ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಗೈ ಗಾರುಡಿಗರ ಜಯಘೋಷ

Last Updated 15 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಈ ಸಲದ ರಣಜಿ ಟೂರ್ನಿ ಫೈನಲ್ ಮುಗಿಯುವ ಹೊತ್ತಿಗೆ ಸೌರಾಷ್ಟ್ರದ ತಂಡದ ನಾಯಕ ಜಯದೇವ್ ಉನದ್ಕತ್, ತಮ್ಮ ಸಹ ಆಟಗಾರ ಚೇತೇಶ್ವರ್ ಪೂಜಾರ ಅವರಿಂದ ₹ 35 ಸಾವಿರ ವಸೂಲಿ ಮಾಡಿದರಂತೆ. ಏಕೆ ಗೊತ್ತೇ?

ಜಯದೇವ್ ಯಾವುದೇ ಇನಿಂಗ್ಸ್‌ನಲ್ಲಿ ವಿಕೆಟ್‌ಗಳ ಪಂಚಗೊಂಚಲು ಪಡೆದರೆ ಐದು ಸಾವಿರ ಇನಾಮು ನೀಡುವುದಾಗಿ ಪೂಜಾರ ಹೇಳಿದ್ದರು. ಅದೇ ರೀತಿ ಪೂಜಾರ ಶತಕ ಹೊಡೆದರೆ ತಾವೂಅಷ್ಟೇ ಮೊತ್ತದ ಇನಾಮು ನೀಡುವುದಾಗಿ ಜಯದೇವ್ ಹೇಳಿದ್ದರು. ಆದರೆ ಪೂಜರಾರ ಅವರು ಜಯದೇವ್‌ಗೆಏಳು ಬಾರಿ ಇನಾಮು ನೀಡಬೇಕಾಯಿತು.

ಇದಕ್ಕಿಂತ ಮುಖ್ಯವಾಗಿ ಈಗ ಟೂರ್ನಿ ಮುಗಿದ ಮೇಲೂ ಚರ್ಚೆಯ ಕೇಂದ್ರಬಿಂದು ಆಗಿರುವವರು ಜಯದೇವ್ ಮಾತ್ರ. ಅದಕ್ಕೆ ಕಾರಣ ಅವರ ಎಡಗೈ ಮಧ್ಯಮವೇಗದ ಬೌಲಿಂಗ್. ಈ ಸಲ ಅವರು 67 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯ ಶ್ರೇಷ್ಠ ಬೌಲರ್‌ ಆಗಿದ್ದಾರೆ. ಅದರಿಂದಾಗಿ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕೆಂಬ ಆಗ್ರಹಗಳು ಹಿರಿಯ ಕ್ರಿಕೆಟಿಗರಿಂದ ಕೇಳಿಬರುತ್ತಿವೆ. ಕಳೆದ ಐದಾರು ವರ್ಷಗಳಿಂದ ಭಾರತ ತಂಡವು ಹುಡುಕಾಡುತ್ತಿರುವ ಎಡಗೈ ಮಧ್ಯಮವೇಗಿಯ ಸ್ಥಾನಕ್ಕೆ ಜಯದೇವ್ ಸರಿಹೊಂದುತ್ತಾರೆಂಬ ವಿಶ್ವಾಸವೂ ಮೂಡಿದೆ. ಆದರೆ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಅವರಿರುವ ಮಧ್ಯಮವೇಗಿಗಳ ಪಡೆಯು ಭಾರತ ತಂಡವನ್ನು ಬಲಿಷ್ಠಗೊಳಿಸಿದೆ ಇದರಲ್ಲಿ ಜಯದೇವ್‌ ಅವರಿಗೆ ಹೇಗೆ ಸ್ಥಾನ ನೀಡಬಹುದು ಎಂಬ ಚರ್ಚೆಯೂ ಗರಿಗೆದರಿದೆ.

ಇದರೊಂದಿಗೆ ರಾಷ್ಟ್ರೀಯ ತಂಡದಲ್ಲಿ ಎಡಗೈ ಮಧ್ಯಮವೇಗಿಯ ಇರುವಿಕೆಯ ಮಹತ್ವದ ಕುರಿತು ಕೂಡ ಸ್ವಾರಸ್ಯಕರ ಚರ್ಚೆಗಳು ನಡೆಯುತ್ತಿವೆ. ವಸೀಂ ಅಕ್ರಂ, ವಹಾಬ್ ರಿಯಾಜ್, ಮಿಚೆಲ್ ಜಾನ್ಸನ್, ಟ್ರೆಂಟ್ ಬೌಲ್ಟ್‌, ಚಮಿಂದಾ ವಾಸ್, ಇರ್ಫಾನ್ ಪಠಾಣ್ ಅವರ ಎಡಗೈ ಸ್ವಿಂಗ್‌ ಎಸೆತಗಳ ಸೊಬಗು ನೋಡುವುದೇ ಚೆಂದ. ಆದರೆ, ಪಾಕಿಸ್ತಾನ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ತಂಡಗಳಿಗೆ ಹೋಲಿಸಿದರೆ ಭಾರತದಲ್ಲಿ ಎಡಗೈ ಮಧ್ಯಮವೇಗಿಗಳ ಸಂಖ್ಯೆ ಕಡಿಮೆ. ಈ ಬಾರಿಯ ದೇಶಿ ಋತುವು ಈ ವಿಷಯದಲ್ಲಿ ತುಸು ಆಶಾದಾಯಕವೆನ್ನಬಹುದು.

ಉನದ್ಕತ್, ಗುಜರಾತ್ ತಂಡದ ರುಶ್ ಕಲೇರಿಯಾ, ರಾಜಸ್ಥಾನದ ಖಲೀಲ್ ಅಹಮದ್ ಮತ್ತು ಕರ್ನಾಟಕದ ಪ್ರತೀಕ್ ಜೈನ್ ಭರವಸೆ ಮೂಡಿಸಿದ್ದಾರೆ.

‘ಮ್ಯಾಚ್‌ ವಿನ್ನರ್‌’ ಜಹೀರ್ ಖಾನ್ ನಿವೃತ್ತಿಯ ನಂತರದ ಹುಡುಕಾಟಕ್ಕೆ ಇನ್ನೂ ಅಂತ್ಯ ಸಿಕ್ಕಿಲ್ಲ. 2000ರಿಂದ 2014ರವರೆಗೆ ಜಹೀರ್ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದರು. ಈ ಅವಧಿಯಲ್ಲಿ ಇರ್ಫಾನ್ ಪಠಾಣ್, ರುದ್ರಪ್ರತಾಪ್ ಸಿಂಗ್, ಆಶಿಶ್ ನೆಹ್ರಾ ಕೂಡ ತಮ್ಮ ಹೆಜ್ಜೆಗುರುತು ಮೂಡಿಸಿ ಹೋದರು. ಆದರೆ ಇವರೆಲ್ಲರನ್ನೂ ಗಾಯದ ಸಮಸ್ಯೆ ಹಣ್ಣುಗಾಯಿ ನೀರುಗಾಯಿ ಮಾಡಿದ್ದು ಭಾರತ ತಂಡಕ್ಕೆ ಆದ ನಷ್ಟ. ಆದರೆ, ಇದರಲ್ಲಿ ಜಹೀರ್ ತುಸು ಹೆಚ್ಚು ಫಿಟ್‌ ಆಗಿದ್ದರಿಂದ ದೊಡ್ಡ ಸಾಧನೆ ಮಾಡಿದರು. ಇದೇ ಅವಧಿಯಲ್ಲಿ ಜಯದೇವ್ ಉನದ್ಕತ್ ಕೂಡ ಬಂದು ಹೋದರು. 2010 ರಿಂದ 2016ರವರೆಗೆ ಒಂದು ಟೆಸ್ಟ್, ಏಳು ಏಕದಿನ ಮತ್ತು 10 ಟಿ20 ಪಂದ್ಯಗಳಲ್ಲಿ ಆಡಿದರು. ಆದರೆ, ಜಹೀರ್, ಇರ್ಫಾನ್, ನೆಹ್ರಾರನ್ನು ಮೀರಿಸುವಂತಹ ಸಾಧನೆ ಅವರದ್ದಾಗಿರಲಿಲ್ಲ.

ಆದರೆ, ಕಳೆದ ಐದು ವರ್ಷಗಳಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಬೌಲರ್‌ ಜೊತೆಗೆ ನಾಯಕನಾಗಿಯೂ ಜಯದೇವ್ ಬೆಳೆದಿದ್ದಾರೆ. ಅವರ ಔಟ್ ಸ್ವಿಂಗ್, ಇನ್‌ಸ್ವಿಂಗ್, ರಿವರ್ಸ್ ಸ್ವಿಂಗ್ ಮತ್ತು ಲೆಗ್‌ಕಟರ್‌ ಅಸ್ತ್ರಗಳು ಮತ್ತಷ್ಟು ಹರಿತವಾಗಿವೆ. ಈ ಬಾರಿಯ ರಣಜಿ ಋತುವಿನಲ್ಲಿ ಅವರು ಏಳು ಬಾರಿ ‘ವಿಕೆಟ್ ಪಂಚಗೊಂಚಲು’ ಸಾಧನೆ ಮಾಡಿರುವುದು ಗಮನಾರ್ಹ.

ಬಲಗೈ ಮಧ್ಯಮವೇಗಿಗಳು, ಸ್ಪಿನ್ನರ್‌ಗಳ ಜೊತೆಗೆ ಒಬ್ಬ ಎಡಗೈ ಮಧ್ಯಮವೇಗಿ ಇದ್ದರೆ ಅದು ತಂಡಕ್ಕೆ ಪ್ಲಸ್‌ ಪಾಯಿಂಟ್ ಆಗುತ್ತದೆ. ಏಕೆಂದರೆ, ಒಬ್ಬ ಬಲಗೈವೇಗಿಯು ರೌಂಡ್‌ ದ ವಿಕೆಟ್‌ ಬೌಲಿಂಗ್ ನಲ್ಲಿ ಮಾಡುವ ಪರಿಣಾಮವನ್ನು ಎಡಗೈ ವೇಗಿ ಸಹಜವಾಗಿಯೇ ಮಾಡಬಹುದು. ಅದರಿಂದಾಗಿ ಬಲಗೈ ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಟಾನ್ಸ್‌ನಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಇತ್ತೀಚೆಗೆ ನ್ಯೂಜಿಲೆಂಡ್‌ನಲ್ಲಿ ಟ್ರೆಂಟ್‌ ಬೌಲ್ಟ್‌ ಎಸೆತಗಳನ್ನು ಎದುರಿಸುವಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಪರದಾಡಿದ್ದನ್ನು ನೋಡಿದ್ದೇವಲ್ಲವೇ?

ಐಪಿಎಲ್‌ನಲ್ಲಿಯೂ ಜಯದೇವ್ ಉತ್ತಮವಾಗಿ ಆಡಿರುವ ದಾಖಲೆಗಳಿವೆ. ಆದ್ದರಿಂದ ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡದ ಆಯ್ಕೆಗೆ 28ರ ಹರೆಯದ ಜಯದೇವ್ ಆಯ್ಕೆಯಾದರೂ ಅಚ್ಚರಿಯೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT