ಕೆಕೆಆರ್‌–ಕಿಂಗ್ಸ್‌ ಇಲೆವನ್‌ಗೆ ನಿರ್ಣಾಯಕ ಪಂದ್ಯ

ಸೋಮವಾರ, ಮೇ 20, 2019
32 °C
ಇಂದು ಮೊಹಾಲಿಯಲ್ಲಿ ಹೋರಾಟ: ಆ್ಯಂಡ್ರೆ ರಸೆಲ್‌, ಕೆ.ಎಲ್‌.ರಾಹುಲ್‌ ಆಕರ್ಷಣೆ

ಕೆಕೆಆರ್‌–ಕಿಂಗ್ಸ್‌ ಇಲೆವನ್‌ಗೆ ನಿರ್ಣಾಯಕ ಪಂದ್ಯ

Published:
Updated:

ಮೊಹಾಲಿ: ‘‍ಪ್ಲೇ ಆಫ್’ ಮೇಲೆ ಕಣ್ಣಿಟ್ಟಿರುವ ಕೋಲ್ಕತ್ತ ನೈಟ್‌ರೈಡರ್ಸ್‌ ಮತ್ತು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡಗಳು ಮಹತ್ವದ ಹೋರಾಟಕ್ಕೆ ಸಜ್ಜಾಗಿವೆ.

ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಪಂದ್ಯದಲ್ಲಿ ಚೆನ್ನೈನ ಗೆಳೆಯರಾದ ರವಿಚಂದ್ರನ್‌ ಅಶ್ವಿನ್‌ ಹಾಗೂ ದಿನೇಶ್‌ ಕಾರ್ತಿಕ್‌ ಮುಖಾಮುಖಿಯಾಗಲಿದ್ದಾರೆ. ಅಶ್ವಿನ್‌ ಅವರು ಕಿಂಗ್ಸ್‌ ಇಲೆವನ್‌ನ ಸಾರಥಿಯಾಗಿದ್ದಾರೆ. ಕಾರ್ತಿಕ್‌, ಕೆಕೆಆರ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ‘ಪ್ಲೇ ಆಫ್‌’ ಕನಸನ್ನು ಜೀವಂತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಎರಡು ತಂಡಗಳಿಗೂ ಈ ಪಂದ್ಯದಲ್ಲಿ ಜಯ ಅನಿವಾರ್ಯವಾಗಿದೆ.

ಉಭಯ ತಂಡಗಳು 12 ಪಂದ್ಯಗಳಿಂದ 10 ಪಾಯಿಂಟ್ಸ್‌ ಕಲೆಹಾಕಿವೆ. ಕೆಕೆಆರ್‌ ತಂಡವು ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, ಅಶ್ವಿನ್‌ ಬಳಗ ನಂತರದ ಸ್ಥಾನ ಹೊಂದಿದೆ.

ಮೊದಲ ಹಂತದಲ್ಲಿ ಕೆಕೆಆರ್‌, ಐದು ಪಂದ್ಯಗಳನ್ನು ಆಡಿತ್ತು. ಈ ಪೈಕಿ ನಾಲ್ಕರಲ್ಲಿ ಗೆದ್ದಿತ್ತು. ಎರಡನೇ ಹಂತದಲ್ಲಿ ಕಾರ್ತಿಕ್‌ ಪಡೆ ಸತತ ಆರು ಪಂದ್ಯಗಳಲ್ಲಿ ಸೋತಿತ್ತು. ಈ ತಂಡ ಹಿಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್‌ ಎದುರು ಗೆದ್ದು ವಿಶ್ವಾಸ ಮರಳಿ ಪಡೆದಿದೆ.

ಆ್ಯಂಡ್ರೆ ರಸೆಲ್‌, ಶುಭಮನ್‌ ಗಿಲ್‌ ಮತ್ತು ಕ್ರಿಸ್‌ ಲಿನ್‌ ಅವರು ಬ್ಯಾಟಿಂಗ್‌ನಲ್ಲಿ ಕಾರ್ತಿಕ್‌ ಬಳಗದ ಬೆನ್ನೆಲುಬಾಗಿದ್ದಾರೆ. ಮುಂಬೈ ಎದುರಿನ ಪಂದ್ಯದಲ್ಲಿ ಇವರು ಕ್ರಮವಾಗಿ 80, 75 ಮತ್ತು 54ರನ್ ಗಳಿಸಿ ಗಮನ ಸೆಳೆದಿದ್ದರು.

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ರಸೆಲ್‌, ಈ ಸಲದ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 12 ಪಂದ್ಯಗಳಿಂದ 486ರನ್ ಕಲೆಹಾಕಿದ್ದಾರೆ. ಅಭಿಮಾನಿಗಳ ಪಾಲಿನ ‘ಸೂಪರ್‌ ಹೀರೊ’ ರಸೆಲ್‌, ಕಿಂಗ್ಸ್‌ ಇಲೆವನ್‌ ಬೌಲರ್‌ಗಳನ್ನೂ ಕಾಡುವ ಹುಮ್ಮಸ್ಸಿನಲ್ಲಿದ್ದಾರೆ. 

ಕಾರ್ತಿಕ್‌, ರಾಬಿನ್‌ ಉತ್ತಪ್ಪ, ನಿತೀಶ್‌ ರಾಣಾ ಅವರೂ ಅಬ್ಬರದ ಬ್ಯಾಟಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಆದರೆ ಬೌಲಿಂಗ್‌ನಲ್ಲಿ ಕಾರ್ತಿಕ್‌ ಪಡೆಯಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬರಬೇಕಿದೆ. ಪ್ರಸಿದ್ಧ ಕೃಷ್ಣ, ಸುನಿಲ್‌ ನಾರಾಯಣ್‌, ಪೀಯೂಷ್‌ ಚಾವ್ಲಾ, ಕುಲದೀಪ್‌ ಯಾದವ್‌ ಅವರು ಮಿಂಚಬೇಕಿದೆ.

ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ತವರಿನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಲು ಕಾತರವಾಗಿದೆ.

ಕೆ.ಎಲ್‌.ರಾಹುಲ್‌ ಮತ್ತು ಕ್ರಿಸ್‌ ಗೇಲ್‌ ಅವರು ತಂಡಕ್ಕೆ ಸ್ಫೋಟಕ ಆರಂಭ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಕರ್ನಾಟಕದ ರಾಹುಲ್‌ ಈ ಸಲದ ಲೀಗ್‌ನಲ್ಲಿ 12 ಪಂದ್ಯಗಳಿಂದ 520ರನ್‌ ಗಳಿಸಿದ್ದಾರೆ. ಗೇಲ್‌ ಖಾತೆಯಲ್ಲಿ 448ರನ್‌ಗಳಿವೆ. ಮಯಂಕ್‌ ಅಗರವಾಲ್‌, ನಿಕೋಲಸ್‌ ಪೂರಣ್‌ ಮತ್ತು ಡೇವಿಡ್‌ ಮಿಲ್ಲರ್‌ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರಸ್ಥಂಭಗಳಾಗಿದ್ದಾರೆ.

ಬೌಲಿಂಗ್‌ನಲ್ಲಿ ಆತಿಥೇಯರು ನಾಯಕ ಅಶ್ವಿನ್‌ ಮತ್ತು ಮೊಹಮ್ಮದ್‌ ಶಮಿ ಅವರನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇವರಿಗೆ ಮುಜೀಬ್‌ ಉರ್‌ ರೆಹಮಾನ್‌, ಅರ್ಷದೀಪ್ ಸಿಂಗ್ ಅವರಿಂದ ಸೂಕ್ತ ಬೆಂಬಲ ಸಿಗಬೇಕಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !