ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌ ‘ಸ್ಪಾಟ್‌ ಫಿಕ್ಸಿಂಗ್‌’: ಗೌತಮ್‌ ಆಮೆಗತಿ ಬ್ಯಾಟಿಂಗ್‌ಗೆ ₹ 15 ಲಕ್ಷ!

37 ಎಸೆತಕ್ಕೆ ಕೇವಲ 29 ರನ್
Last Updated 7 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಎಲ್ ಟೂರ್ನಿಯ 2019ರ ಆವೃತ್ತಿಯ ಫೈನಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ಮತ್ತು ಬಳ್ಳಾರಿ ಟಸ್ಕರ್ಸ್ ಮುಖಾಮುಖಿ ಆಗಿದ್ದವು. ಆ ಪಂದ್ಯದಲ್ಲಿ ಬಳ್ಳಾರಿ ತಂಡದ ನಾಯಕ ಸಿ.ಎಂ. ಗೌತಮ್ 37 ಎಸೆತಗಳಲ್ಲಿ ಕೇವಲ 29 ರನ್ ಗಳಿಸಿದ್ದರು. ಈ ಆಮೆಗತಿಯ ಬ್ಯಾಟಿಂಗ್‌ಗೆ ಅವರು ಪಡೆದಿದ್ದು ₹ 15 ಲಕ್ಷ!

ಕೆಪಿಎಲ್‌ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ‘ಮ್ಯಾಚ್‌ ಫಿಕ್ಸಿಂಗ್‌’ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ದಳದ (ಸಿಸಿಬಿ) ಅಧಿಕಾರಿಗಳು ಗೌತಮ್‌ ಅವರ ಈ ಮೋಸದಾಟವನ್ನು ಪತ್ತೆ ಹಚ್ಚಿದ್ದಾರೆ.

ಟಿ–20 ಮಾದರಿಯ ಈ ಟೂರ್ನಿಯಲ್ಲಿ, ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿದ್ದಕ್ಕೆ ಬೆಳಗಾವಿ ಫ್ಯಾಂಥರ್ಸ್‌ ತಂಡದ ಮಾಲೀಕ ಅಶ್ಫಾಕ್‌ ಅಲಿ ತಾರ್‌ ಈ ಮೊತ್ತವನ್ನು ನೀಡಿದ್ದ ಎಂದೂ ಸಿಸಿಬಿ ಅಧಿಕಾರಿಗಳು ತಿಳಿಸಿದರು.

ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಬಳ್ಳಾರಿ ನಡುವಿನ ಪಂದ್ಯದ 5ನೇ ಓವರ್‌ನಲ್ಲಿ 10 ರನ್‍ ಕೊಡಬೇಕು ಎಂದು ಬಳ್ಳಾರಿ ತಂಡದ ಅಬ್ರಾರ್‌ ಖಾಜಿ ಜೊತೆ ಬುಕ್ಕಿಗಳು ‘ಸ್ಪಾಟ್‌ ಫಿಕ್ಸಿಂಗ್‌’ ಮಾಡಿದ್ದರು. ಇದಕ್ಕೆ ಖಾಜಿಗೆ ₹ 7.5 ಲಕ್ಷ ನೀಡಲಾಗಿತ್ತು. ಮೈಸೂರು ಮತ್ತು ಬಳ್ಳಾರಿ ತಂಡಗಳ ನಡುವಿನ ಪಂದ್ಯದಲ್ಲಿ ತಂಡವನ್ನು ಸೋಲಿಸಲು ಈ ಇಬ್ಬರೂ ಮೊದಲಿಗೆ ತಂಡದ ಮಾಲೀಕ ಅರವಿಂದ್ ರೆಡ್ಡಿ ಸೂಚನೆಯಂತೆ ಒಪ್ಪಿಕೊಂಡಿದ್ದರು. ಆದರೆ ಪಂದ್ಯ ಆರಂಭವಾಗುತ್ತಿದ್ದಂತೆ ನಿಲುವು ಬದಲಿಸಿ, ‘ಫಿಕ್ಸ್’ ನಡೆದಿತ್ತು.

ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದೇ ರೀತಿ ಕೆಪಿಎಲ್‍ನ 2018ರ ಆವೃತ್ತಿಯಲ್ಲಿ ಶಿವಮೊಗ್ಗ ಮತ್ತು ಬಳ್ಳಾರಿ ತಂಡಗಳ ನಡುವಿನ ಪಂದ್ಯವನ್ನು ಟೈ ಮಾಡಿಕೊಂಡು ಸೋಲೊಪ್ಪಿಕೊಳ್ಳಲು ಗೌತಮ್ ಮತ್ತು ಖಾಜಿ ಜತೆ ಮ್ಯಾಚ್ ಫಿಕ್ಸ್ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿಯನ್ನೂ ಸಿಸಿಬಿ ಅಧಿಕಾರಿಗಳು ವಿಚಾರಣೆ ವೇಳೆ ಪತ್ತೆ ಹಚ್ಚಿದ್ದಾರೆ.

ಇದೇ ಹಗರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ಆಟಗಾರ ನಿಶಾಂತ್ ಶೇಖಾವತ್ ವಿಚಾರಣೆ ವೇಳೆ ನೀಡಿದ ಮಾಹಿತಿಗಳನ್ನು ಆಧರಿಸಿ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದೂ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT