ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಚ್ ಫಿಕ್ಸಿಂಗ್: ಯುಎಇ ಆಟಗಾರರಾದ ನವೀದ್ ಮತ್ತು ಶೈಮಾನ್‌ಗೆ ಎಂಟು ವರ್ಷ ನಿಷೇಧ

Last Updated 16 ಮಾರ್ಚ್ 2021, 12:11 IST
ಅಕ್ಷರ ಗಾತ್ರ

ದುಬೈ: 2019 ರಲ್ಲಿ ಟಿ 20 ವಿಶ್ವಕಪ್ ಅರ್ಹತಾ ಪಂದ್ಯದ ಸಂದರ್ಭ ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ ಆರೋಪದಡಿ ಐಸಿಸಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕ್ರಿಕೆಟಿಗರಾದ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ ಅವರಿಗೆ ಎಂಟು ವರ್ಷಗಳ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದ್ದ 2019 ರ ಅಕ್ಟೋಬರ್ 16ರಿಂದ ನಿಷೇಧವು ಪೂರ್ವಾನ್ವಯ ಆಗಿದೆ.

33 ವರ್ಷದ ಯುಎಇ ಮಾಜಿ ನಾಯಕ ಮತ್ತು ಬಲಗೈ ವೇಗಿ ನವೀದ್ ದೇಶಕ್ಕಾಗಿ 39 ಏಕದಿನ ಮತ್ತು 31 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೆ, 42 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಬಟ್ 40 ಏಕದಿನ ಮತ್ತು 32 ಟಿ 20 ಪಂದ್ಯಗಳನ್ನು ಆಡಿದ್ದಾರೆ.

"ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಯುಎಇ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು" ಎಂದು ಐಸಿಸಿ ಸಮಗ್ರತೆ ಘಟಕದ ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

"ನವೀದ್ ನಾಯಕ ಮತ್ತು ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. ಅನ್ವರ್ ಆರಂಭಿಕ ಬ್ಯಾಟ್ಸ್‌ ಮನ್. ಇಬ್ಬರೂ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಮ್ಯಾಚ್ ಫಿಕ್ಸರ್‌ಗಳ ಬಗ್ಗೆ ತಿಳಿದಿದ್ದರು. "ಅವರಿಬ್ಬರೂ ಈ ಭ್ರಷ್ಟ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿರುವುದು ಅವರ ಸ್ಥಾನಗಳಿಗೆ, ತಂಡದ ಸದಸ್ಯರಿಗೆ ಮತ್ತು ಯುಎಇ ಕ್ರಿಕೆಟ್‌ನ ಎಲ್ಲ ಬೆಂಬಲಿಗರಿಗೆ ಮಾಡಿದ ದ್ರೋಹವಾಗಿದೆ." ಎಂದು ಐಸಿಸಿ ಹೇಳಿದೆ.

ಐಸಿಸಿ ಮಾಧ್ಯಮ ಪ್ರಕಟಣೆಯ ಪ್ರಕಾರ, ಆರ್ಟಿಕಲ್ 2.1.1 ರ ಪ್ರಕಾರ ಇಬ್ಬರು ಕ್ರಿಕೆಟಿಗರು ತಪ್ಪಿತಸ್ಥರೆಂದು ಸಾಬೀತಾಗಿದೆ. ಒಂದು ತಂಡದ ಒಪ್ಪಂದಕ್ಕೆ ಒಳಪಟ್ಟ ವ್ಯಕ್ತಿಯಾಗಿ ಐಸಿಸಿ ಪುರುಷರ ಟಿ 20 ವಿಶ್ವಕಪ್ ಕ್ವಾಲಿಫೈಯರ್ 2019 ರ ಪಂದ್ಯಗಳ ಫಲಿತಾಂಶ, ಪ್ರಗತಿ, ನಡವಳಿಕೆ ಅಥವಾ ಇತರ ಅಂಶಗಳ ಮೇಲೆ ಅನುಚಿತವಾಗಿ ಪ್ರಭಾವ ಬೀರುವ ಪ್ರಯತ್ನ ನಡೆಸಿರುವುದು ಸಾಬೀತಾಗಿದೆ ಎಂದು ಹೇಳಿದೆ.

ಜೊತೆಗೆ, ಆರ್ಟಿಕಲ್ 2.4.4ರ ಪ್ರಕಾರ, 2019 ರ ಐಸಿಸಿ ಪುರುಷರ ಟಿ 20 ವಿಶ್ವಕಪ್ ಅರ್ಹತಾ ಪಂದ್ಯಗಳಡಿ ಭ್ರಷ್ಟ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಳಸಿದ ವಿಧಾನ ಅಥವಾ ಆಹ್ವಾನಗಳ ಸಂಪೂರ್ಣ ವಿವರಗಳನ್ನು ಎಸಿಯು ಬಹಿರಂಗಪಡಿಸಲು ವಿಫಲವಾಗಿದೆ ಎಂದು ಐಸಿಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT