ಬೆಂಗಳೂರು: ರೋಹನ್ ಪಾಟೀಲ್ (72, 40ಎ) ಮತ್ತು ಮೆಕ್‌ನಿಲ್ ನೊರೊನಾ (48, 19ಎ) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಮಂಗಳೂರು ಡ್ರಾಗನ್ಸ್ ತಂಡ ಮಹಾರಾಜ ಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಶನಿವಾರ ಶಿವಮೊಗ್ಗ ಲಯನ್ಸ್ ಮೇಲೆ ಎಂಟು ವಿಕೆಟ್‌ಗಳ ಸುಲಭ ಜಯಗಳಿಸಿತು.
ಶಿವಮೊಗ್ಗ ಲಯನ್ಸ್‌ನ ಅಭಿನವ್ ಮನೋಹರ್ (ಅಜೇಯ 84, 34ಎ) ಅವರ ಮಿಂಚಿನ ಆಟ ಗೆಲುವಿಗೆ ಸಾಲಲಿಲ್ಲ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 176 ರನ್‌ಗಳ ಗುರಿಯನ್ನು ಎದುರಿಸಿದ ಮಂಗಳೂರು ತಂಡಕ್ಕೆ ರೋಹನ್ ಮತ್ತು ಮೆಕ್‌ನಿಲ್ ಪವರ್‌ಪ್ಲೇ ಅವಧಿಯೊಳಗೆ 75 ರನ್ ಸೇರಿಸಿ ಮಿಂಚಿನ ಆರಂಭ ಒದಗಿಸಿದರು. ರೋಹನ್ ಆಟದಲ್ಲಿ ಆರು ಬೌಂಡರಿ, ಐದು ಸಿಕ್ಸರ್‌ಗಳಿದ್ದವು. ನೊರೊನಾ ಆಟದಲ್ಲಿ ನಾಲ್ಕು ಬೌಂಡರಿ, ನಾಲ್ಕು ಸಿಕ್ಸರ್‌ಗಳಿದ್ದವು.
ರೋಹನ್ ನಂತರ ನಿಕಿನ್ ಜೋಸ್ (ಔಟಾಗದೇ 17) ಜೊತೆ ಎರಡನೇ ವಿಕೆಟ್‌ಗೆ 38 ಎಸೆತಗಳಲ್ಲಿ 59 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೆ.ಸಿದ್ಧಾರ್ಥ್ ಔಟಾಗದೇ 38 ರನ್ (19ಎ) ಹೊಡೆದರು. ತಂಡ ಕೇವಲ 16.2 ಓವರುಗಳಲ್ಲಿ 2 ವಿಕೆಟ್‌ಗೆ 178 ರನ್ ಬಾರಿಸಿತು.
ಇದಕ್ಕೆ ಮೊದಲು ಟಾಸ್ ಸೋತಿದ್ದ ಶಿವಮೊಗ್ಗ ಲಯನ್ಸ್ 6 ವಿಕೆಟ್‌ಗೆ 175 ರನ್ ಗಳಿಸಿತ್ತು. ಮಧ್ಯಮ ಕ್ರಮಾಂಕದ ಆಟಗಾರ ಅಭಿನವ್ ಮನೋಹರ್ ಅಜೇಯ 84 ರನ್ ಗಳಿಸಿದ್ದರಿಂದ ತಂಡ ಗೌರವದ ಮೊತ್ತ ಗಳಿಸಲು ಸಾಧ್ಯವಾಯಿತು. ಇದರಲ್ಲಿ 3 ಬೌಂಡರಿ, 9 ಸಿಕ್ಸರ್‌ಗಳಿದ್ದವು. ಐದನೇ ವಿಕೆಟ್‌ಗೆ ಅವರು ಅವಿನಾಶ್ ಡಿ. (22, 21ಎ) ಜೊತೆ 44 ಎಸೆತಗಳಲ್ಲಿ 88 ರನ್ ಸೇರಿಸಿದ್ದು ಗಮನಸೆಳೆಯಿತು.
ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ಲಯನ್ಸ್: 20 ಓವರುಗಳಲ್ಲಿ 6 ವಿಕೆಟ್‌ಗೆ 175 (ರೋಹಿತ್ ಕೆ. 24, ಧ್ರುವ್ ಪ್ರಭಾಕರ್ 20, ಅಭಿನವ್ ಮನೋಹರ್ ಔಟಾಗದೇ 84, ಅವಿನಾಶ್ ಡಿ. 22; ಅಭಿಲಾಷ್ ಶೆಟ್ಟಿ 39ಕ್ಕೆ1, ನಿಶ್ಚಿತ್ ಎನ್.ರಾವ್ 31ಕ್ಕೆ2, ಶ್ರೇಯಸ್ ಗೋಪಾಲ್ 26ಕ್ಕೆ1, ಎಂ.ಬಿ.ದರ್ಶನ್ 36ಕ್ಕೆ1); ಮಂಗಳೂರು ಡ್ರಾಗನ್ಸ್:16.2 ಓವರುಗಳಲ್ಲಿ 2 ವಿಕೆಟ್‌ಗೆ 178 (ಮೆಕ್‌ನಿಲ್ ಹ್ಯಾಡ್ಲಿ ನೊರೊನಾ 42, ರೋಹನ್ ಪಾಟೀಲ್ 72, ನಿಕಿನ್ ಜೋಸ್ ಔಟಾಗದೇ 17, ಕೃಷ್ಣಮೂರ್ತಿ ಸಿದ್ಧಾರ್ಥ ಔಟಾಗದೇ 38; ರಾಜ್‌ವೀರ್ ವಾಧ್ವಾ 23ಕ್ಕೆ1, ಹಾರ್ದಿಕ್ ರಾಜ್ 33ಕ್ಕೆ1). ಪಂದ್ಯದ ಆಟಗಾರ: ಎ.ರೋಹನ್ ಪಾಟೀಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.