಿಸಿತ್ತು.

ಇದೀಗ ಅವರು ಕೆಪಿಎಲ್‌ಗೆ ಮರಳಿದ್ದಾರೆ. ಸೋಮವಾರ ಮೈಸೂರು ವಾರಿಯರ್ಸ್‌ ಎದುರು ನಡೆಯಲಿರುವ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೆಪಿಎಲ್ ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT