ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸನ್ನಿ@75

Published 9 ಜುಲೈ 2024, 21:57 IST
Last Updated 9 ಜುಲೈ 2024, 21:57 IST
ಅಕ್ಷರ ಗಾತ್ರ

ಭಾರತದ ಕ್ರಿಕೆಟ್‌ನಲ್ಲಿ ಸತತ ಆರು ದಶಕಗಳಿಂದ ಸದಾ ಸುದ್ದಿಯಲ್ಲಿರುವ ವ್ಯಕ್ತಿಯೆಂದರೆ ಸುನಿಲ್ ಮನೋಹರ್ ಗಾವಸ್ಕರ್.

ಆಡುವ ಕಾಲದಲ್ಲಿ ತಮ್ಮ ಬ್ಯಾಟಿಂಗ್ ಶೈಲಿ, ದಾಖಲೆಗಳು, ನಾಯಕತ್ವ, ವಿವಾದಗಳು ಮತ್ತು ನಿವೃತ್ತಿಯ ನಂತರ ವೀಕ್ಷಕ ವಿವರಣೆಗಾರನಾಗಿ ಸದಾ ಮಿಂಚುತ್ತಲೇ ಇದ್ದಾರೆ.  ಆ ಮೂಲಕ ಈ ಕಾಲಘಟ್ಟದ ಎಲ್ಲ ಪೀಳಿಗೆಯ ಕ್ರಿಕೆಟ್‌ ಅಭಿಮಾನಿಗಳಲ್ಲಿ ‘ಸನ್ನಿ’ ಚಿರಪರಿಚಿತರು. ಬುಧವಾರ ಅವರಿಗೆ  75ನೇ ಜನ್ಮದಿನದ ಸಂಭ್ರಮ.

1970ರ ದಶಕದಲ್ಲಿ ಭಾರತದ ಕ್ರಿಕೆಟ್ ಬೆಳವಣಿಗೆಯ ಹಾದಿಯಲ್ಲಿತ್ತು.  ಇ.ಎ.ಎಸ್. ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಬಿಷನ್ ಸಿಂಗ್ ಬೇಡಿ,  ಏಕನಾಥ್ ಸೋಳ್ಕರ್, ಅಜಿತ್ ವಾಡೇಕರ್,  ಎಸ್. ವೆಂಕಟರಾಘವನ್, ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಹೆಸರುಗಳು ಕ್ರಿಕೆಟ್‌ ಅಭಿಮಾನಿಗಳಿಗೆ ಚಿರಪರಿಚಿತವಾಗಿದ್ದವು. ಬಾನುಲಿಯ ಕಾಮೆಂಟ್ರಿ ಮತ್ತು ಸುದ್ದಿಪತ್ರಿಕೆಗಳ ಮೂಲಕ ಅವರ ಸಾಧನೆಗಳು ಜನಮಾನಸಕ್ಕೆ ತಲುಪುತ್ತಿದ್ದ ಕಾಲ ಅದು.

ಅದೇ ಕಾಲಘಟ್ಟದಲ್ಲಿ ಮುಂಬೈನ ಮಧ್ಯಮವರ್ಗದ, ಮರಾಠಿಭಾಷಿಕ ಕುಟುಂಬದ ಹುಡುಗ ಸನ್ನಿ, ಕ್ರಿಕೆಟ್ ಅಂಗಳಕ್ಕೆ ಇಳಿಯುತ್ತಾರೆ. ಆದರೆ ಗಂಭೀರವಾಗಿ ಆಟವನ್ನು ಅಪ್ಪಿಕೊಂಡಿದ್ದು ತಮ್ಮ ಸೋದರಮಾವ ಮಾಧವ ಮಂತ್ರಿ ಅವರು ಹೇಳಿದ್ದ ಒಂದು ಮಾತಿನಿಂದ ಎಂದು ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಗಾವಸ್ಕರ್ ನೆನಪಿಸಿಕೊಂಡಿದ್ದರು.

‘ಕ್ರಿಕೆಟ್‌ಗೆ ಸಂಬಂಧಿಸಿದಂತೆ ನಾನು ಮೊದಲ ಪಾಠ ಕಲಿತದ್ದು ನನ್ನ ಸೋದರಮಾವ ಮಾಧವ ಮಂತ್ರಿ (ಭಾರತದ ಮಾಜಿ ಕ್ರಿಕೆಟಿಗ) ಅವರಿಂದ.  ಚಿಕ್ಕವನಿದ್ದಾಗ ಅಮ್ಮನೊಂದಿಗೆ ಅವರ (ಮಾವ) ಮನೆಗೆ ಹೋಗಿದ್ದೆ. ಅಲ್ಲಿ ಅವರ ಕ್ರಿಕೆಟ್ ಕ್ಯಾಪ್‌ಗಳು, ಜೆರ್ಸಿಗಳು, ಬ್ಲೇಜರ್‌ಗಳು ಮತ್ತು ಕ್ರಿಕೆಟ್ ಸಲಕರಣೆಗಳು ಇದ್ದವು.  ಅದರಲ್ಲಿ ಒಂದು ಕ್ಯಾಪ್‌ ಹಾಕಿಕೊಳ್ಳಲು ಮುಂದಾದೆ. ಆಗ ಅದನ್ನು ಮುಟ್ಟದಂತೆ ಅವರು ತಾಕೀತು ಮಾಡಿದರು.  ‘ನಿಮ್ಮ ಬಳಿ ಇಷ್ಟೊಂದು ಇವೆಯಲ್ಲ..‘ ಎಂದೆ. ಅದಕ್ಕವರು, ಅವೆಲ್ಲವನ್ನೂ ತಾವು ಗಳಿಸಿದ್ದು. ಅಂತಹದೊಂದು ಬೇಕೆಂದರೆ ನೀನೇ ಗಳಿಸಿಕೊಳ್ಳಬೇಕು ಎಂದಿದ್ದರು.  ಆ ಮಾತು ನನ್ನ ಮನದಲ್ಲಿ ಅಚ್ಚೊತ್ತಿತ್ತು’ ಎಂದು ಗಾವಸ್ಕರ್ ಹೇಳಿದ್ದರು.

ಇದಾದ ನಂತರ ಮುಂಬೈ ತಂಡ, ಭಾರತ ತಂಡದ ಕ್ಯಾಪ್‌ಗಳನ್ನು ಗಳಿಸಿದರು. ಆರಂಭಿಕ ಬ್ಯಾಟರ್ ಆಗಿ ಹಲವು ದಾಖಲೆಗಳನ್ನು ಬರೆದರು.

ತಮ್ಮ ಆಟ ಮತ್ತು ಸಂವಹನ ಶಕ್ತಿಯ ಮೂಲಕ ಬಹುಬೇಗ ತಂಡದಲ್ಲಿ ವ್ಯಕ್ತಿತ್ವ ಬೆಳೆಸಿಕೊಂಡರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವು ಇಂಗ್ಲೆಂಡ್, ವೆಸ್ಟ್‌ ಇಂಡೀಸ್‌ ಮೊದಲ ಬಾರಿ ಸರಣಿಗಳನ್ನು ಜಯಿಸಿದಾಗ ತಂಡದ ಭಾಗವಾಗಿದ್ದವರು. 1983 ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಕಪಿಲ್‌ದೇವ್ ನಾಯಕತ್ವದ ತಂಡದ ಆರಂಭಿಕ ಬ್ಯಾಟರ್ ಆಗಿದ್ದವರು. 

ಕಾಮೆಂಟ್ರಿ ಚಾಂಪಿಯನ್: ಆಟದಿಂದ ನಿವೃತ್ತರಾದ ನಂತರ ಇವರ ಸಮಕಾಲೀನರಲ್ಲಿ ಹಲವರು ನೇಪಥ್ಯಕ್ಕೆ ಸರಿದಿದ್ದೇ ಹೆಚ್ಚು. ಆದರೆ ಸನ್ನಿ ಕ್ರಿಕೆಟ್‌ನೊಂದಿಗಿನ ನಂಟು ಇಂದಿಗೂ ಉಳಿದಿದೆ. ವೀಕ್ಷಕ ವಿವರಣೆಗಾರರಾಗಿ ಮೂರು ದಶಕಗಳಿಂದ ಟೆಲಿವಿಷನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT