ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಪಿಎಲ್‌: ಟೈಗರ್ಸ್‌ ಗರ್ಜನೆ, ಪ್ಲೇ ಆಫ್‌ಗೆ ಅರ್ಹತೆ

ವಿನಯ್‌ ಕುಮಾರ್‌ ಭರ್ಜರಿ ಬ್ಯಾಟಿಂಗ್
Last Updated 27 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಮೈಸೂರು: ಆರ್‌.ವಿನಯ್‌ ಕುಮಾರ್‌ ಅವರು ಹುಬ್ಬಳ್ಳಿ ಟೈಗರ್ಸ್‌ ತಂಡಕ್ಕೆ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ‘ಪ್ಲೇ ಆಫ್‌’ ಹಂತದಲ್ಲಿ ಸ್ಥಾನ ದೊರಕಿಸಿಕೊಟ್ಟರು. ಆದರೆ ಬೌಲಿಂಗ್‌ ಪ್ರದರ್ಶನದಿಂದಲ್ಲ. ಭರ್ಜರಿ ಬ್ಯಾಟಿಂಗ್‌ನಿಂದ ಎಂಬುದು ವಿಶೇಷ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಟೈಗರ್ಸ್‌ ಏಳು ವಿಕೆಟ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್‌ಗೆ ಸೋಲುಣಿಸಿತು. 51 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ ಅಜೇಯ 81 ರನ್‌ ಗಳಿಸಿದ ವಿನಯ್‌ ಗೆಲುವಿನ ರೂವಾರಿಯಾದರು.

ಮೊದಲು ಬ್ಯಾಟ್‌ ಮಾಡಿದ ಬ್ಲಾಸ್ಟರ್ಸ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 158 ರನ್‌ ಗಳಿಸಿದರೆ, ಹುಬ್ಬಳ್ಳಿ 17.4 ಓವರ್‌ಗಳಲ್ಲಿ 3 ವಿಕೆಟ್‌ಗೆ 164 ರನ್‌ ಗಳಿಸಿ ಜಯ ಸಾಧಿಸಿತು.

ಉತ್ತಮ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಗೆಲುವು ತಂದುಕೊಡಬೇಕು ಎಂಬ ಲೆಕ್ಕಾಚಾರವನ್ನು ವಿನಯ್‌ ಮೊದಲೇ ಹಾಕಿಕೊಂಡಂತೆ ಕಂಡುಬಂತು. ‘ಎನರ್ಜಿ’ ಕಾಪಾಡಿಕೊಳ್ಳುವ ಉದ್ದೇಶದಿಂದ ಅವರು ಬೌಲಿಂಗ್‌ ಮಾಡಲಿಲ್ಲ.

ಮೊದಲ ವಿಕೆಟ್‌ ಬಿದ್ದೊಡನೆ ಕ್ರೀಸ್‌ಗೆ ಬಂದು ಕಲಾತ್ಮಕ ಆಟದ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಮೊಹಮ್ಮದ್‌ ತಾಹ (48, 31 ಎಸೆತ, 3 ಬೌಂ, 4 ಸಿ) ಜತೆ ಎರಡನೇ ವಿಕೆಟ್‌ಗೆ 105 ರನ್‌ ಸೇರಿಸಿದರು.

ತಾಹ ಮತ್ತು ಬಳಿಕ ಬಂದ ಕೆ.ಬಿ.ಪವನ್‌ ಔಟಾದರೂ ಕೆ.ಎಲ್‌.ಶ್ರೀಜಿತ್‌ (ಅಜೇಯ17) ಜತೆ ಸೇರಿಕೊಂಡು ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಮಿಂಚಿದ ಮಥಾಯಸ್‌: ಮೊದಲು ಬ್ಯಾಟ್‌ ಮಾಡಿದ ಬ್ಲಾಸ್ಟರ್ಸ್‌ ತಂಡಕ್ಕೆ ಡೇವಿಡ್‌ ಮಥಾಯಸ್‌ (30ಕ್ಕೆ 4) ಮತ್ತು ಆದಿತ್ಯ ಸೋಮಣ್ಣ ಆಘಾತ ನೀಡಿದರು. ಭರತ್‌ ಧುರಿ (42, 30 ಎಸೆತ, 1 ಬೌಂ, 4 ಸಿಕ್ಸರ್) ಕೊನೆಯಲ್ಲಿ ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 158 (ರೋಹನ್‌ ಕದಮ್ 12, ಆರ್‌.ಜೊನಾಥನ್‌ 15, ಕುಲದೀಪ್‌ ಕುಮಾರ್ 19, ಮನೋಜ್‌ ಭಾಂಡಗೆ 28, ಭರತ್‌ ಧುರಿ 42, ಡೇವಿಡ್‌ ಮಥಾಯಸ್ 30ಕ್ಕೆ 4, ಆದಿತ್ಯ ಸೋಮಣ್ಣ 36ಕ್ಕೆ 2)

ಹುಬ್ಬಳ್ಳಿ ಟೈಗರ್ಸ್ 17.4 ಓವರ್‌ಗಳಲ್ಲಿ 3 ವಿಕೆಟ್‌ಗೆ 164 (ಆರ್‌.ವಿನಯ್‌ ಕುಮಾರ್ ಔಟಾಗದೆ 81, ಮೊಹಮ್ಮದ್‌ ತಾಹ 48, ಕೆ.ಬಿ.ಪವನ್‌ 11, ಕೆ.ಎಲ್‌.ಶ್ರೀಜಿತ್‌ ಔಟಾಗದೆ 17)

ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 7 ವಿಕೆಟ್‌ ಗೆಲುವು

ಪಂದ್ಯಶ್ರೇಷ್ಠ: ವಿನಯ್‌ ಕುಮಾರ್

**

ಹೊರಬಿದ್ದ ಮೈಸೂರು ವಾರಿಯರ್ಸ್
ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಹುಬ್ಬಳ್ಳಿ ಗೆದ್ದ ಕಾರಣ ಮೈಸೂರು ವಾರಿಯರ್ಸ್‌ ತಂಡದ ‘ಪ್ಲೇ ಆಫ್‌’ ಪ್ರವೇಶದ ಕನಸು ಭಗ್ನಗೊಂಡಿತು. ಬ್ಲಾಸ್ಟರ್ಸ್‌ ಗೆದ್ದಿದ್ದರೆ ಉತ್ತಮ ರನ್‌ರೇಟ್‌ ಆಧಾರದಲ್ಲಿ ವಾರಿಯರ್ಸ್‌ ಪ್ಲೇ ಆಫ್‌ ಪ್ರವೇಶಿಸುತ್ತಿತ್ತು.

ಹುಬ್ಬಳ್ಳಿ ಮತ್ತು ಮೈಸೂರು ತಲಾ ಆರು ಪಾಯಿಂಟ್‌ ಗಳಿಸಿದವು. ಆದರೆ ಮೂರು ಗೆಲುವು ಪಡೆದಿರುವ ಹುಬ್ಬಳ್ಳಿ ಮುಂದಿನ ಹಂತ ಪ್ರವೇಶಿಸಿತು.

ಹುಬ್ಬಳ್ಳಿ ಜತೆ ಬಳ್ಳಾರಿ ಟಸ್ಕರ್ಸ್‌, ಬೆಳಗಾವಿ ಪ್ಯಾಂಥರ್ಸ್‌ ಮತ್ತು ಶಿವಮೊಗ್ಗ ಲಯನ್ಸ್‌ ತಂಡಗಳು ‘ಪ್ಲೇ ಆಫ್‌’ನಲ್ಲಿ ಆಡಲಿವೆ. ವಾರಿಯರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಬಿಜಾಪುರ ಬುಲ್ಸ್‌ ತಂಡಗಳು ಹೊರಬಿದ್ದವು.

ಸವಾಲಿನ ಮೊತ್ತ
ಮೈಸೂರು:
ಎಂ.ಜಿ.ನವೀನ್‌ (68, 45 ಎಸೆತ, 7 ಬೌಂ, 3 ಸಿ) ಮತ್ತು ರಾಜು ಭಟ್ಕಳ್‌ (66, 45 ಎಸೆತ, 7 ಬೌಂ, 3 ಸಿ) ಅವರ ಅರ್ಧಶತಕದ ನೆರವಿನಿಂದ ಬಿಜಾಪುರ ಬುಲ್ಸ್‌ ತಂಡ ಶಿವಮೊಗ್ಗ ಲಯನ್ಸ್‌ ಗೆಲುವಿಗೆ 196 ರನ್‌ಗಳ ಗುರಿ ನೀಡಿದೆ.

ಸಂಕ್ಷಿಪ್ತ ಸ್ಕೋರು: ಬಿಜಾಪುರ ಬುಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 195 (ಎಂ.ಜಿ.ನವೀನ್‌ 68, ರಾಜು ಭಟ್ಕಳ್ 66, ರಿಷಬ್‌ ಸಿಂಗ್‌ 21ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT