ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ನ ಕೆಲ ನಿಯಮಗಳಲ್ಲಿ ನಿಖರತೆ ಬೇಕು: ಜೋಸ್‌ ಬಟ್ಲರ್‌

ಮಂಕಡಿಂಗ್ ಬಗ್ಗೆ ರಾಜಸ್ಥಾನ್ ರಾಯಲ್ಸ್‌ ತಂಡದ ಆಟಗಾರ ಬೇಸರ
Last Updated 4 ಏಪ್ರಿಲ್ 2019, 14:43 IST
ಅಕ್ಷರ ಗಾತ್ರ

ಲಂಡನ್‌: ‘ಕ್ರಿಕೆಟ್‌ನ ಕೆಲ ನಿಯಮಗಳು ಗೊಂದಲಮಯವಾಗಿದ್ದು, ಅವುಗಳ ಬಗ್ಗೆ ನಿಖರತೆ ಬೇಕು’ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಆಡುತ್ತಿರುವ ಇಂಗ್ಲೆಂಡ್‌ನ ಆಟಗಾರ ಜೋಸ್‌ ಬಟ್ಲರ್‌ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್‌ 25ರಂದು ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌, ಬಟ್ಲರ್‌ ಅವರನ್ನು ‘ಮಂಕಡ್‌’ ರೀತಿಯ ರನ್‌ಔಟ್‌ ಮಾಡಿದ್ದರು. ಐಪಿಎಲ್‌ ಇತಿಹಾಸದಲ್ಲೇ ಮೊದಲ ಸಲ ಆ ಬಗೆಯ ರನ್‌ಔಟ್‌ ದಾಖಲಾಗಿತ್ತು. ಆ ಕುರಿತು ಪರ, ವಿರೋಧ ಚರ್ಚೆಗಳೂ ನಡೆದಿದ್ದವು.

‘ಮಂಕಡಿಂಗ್‌ನಿಂದ ತುಂಬಾ ನೋವಾಗಿತ್ತು. ಆ ನಿಯಮದಲ್ಲಿ ಸ್ಪಷ್ಟತೆ ಇಲ್ಲ. ಅದರ ಬಗ್ಗೆ ನನಗೆ ಅಸಮಾಧಾನವಿದೆ’ ಎಂದು ಬ್ರಿಟನ್‌ನ ‘ಡೈಲಿ ಮಿರರ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಟ್ಲರ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಮಂಕಡಿಂಗ್‌ ಘಟನೆಯ ನಂತರದ ಎರಡು ಪಂದ್ಯಗಳಲ್ಲಿ ನನ್ನಲ್ಲಿ ಆತಂಕ ಮನೆ ಮಾಡಿತ್ತು. ನಾನ್‌ಸ್ಟ್ರೈಕ್‌ ತುದಿಯಲ್ಲಿದ್ದಾಗಲೆಲ್ಲಾ ಎದುರಾಳಿ ಬೌಲರ್‌ ಚೆಂಡು ಎಸೆದನೋ ಇಲ್ಲವೋ ಎಂಬುದನ್ನೇ ಗಮನಿಸುತ್ತಿದ್ದೆ. ಕ್ರೀಸ್‌ ಬಿಟ್ಟು ಮುಂದೆ ಹೋಗಲು ಹೆದರುತ್ತಿದ್ದೆ. ಹೀಗಾಗಿ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸಲು ಆಗಲಿಲ್ಲ. ಆದ್ದರಿಂದ ಸನ್‌ರೈಸರ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯಗಳಲ್ಲಿ ಕ್ರಮವಾಗಿ ಐದು ಮತ್ತು ಆರು ರನ್‌ ಗಳಿಸಿ ಔಟಾಗಿದ್ದೆ’ ಎಂದಿದ್ದಾರೆ.

‘ಕಿಂಗ್ಸ್‌ ಇಲೆವನ್‌ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ನೀಡಿದ್ದ ನಿರ್ಣಯ ತಪ್ಪು ಎಂಬುದು ನನ್ನ ಭಾವನೆ. ಅಶ್ವಿನ್‌ ಚೆಂಡನ್ನು ‘ರಿಲೀಸ್‌’ ಮಾಡುವ ಸಮಯದಲ್ಲಿ ನಾನು ಕ್ರೀಸ್‌ನಲ್ಲೇ ಇದ್ದೆ. ವಿಡಿಯೊ ತುಣುಕು ವೀಕ್ಷಿಸಿದರೆ ಇದು ಮನದಟ್ಟಾಗುತ್ತದೆ’ ಎಂದು ಜೋಸ್‌ ನುಡಿದಿದ್ದಾರೆ.

ಬಟ್ಲರ್‌ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರಿನ ಪಂದ್ಯದಲ್ಲಿ 43 ಎಸೆತಗಳಲ್ಲಿ 59ರನ್‌ ಬಾರಿಸಿ, ರಾಜಸ್ಥಾನ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT