ಮಂಗಳವಾರ, ಜನವರಿ 28, 2020
29 °C

IND vs AUS | ಏಕದಿನ ಸರಣಿಗೆ ಆಸಿಸ್ ತಂಡ ಪ್ರಕಟ: ಟೆಸ್ಟ್ ವೀರ ಮಾರ್ನಸ್‌ಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ ವರ್ಷ ಜನವರಿಯಲ್ಲಿ ಭಾರತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ 14 ಆಟಗಾರರ ತಂಡವನ್ನು ಆಸ್ಟ್ರೇಲಿಯಾ ಪ್ರಕಟಿಸಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಮಾರ್ನಸ್‌ ಲಾಬುಶೇನ್‌ ಅವರಿಗೆ ಅವಕಾಶ ನೀಡಲಾಗಿದೆ.

2019ರ ವಿಶ್ವಕಪ್‌ಗೆ ತಂಡದಲ್ಲಿ ಆಡಿದ್ದ ಉಸ್ಮಾನ್‌ ಖ್ವಾಜಾ, ಶಾನ್‌ ಮಾರ್ಶ್‌, ಮಾರ್ಕಸ್‌ ಸ್ಟೋಯಿನಸ್‌, ನಾಥನ್‌ ಲಯನ್‌, ನಾಥನ್‌ ಕರ್ಟರ್‌ನೈಲ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರಿಗೆ ಕೋಕ್‌ ನೀಡಲಾಗಿದ್ದು, ಗಾಯಾಳು ಜೇಸನ್‌ ಬೆಹ್ರನ್‌ಡ್ರಾಫ್‌ ಅವರನ್ನೂ ಕೈಬಿಡಲಾಗಿದೆ.

ಟೆಸ್ಟ್‌ ಕ್ರಿಕೆಟ್‌ಗೆ 2018ರ ಅಕ್ಟೋಬರ್‌ನಲ್ಲಿ ಪದಾರ್ಪಣೆ ಮಾಡಿರುವ ಮಾರ್ನಸ್‌ ಇದುವರೆಗೆ 12 ಪಂದ್ಯಗಳ 19 ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ. ಇವುಗಳಲ್ಲಿ ಮೂರು ಶತಕ ಹಾಗೂ ಆರು ಅರ್ಧಶತಕಗಳಿದ್ದು 58.05ರ ಸರಾಸರಿಯಲ್ಲಿ 1,103 ರನ್ ಕಲೆಹಾಕಿದ್ದಾರೆ. ಮಾತ್ರವಲ್ಲದೆ ಈ ವರ್ಷ ಆಡಿರುವ 10 ಟೆಸ್ಟ್‌ 15 ಇನಿಂಗ್ಸ್‌ಗಳಿಂದ 1,022 ರನ್‌ ಗಳಿಸಿದ್ದು, 2019ರಲ್ಲಿ ಆಡಿದ ಟೆಸ್ಟ್‌ ಪಂದ್ಯಗಳಿಂದ ಸಾವಿರ ರನ್‌ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಹೀಗಾಗಿ 2019ರ ಆರಂಭದಲ್ಲಿ ಐಸಿಸಿ ಟೆಸ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ 110ನೇ ಸ್ಥಾನದಲ್ಲಿದ್ದ ಮಾರ್ನಸ್‌, ಇದೀಗ 5ನೇ ಸ್ಥಾನಕ್ಕೆ ತಲುಪಿದ್ದಾರೆ.

ನಾಯಕ ಆ್ಯರನ್‌ ಫಿಂಚ್‌, ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌ ಜೊತೆಗೆ ಮಾರ್ನಸ್‌ ಲಾಬುಶೇನ್‌ ಅಗ್ರ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಆಷ್ಟನ್‌ ಟರ್ನರ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌ ಹಾಗೂ ವಿಕೆಟ್‌ಕೀಪರ್‌ ಅಲೆಕ್ಸ್‌ ಕಾರಿ ಮಧ್ಯಮ ಕ್ರಮಾಂಕವನ್ನು ಆಧರಿಸಲಿದ್ದಾರೆ. ಸ್ಪಿನ್‌ ವಿಭಾಗವನ್ನು ಆ್ಯಡಂ ಜಂಪಾ ಮತ್ತು ಟರ್ನರ್‌ ಮುನ್ನಡೆಸಲಿದ್ದು, ಮಿಚೇಲ್‌ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್‌, ಸೀನ್‌ ಅಬೋಟ್‌, ಜೋಸ್‌ ಹ್ಯಾಜಲ್‌ವುಡ್‌, ಕೇನ್‌ ರಿಚರ್ಡ್ಸನ್‌ ವೇಗದ ಶಕ್ತಿಯಾಗಿದ್ದಾರೆ.

‘ತವರಿನಲ್ಲಿ ಇತ್ತೀಚೆಗೆ ಮುಕ್ತಾಯವಾದ ಟಿ20 ಸರಣಿಗಳಲ್ಲಿ ಅಗ್ರ ಕಮಾಂಕದ ಸಾಧನೆ ಪ್ರಬಲವಾಗಿತ್ತು. ಆದ್ದರಿಂದ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿಯೂ ಅದನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ’ ಎಂದು ತಂಡದ ಆಯ್ಕೆ ಸಮಿತಿ ಸದಸ್ಯ ಟ್ರೆವರ್‌ ಹೋನ್ಸ್‌ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಆಸಿಸ್‌, ಬಳಿಕ ಪಾಕ್‌ ವಿರುದ್ಧ 3 ಪಂದ್ಯಗಳ ಸರಣಿಯನ್ನು 2–0 ಅಂತರದಲ್ಲಿ ಗೆದ್ದಿತ್ತು. ಈ ಸರಣಿಗಳಲ್ಲಿ ಅಗ್ರ ಕ್ರಮಾಂಕದ ವಾರ್ನರ್‌, ಫಿಂಚ್‌ ಹಾಗೂ ಸ್ಮಿತ್‌ ಮಿಂಚಿದ್ದರು.

ಭಾರತ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯವು ಜನವರಿ 14ರಂದು ಮುಂಬೈನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜ.17ರಂದು ರಾಜ್‌ಕೋಟ್‌ ಹಾಗೂ ಮೂರನೇ ಪಂದ್ಯ ಜ.19ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ತಂಡ ಹೀಗಿದೆ
ಆ್ಯರನ್‌ ಫಿಂಚ್‌ (ನಾಯಕ), 
ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಪ್ಯಾಟ್ ಕಮಿನ್ಸ್‌ (ಉಪನಾಯಕ), ಆಷ್ಟನ್‌ ಟರ್ನರ್‌, ಅಲೆಕ್ಸ್‌ ಕಾರಿ (ವಿಕೆಟ್‌ಕೀಪರ್‌), ಪೀಟರ್‌ ಹ್ಯಾಂಡ್ಸ್‌ಕಂಬ್‌, ಜೋಸ್‌ ಹ್ಯಾಜಲ್‌ವುಡ್‌, ಕೇನ್‌ ರಿಚರ್ಡ್ಸನ್‌, ಮಿಚೇಲ್‌ ಸ್ಟಾರ್ಕ್‌, ಆ್ಯಡಂ ಜಂಪಾ, ಸೀನ್‌ ಅಬೋಟ್‌, ಆಸ್ಟನ್‌ ಅಗರ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು