ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಪ್ರಾಕ್ಟರ್ ಇನ್ನಿಲ್ಲ

Published 18 ಫೆಬ್ರುವರಿ 2024, 13:28 IST
Last Updated 18 ಫೆಬ್ರುವರಿ 2024, 13:28 IST
ಅಕ್ಷರ ಗಾತ್ರ

ಜೊಹಾನೆಸ್‌ಬರ್ಗ್: ದಕ್ಷಿಣ ಆಫ್ರಿಕಾ ಕಂಡ ಅಮೋಘ ಆಲ್‌ರೌಂಡರ್‌ ಹಾಗೂ ಮಾಜಿ ತರಬೇತುದಾರ ಮೈಕ್‌ ಪ್ರಾಕ್ಟರ್ (77) ಅವರು ಭಾನುವಾರ ನಿಧನರಾಗಿದ್ದಾರೆ.

ಹೃದ್ರೋಗದಿಂದ ಬಳಲುತ್ತಿದ್ದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ ಅವರ ಸ್ಥಿತಿ ಬಿಗಡಾಯಿಸಿ ಪ್ರಜ್ಞಾಹೀನರಾಗಿದ್ದರು ಎಂದು ಪತ್ನಿ ಮರಿನಾ ಪ್ರಾಕ್ಟರ್ ತಿಳಿಸಿದ್ದಾರೆ. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.

ಮೈಕ್‌ ಪ್ರಾಕ್ಟರ್‌ ಅವರು ವೇಗದ ಬೌಲರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಹೊಡೆತಗಳ ಬ್ಯಾಟರ್ ಆಗಿದ್ದರು. ಚಾಣಾಕ್ಷ ನಾಯಕರಾಗಿ ಹೆಸರು ಮಾಡಿದ್ದರು. ನಿವೃತ್ತಿ ನಂತರ– ಕೋಚ್‌, ಆಡಳಿತಗಾರ, ಆಯ್ಕೆಗಾರ, ವೀಕ್ಷಕ ವಿವರಣೆಗಾರ, 2002–08ರವರೆಗೆ ಐಸಿಸಿ ಮ್ಯಾಚ್‌ ರೆಫ್ರಿಯಾಗಿ ವಿಭಿನ್ನ ಪಾತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ತಾರತಮ್ಯ ಕೊನೆಗೊಂಡು ಅಲ್ಲಿನ ತಂಡ 1991ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದ ಬಳಿಕ ಅವರು ರಾಷ್ಟ್ರೀಯ ತಂಡದ ಮೊದಲ ಕೋಚ್‌ ಆಗಿದ್ದರು. 

ವರ್ಣಭೇದ ನೀತಿಯಿಂದ ದೇಶ ಬಹಿಷ್ಕಾರಕ್ಕೆ ಒಳಗಾದ ಕಾರಣ ಅವರ ಕ್ರಿಕೆಟ್‌ ಜೀವನ ಮೊಟಕುಗೊಂಡಿತ್ತು. ಆಡಲು ಸಿಕ್ಕಿದ್ದು ಬರೇ ಏಳು ಟೆಸ್ಟ್‌ಗಳು ಮಾತ್ರ. ಈ ಪಂದ್ಯಗಳಲ್ಲಿ 15.02 ಸರಾಸರಿಯಲ್ಲಿ 41 ವಿಕೆಟ್‌ಗಳನ್ನು ಪಡೆದಿದ್ದು ಅವರ ಪ್ರತಿಭೆಗೆ ಪುರಾವೆ. ಈ ಟೆಸ್ಟ್‌ ಪಂದ್ಯಗಳೆಲ್ಲಾ (1966– 1970ರ ನಡುವೆ) ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದು, ದಕ್ಷಿಣ ಆಫ್ರಿಕಾ ಆರು ಪಂದ್ಯಗಳಲ್ಲಿ ಜಯಗಳಿಸಿತ್ತು. ಇನ್ನೊಂದು ಡ್ರಾ ಆಗಿತ್ತು. ಪೋರ್ಟ್‌ ಎಲಿಝಬೆತ್‌ನಲ್ಲಿ ನಡೆದ ತಮ್ಮ ಕೊನೆಯ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 73 ರನ್ನಿಗೆ 6 ವಿಕೆಟ್ ಪಡೆದು ಜೀವನ ಶ್ರೇಷ್ಠಸಾಧನೆ ದಾಖಲಿಸಿದ್ದರು. ಆ ಪಂದ್ಯದಲ್ಲಿ ತಂಡ 323 ರನ್‌ಗಳ ಭಾರಿ ಜಯಗಳಿಸಿತ್ತು.

‘ಮೈದಾನದಲ್ಲಿ ಅವರು ದೈತ್ಯ ಆಟಗಾರ ಮಾತ್ರವಲ್ಲ, ಅದರಾಚೆಗೆ ವಿಶ್ವಾಸ ಮತ್ತು ಸ್ಪೂರ್ತಿಯ ಪ್ರತೀಕವಾಗಿದ್ದರು. ಆಟದ ಕಡೆಗಿನ  ಅವರ ಬದ್ಧತೆ, ಎಲ್ಲ ವರ್ಗದ ಜನರಲ್ಲಿ ಈ ಆಟ ಬೆಳವಣಿಗೆ ಕಾಣಬೇಕೆಂಬ ತುಡಿತ, ತಮ್ಮ ಕೊನೆಯ ಕೆಲವು ವರ್ಷಗಳಲ್ಲಿ ಡರ್ಬನ್‌ನ ಅವಕಾಶವಂಚಿತ ಮಕ್ಕಳಿಗೆ, ಯುವ ಸಮೂಹಕ್ಕೆ ಆಟದ ತರಬೇತಿ ನೀಡಿದ್ದು ಅವರ ಕ್ರಿಕೆಟ್‌ ಪ್ರೀತಿಯ ದ್ಯೋತಕವಾಗಿತ್ತು’ ಎಂದು ಸಿಎಸ್‌ಎ ಅಧ್ಯಕ್ಷ ರಿಹಾನ್ ರಿಚರ್ಡ್ಸ್ ತಿಳಿಸಿದ್ದಾರೆ.

ಒಂದೇ ಪಂದ್ಯದಲ್ಲಿ ಅವರು ಎರಡು ಹ್ಯಾಟ್ರಿಕ್ ಮತ್ತು ಶತಕ ಹೊಡೆದಿದ್ದು, ಅಂದಿನ ರೊಡೇಷ್ಯಾ ಪರ (1970–71ರ ನಡುವೆ) ಕರಿ ಕಪ್‌ ಟೂರ್ನಿಯಲ್ಲಿ ಸತತ ಆರು ಶತಕಗಳನ್ನು ಗಳಿಸಿದ್ದು ಅವರ ಅಸಾಧಾರಣ ಸಾಮರ್ಥ್ಯಕ್ಕೆ ಕನ್ನಡಿಯಾಗಿದೆ. ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ) ಮತ್ತು ಸಿ.ಬಿ.ಫ್ರೈ (ಇಂಗ್ಲೆಂಡ್‌) ಮಾತ್ರ ಪ್ರಥಮ ದರ್ಜೆ ಪಂದ್ಯಗಳಲ್ಲಿ ಸತತ ಆರು ಶತಕಗಳನ್ನು ಹೊಡೆದಿದ್ದಾರೆ.

ಅವರು ನೆಟಾಲ್, ಗ್ಲಾಸ್ಟರ್‌ಶೈರ್ ಮತ್ತು ವೆಸ್ಟರ್ನ್ ಪ್ರಾವಿನ್ಸ್‌ ತಂಡಗಳಿಗೆ ಆಡಿದ್ದಾರೆ. ಗ್ಲಾಸ್ಟರ್‌ಶೈರ್ ಪರ 14 ವರ್ಷ ಆಡಿದ್ದು, ಐದು ವರ್ಷ ನಾಯಕರಾಗಿದ್ದು ಅವರ ವರ್ಚಸ್ಸಿಗೆ ಸಾಕ್ಷಿ.

ಅವರು 401 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇವುಗಳಲ್ಲಿ 36.92 ಸರಾಸರಿಯಲ್ಲಿ 21,082 ರನ್ ಗಳಿಸಿದ್ದಾರೆ. ಇದರಲ್ಲಿ 47 ಶತಕಗಳಿವೆ. ಅವರು 19.07 ಸರಾಸರಿಯಲ್ಲಿ1,357 ವಿಕೆಟ್‌ಗಳನ್ನು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT