ಎರಡನೇ ಟೆಸ್ಟ್‌ ಕ್ರಿಕೆಟ್: ದೊಡ್ಡ ಮೊತ್ತದತ್ತ ಆಸ್ಟ್ರೇಲಿಯಾ ‘ಎ’

7
ಮಾರ್ಷ್–ಹೆಡ್ ಆಟದ ಬಲ

ಎರಡನೇ ಟೆಸ್ಟ್‌ ಕ್ರಿಕೆಟ್: ದೊಡ್ಡ ಮೊತ್ತದತ್ತ ಆಸ್ಟ್ರೇಲಿಯಾ ‘ಎ’

Published:
Updated:

ಬೆಂಗಳೂರು: ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ‘ಎ’ ತಂಡವು ಶನಿವಾರ ಆರಂಭವಾದ ಭಾರತ ’ಎ’ ವಿರುದ್ಧದ  ಎರಡನೇ ‘ಟೆಸ್ಟ್‌’ನಲ್ಲಿ ಉತ್ತಮ ಮೊತ್ತ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಟ್ರಾವಿಸ್ (68 ರನ್) ಮತ್ತು ಮಿಚೆಲ್ ಮಾರ್ಷ್ (ಬ್ಯಾಟಿಂಗ್  86) ಅವರ ಆಟದ ನೆರವಿನಿಂದ ದಿನದಾಟದ ಕೊನೆಗೆ 90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 290 ರನ್‌ ಗಳಿಸಿದೆ.

ಬೆಳಿಗ್ಗೆಯ ಎರಡನೇ ಓವರ್‌ನಲ್ಲಿ ಮಧ್ಯಮವೇಗಿ ರಜನೀಶ್ ಗುರುಬಾನಿ ಅವರು ಮ್ಯಾಟ್‌ ರೆನ್‌ಶಾ ಅವರನ್ನು ಬೌಲ್ಡ್‌ ಮಾಡಿದರು. ಇನ್ನೊಂದು ಬದಿಯಲ್ಲಿದ್ದ ಕರ್ಟಿಸ್ ಪ್ಯಾಟರ್ಸನ್ (48 ರನ್) ಮತ್ತು  ಟ್ರಾವಿಸ್  ಎರಡನೇ ವಿಕೆಟ್‌ ಜೊತೆಯಾಟದಲ್ಲಿ  92 ರನ್‌ಗಳನ್ನು ಸೇರಿಸಿದರು. ಊಟದ ವಿರಾಮಕ್ಕೂ ಮುನ್ನ ಶಾಬಾಜ್ ನದೀಂ ಅವರು ಈ ಜೊತೆಯಾಟವನ್ನು ಮುರಿದರು.  ಸ್ಪಿನ್ನರ್ ನದೀಂ ಅವರ ನೇರ ಎಸೆತವನ್ನು ಗುರುತಿಸುವಲ್ಲಿ ವಿಫಲರಾದ ಕರ್ಟಿಸ್ ಕ್ಲೀನ್‌ ಬೌಲ್ಡ್‌ ಆದರು.

ಕ್ರೀಸ್‌ಗೆ ಬಂದ ಪೀಟರ್ ಹ್ಯಾಂಡ್ಸ್‌ಕಂಬ್ ಅವರೊಂದಿಗೆ ದೊಡ್ಡ ಜೊತೆಯಾಟವಾಡುವತ್ತ ಹೆಡ್‌ ಹೆಜ್ಜೆಯಿಟ್ಟಿದ್ದರು.  ಆದರೆ ಮತ್ತೊಮ್ಮೆ  ಶಾಬಾಜ್ ಅವರ ಎಸೆತಕ್ಕೆ ಪೀಟರ್ ವಿಕೆಟ್‌ ಒಪ್ಪಿಸಿದರು.

ನಂತರ ಬಂದ ಮಾರ್ಷ್ ಅವರೊಂದಿಗೆ ಜೊತೆಯಾಟ ಕುದುರಿಸುವ ಹೆಡ್‌ ಆಶಯ ಈಡೇರಲು ಚೈನಾಮನ್ ಕುಲದೀಪ್ ಯಾದವ್ ಬಿಡಲಿಲ್ಲ. ಅವರ ತಿರುವು ಪಡೆದ ಎಸೆತವನ್ನು  ಆಡುವ ಭರದಲ್ಲಿ ಟ್ರಾವಿಸ್ ಬೀಟ್ ಆದರು. ವಿಕೆಟ್‌ಕೀಪರ್ ಶ್ರೀಕರ ಭರತ್ ಮಿಂಚಿನ ವೇಗದಲ್ಲಿ ಬೇಲ್ಸ್‌ ಹಾರಿಸಿದರು.

ತಮ್ಮ ನಂತರದ ಓವರ್‌ನಲ್ಲಿಯೂ ಮಿಂಚಿದ ಕುಲದೀಪ್ ಅವರು ಮಾರ್ನಸ್‌ ಲಾಬುಚಾನ್ ಅವರ ವಿಕೆಟ್‌ ಪಡೆದರು. ಆಷ್ಟನ್ ಆಗರ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದಾಗಿ ತಂಡವು ಬೇಗನೆ ಪತನವಾಗುವ ಸಾಧ್ಯತೆ ಇತ್ತು.

ಆದರೆ ಚಹಾ ವಿರಾಮದ ನಂತರದ ಆಟದಲ್ಲಿ ಬೌಲರ್‌ಗಳಿಗೆ ವಿಕೆಟ್ ಒಲಿಯಲಿಲ್ಲ. ಮಾರ್ಷ್ ಮತ್ತು ಮೈಕೆಲ್ ನೇಸೆರ್ (ಬ್ಯಾಟಿಂಗ್‌ 44) ಮುರಿಯದ ಏಳನೇ ವಿಕೆಟ್‌ ಜೊತೆಯಾಟದಲ್ಲಿ 110 ರನ್‌ ಸೇರಿಸಿದ್ದಾರೆ. ಇದರೊಂದಿಗೆ ದೊಡ್ಡ ಮೊತ್ತ ಕಲೆಹಾಕಲು ಅಡಿಪಾಯ ಹಾಕಿದ್ದಾರೆ.

ಭಾರತ ತಂಡದಲ್ಲಿ ಮಯಂಕ್ ಅಗರವಾಲ್, ಮಧ್ಯಮವೇಗಿ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಮತ್ತು  ಅಂಕಿತ್ ರಜಪೂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. 

ಅವರ ಬದಲಿಗೆ ಶುಭಮನ್ ಗಿಲ್, ಶಾಬಾಜ್ ನದೀಂ, ರಜನೀಶ್ ಗುರುಬಾನಿ ಮತ್ತು ದೀಪಕ್ ಚಾಹರ್ ಸ್ಥಾನ ಪಡೆದುಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !