ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಡಿಂಗ್‌: ಬೌಲರ್‌ಗಳ ಬೆನ್ನಿಗೆ ನಿಂತ ಜಾವಗಲ್‌ ಶ್ರೀನಾಥ್‌

Last Updated 2 ಸೆಪ್ಟೆಂಬರ್ 2020, 7:00 IST
ಅಕ್ಷರ ಗಾತ್ರ

ನವದೆಹಲಿ: ‘ಬೌಲರ್‌ ಚೆಂಡನ್ನು ಎಸೆಯುವ ಮೊದಲು ನಾನ್‌ಸ್ಟ್ರೈಕರ್‌ ತುದಿಯಲ್ಲಿರುವ ಬ್ಯಾಟ್ಸ್‌ಮನ್‌ ಕ್ರೀಸ್‌ ಬಿಡುತ್ತಿದ್ದರೆ ಆತ ಕ್ರೀಡಾ ಸ್ಫೂರ್ತಿ ಪಾಲಿಸುತ್ತಿಲ್ಲ ಎಂದರ್ಥ; ಹೀಗಾಗಿ ಆತ ಔಟ್‌ ಆದರೆ ಜನರ ಅನುಕಂಪ ನಿರೀಕ್ಷಿಸಬಾರದು‘ ಎಂದು ಐಸಿಸಿ ಮ್ಯಾಚ್‌ ರೆಫರಿ, ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಜಾವಗಲ್‌ ಶ್ರೀನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಬೌಲಿಂಗ್ ಮಾಡುವ ಸಂದರ್ಭದಲ್ಲಿ ನಾನ್‌ಸ್ಟ್ರೈಕರ್ ತುದಿಯಲ್ಲಿರುವ ಬ್ಯಾಟ್ಸ್‌ಮನ್‌ ಕ್ರೀಸ್ ಬಿಟ್ಟರೆ ಔಟ್ ಮಾಡುವುದಕ್ಕೆ ‘ಮಂಕಡಿಂಗ್’ ಎನ್ನಲಾಗುತ್ತದೆ. ಹೋದ ವರ್ಷದ ಇಂಡಿಯನ್‌ ಪ್ರೀಮಿಯರ್‌ ಲೀಗ್‌‌ ಟೂರ್ನಿಯಲ್ಲಿ ಆಫ್‌ಸ್ಪಿನ್ನರ್‌ ಆರ್‌. ಅಶ್ವಿನ್‌ ಅವರು ಜೋಸ್‌ ಬಟ್ಲರ್‌ ಅವರನ್ನು ‘ಮಂಕಡಿಂಗ್‌‘ ಮಾಡಿದ್ದರು. ಇದು ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು.

ಈ ವಿಧಾನದಲ್ಲಿ ಬೌಲರ್‌ವೊಬ್ಬ ಬ್ಯಾಟ್ಸ್‌ಮನ್‌ಅನ್ನು ಔಟ್‌ ಮಾಡಿದರೆ ಅದರಲ್ಲಿ ತಪ್ಪಿಲ್ಲ ಎಂಬುದು ಶ್ರೀನಾಥ್‌ ಅವರ ಅಂಬೋಣ.

‘ಬೌಲರ್‌ನ ಗಮನ ಬ್ಯಾಟ್ಸ್‌ಮನ್‌ ಕಡೆ ಇರುತ್ತದೆ. ಬೌಲರ್‌ ಚೆಂಡು ಎಸೆಯವ ಮೊದಲು ನಾನ್‌ಸ್ಟ್ರೈಕರ್‌ ತುದಿಯಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಅಂಟಿಕೊಂಡು ನಿಲ್ಲುವುದು ಏನು ದೊಡ್ಡ ವಿಷಯವಲ್ಲ. ಯಾಕೆಂದರೆ ಆತ ಬ್ಯಾಟ್‌ ಮಾಡುತ್ತಿಲ್ಲ ಅಥವಾ ಬೇರೆ ಏನನ್ನೂ ಯೋಚಿಸುತ್ತಿಲ್ಲ‘ ಎಂದು ಶ್ರೀನಾಥ್‌ ಅವರು ‘ಡಿಆರ್‌ಎಸ್‌ ವಿದ್‌ ಆ್ಯಶ್‘ ಎಂಬ ಯೂಟ್ಯೂಬ್‌ ಸಂವಾದದಲ್ಲಿ ಅಶ್ವಿನ್‌ ಅವರಿಗೆ ಹೇಳಿದರು.‌

‘ಬ್ಯಾಟ್ಸ್‌ಮನ್ ಕ್ರೀಸ್‌ ಬಿಟ್ಟು ಕದಲಬಾರದು ಮತ್ತು ಬೌಲರ್ ಕೇವಲ ಸ್ಟ್ರೈಕರ್‌‌ನಲ್ಲಿರುವ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡಲು ಗಮನಹರಿಸಬೇಕು. ನಾನ್‌ಸ್ಟ್ರೈಕರ್‌ನಲ್ಲಿರುವ ಬ್ಯಾಟ್ಸ್‌ಮನ್ ಅನಗತ್ಯ ಲಾಭವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ರನ್ ಔಟ್‌ ಆದರೆಅದರಲ್ಲಿ ಯಾವುದೇ ತಪ್ಪಿಲ್ಲ‘ ಎಂದು ಶ್ರೀನಾಥ್ ಹೇಳಿದರು.

ಹೋದ ವರ್ಷದ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ನಾಯಕತ್ವ ವಹಿಸಿದ್ದ ಆರ್‌. ಅಶ್ವಿನ್‌ ಅವರು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಕಣಕ್ಕಿಳಿಯುತ್ತಿದ್ದಾರೆ.

‘ಮಂಕಡಿಂಗ್‌ ವಿಧಾನದಲ್ಲಿ ಔಟ್‌ ಮಾಡುವುದು ಕ್ರೀಡಾಸ್ಫೂರ್ತಿಗೆ ವಿರುದ್ಧವಾದದ್ದು. ಹೀಗಾಗಿ ಈ ಬಾರಿ ಆ ರೀತಿ ಔಟ್‌ ಮಾಡಲು ಅಶ್ವಿನ್‌ ಅವರಿಗೆ ನಾನು ಅವಕಾಶ ನೀಡುವುದಿಲ್ಲ‘ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT