ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಕಲಾತ್ಮಕ ಆಟ ಆಡಿದ ಮಾರ್ನಸ್‌ ಲಾಬುಶೇನ್‌ ದಾಖಲೆ

Last Updated 4 ಜನವರಿ 2020, 15:27 IST
ಅಕ್ಷರ ಗಾತ್ರ

ಸಿಡ್ನಿ: ಕಲಾತ್ಮಕ ಆಟ ಆಡಿದ ಮಾರ್ನಸ್‌ ಲಾಬುಶೇನ್‌ (215; 363ಎ, 19ಬೌಂ, 1ಸಿ) ಶನಿವಾರ ಸಿಡ್ನಿ ಮೈದಾನದಲ್ಲಿ ದ್ವಿಶತಕದ ಸಂಭ್ರಮ ಆಚರಿಸಿದರು.

ಬರೋಬ್ಬರಿ 516 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಲಾಬುಶೇನ್‌, ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು.

3 ವಿಕೆಟ್‌ಗೆ 283ರನ್‌ಗಳಿಂದ ಆಟ ಮುಂದುವರಿಸಿದ ಟಿಮ್‌ ಪೇನ್‌ ಪಡೆ 150.1 ಓವರ್‌ಗಳಲ್ಲಿ 454ರನ್‌ ದಾಖಲಿಸಿತು. ಪ್ರಥಮ ಇನಿಂಗ್ಸ್‌ ಶುರುಮಾಡಿರುವ ನ್ಯೂಜಿಲೆಂಡ್‌ ಎರಡನೇ ದಿನದಾಟದ ಅಂತ್ಯಕ್ಕೆ 29 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 63ರನ್‌ ಗಳಿಸಿದೆ.

ಮೊದಲ ದಿನ ನ್ಯೂಜಿಲೆಂಡ್‌ ಬೌಲರ್‌ಗಳನ್ನು ಕಾಡಿದ್ದ 25 ವರ್ಷ ವಯಸ್ಸಿನ ಲಾಬುಶೇನ್‌, ಶನಿವಾರವೂ ಎದುರಾಳಿ ಬೌಲರ್‌ಗಳ ‘ಕಿವಿ’ ಹಿಂಡಿದರು.

ದಾಖಲೆ: ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಬೌಲ್‌ ಮಾಡಿದ 135ನೇ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗಟ್ಟಿದ ಅವರು ಟೆಸ್ಟ್‌ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿದರು.

ತವರಿನಲ್ಲಿ ಆಡಿದ ಹಿಂದಿನ ಐದು ಪಂದ್ಯಗಳಿಂದ (ಏಳು ಇನಿಂಗ್ಸ್‌) ಒಟ್ಟು 837 ರನ್‌ ಕಲೆಹಾಕಿರುವ ಲಾಬುಶೇನ್, ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ನೀಲ್‌ ಹಾರ್ವಿ ಹೆಸರಿನಲ್ಲಿದ್ದ 67 ವರ್ಷಗಳ ಹಿಂದಿನ ದಾಖಲೆ ಅಳಿಸಿಹಾಕಿದರು.

1952–53ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಹಾರ್ವಿ 834ರನ್‌ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌: 150.1 ಓವರ್‌ಗಳಲ್ಲಿ 454 (ಮಾರ್ನಸ್‌ ಲಾಬುಶೇನ್‌ 215, ಮ್ಯಾಥ್ಯೂ ವೇಡ್‌ 22, ಟ್ರಾವಿಸ್‌ ಹೆಡ್‌ 10, ಟಿಮ್‌ ಪೇನ್‌ 35, ಮಿಷೆಲ್‌ ಸ್ಟಾರ್ಕ್‌ 22; ಮ್ಯಾಟ್‌ ಹೆನ್ರಿ 94ಕ್ಕೆ1, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 78ಕ್ಕೆ3, ನೀಲ್‌ ವಾಗ್ನರ್‌ 66ಕ್ಕೆ3, ವಿಲಿಯಮ್‌ ಸಾಮರ್‌ವಿಲ್ 99ಕ್ಕೆ1, ಟಾಡ್‌ ಆ್ಯಷ್ಲೆ 111ಕ್ಕೆ2).

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್; 29 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 63 (ಟಾಮ್‌ ಲಥಾಮ್‌ ಬ್ಯಾಟಿಂಗ್‌ 26, ಟಾಮ್‌ ಬ್ಲಂಡಲ್‌ ಬ್ಯಾಟಿಂಗ್‌ 34).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT