ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನೇಶ್ವರ್‌ ಕೈಚಳಕ: ಡಕ್ವರ್ಥ್ ಲೂಯಿಸ್‌ ನಿಯಮದ ಅನ್ವಯ ಭಾರತಕ್ಕೆ 59ರನ್ ಜಯ

ಎರಡನೇ ಏಕದಿನ ಕ್ರಿಕೆಟ್‌ ಪಂದ್ಯ: ಡಕ್ವರ್ಥ್ ಲೂಯಿಸ್‌ ನಿಯಮದ ಅನ್ವಯ ಭಾರತಕ್ಕೆ 59ರನ್ ಜಯ
Last Updated 12 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಪೋರ್ಟ್‌ ಆಫ್‌ ಸ್ಪೇನ್‌: ಮಧ್ಯಮ ವೇಗಿ ಭುವನೇಶ್ವರ್‌ ಕುಮಾರ್‌, ಭಾನುವಾರ ರಾತ್ರಿ ಕ್ವೀನ್ಸ್‌ ಪಾರ್ಕ್‌ ಓವಲ್‌ ಮೈದಾನದಲ್ಲಿ ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾದರು.

ಭುವಿ ಅವರ (31ಕ್ಕೆ4) ಪರಿಣಾಮಕಾರಿ ದಾಳಿಯಿಂದಾಗಿ ಭಾರತ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 59ರನ್‌ಗಳಿಂದ ಆತಿಥೇಯರನ್ನು ಮಣಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು. ಮೊದಲ ಹಣಾಹಣಿಯು ಮಳೆಯಿಂದಾಗಿ ರದ್ದಾಗಿತ್ತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ, ನಾಯಕ ವಿರಾಟ್‌ ಕೊಹ್ಲಿ (120; 125ಎ, 14ಬೌಂ, 1ಸಿ) ಮತ್ತು ಶ್ರೇಯಸ್‌ ಅಯ್ಯರ್‌ (71; 68ಎ, 5ಬೌಂ, 1ಸಿ) ಅವರ ಆಕರ್ಷಕ ಆಟದಿಂದಾಗಿ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 279ರನ್‌ ಗಳಿಸಿತ್ತು.

ವಿಂಡೀಸ್‌ ತಂಡವು 12.5 ಓವರ್‌ಗಳಲ್ಲಿ 1 ವಿಕೆಟ್‌ಗೆ 55ರನ್‌ ಗಳಿಸಿದ್ದ ವೇಳೆ ಮಳೆ ಸುರಿಯಿತು. ನಂತರ ಬಹಳ ಹೊತ್ತು ವರುಣನ ಆಟವೇ ನಡೆಯಿತು. ಮಳೆ ನಿಂತ ಬಳಿಕ ಆತಿಥೇಯರಿಗೆ 46 ಓವರ್‌ಗಳಲ್ಲಿ 270ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಜೇಸನ್‌ ಹೋಲ್ಡರ್‌ ಬಳಗವು 42 ಓವರ್‌ಗಳಲ್ಲಿ 210ರನ್‌ ಗಳಿಸಲಷ್ಟೇ ಶಕ್ತವಾಯಿತು.

ಗುರಿ ಬೆನ್ನಟ್ಟಿದ ವಿಂಡೀಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. 300ನೇ ಏಕದಿನ ಪಂದ್ಯ ಆಡಿದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ 24 ಎಸೆತಗಳಲ್ಲಿ 11ರನ್‌ ಗಳಿಸಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ವೈಯಕ್ತಿಕ ಏಳು ರನ್‌ ಗಳಿಸಿದ್ದ ವೇಳೆ ಗೇಲ್‌, ಹೊಸ ಮೈಲುಗಲ್ಲು ಸ್ಥಾಪಿಸಿದರು. ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ (10,408) ವಿಂಡೀಸ್‌ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ದಾಖಲೆ ಮೊದಲು ಬ್ರಯನ್‌ ಲಾರಾ (10,405) ಹೆಸರಿನಲ್ಲಿತ್ತು.

ತಂಡದ ಮೊತ್ತ 52 ರನ್‌ ಆಗಿದ್ದಾಗ ಶಾಯ್‌ ಹೋಪ್‌ (5; 10ಎ) ಖಲೀಲ್‌ ಅಹಮದ್‌ಗೆ ವಿಕೆಟ್‌ ಒಪ್ಪಿಸಿದರು. ಶಿಮ್ರೊನ್‌ ಹೆಟ್ಮೆಯರ್‌ (18) ಮತ್ತು ರಾಸ್ಟನ್‌ ಚೇಸ್‌ (18) ಅವರೂ ವಿಕೆಟ್‌ ನೀಡಲು ಅವಸರಿಸಿದರು.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಎವಿನ್‌ ಲೂಯಿಸ್‌ (65; 80ಎ, 8ಬೌಂ, 1ಸಿ) ಎದೆಗುಂದಲಿಲ್ಲ. ನಿಕೋಲಸ್‌ ಪೂರನ್‌ (42; 52ಎ, 4ಬೌಂ, 1ಸಿ) ಜೊತೆಗೂಡಿದ ಅವರು ಸುಂದರ ಇನಿಂಗ್ಸ್‌ ಕಟ್ಟಿದರು. ಈ ಜೋಡಿ ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 56 ರನ್‌ ಪೇರಿಸಿತು.

28ನೇ ಓವರ್‌ ಬೌಲ್‌ ಮಾಡಿದ ಕುಲದೀಪ್‌ ಯಾದವ್‌, ಎರಡನೇ ಎಸೆತದಲ್ಲಿ ಲೂಯಿಸ್‌ ವಿಕೆಟ್‌ ಉರುಳಿಸಿದರು. ನಂತರ ಆತಿಥೇಯರು ಕುಸಿತದ ಹಾದಿ ಹಿಡಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 279. ವೆಸ್ಟ್‌ ಇಂಡೀಸ್‌: 42 ಓವರ್‌ಗಳಲ್ಲಿ 210 (ಕ್ರಿಸ್‌ ಗೇಲ್‌ 11, ಎವಿನ್‌ ಲೂಯಿಸ್‌ 65, ಶಿಮ್ರೊನ್‌ ಹೆಟ್ಮೆಯರ್‌ 18, ನಿಕೋಲಸ್‌ ಪೂರನ್‌ 42, ರಾಸ್ಟನ್‌ ಚೇಸ್‌ 18, ಜೇಸನ್‌ ಹೋಲ್ಡರ್‌ ಔಟಾಗದೆ 13, ಶೆಲ್ಡನ್‌ ಕಾಟ್ರೆಲ್‌ 17; ಭುವನೇಶ್ವರ್‌ ಕುಮಾರ್‌ 31ಕ್ಕೆ4, ಮೊಹಮ್ಮದ್‌ ಶಮಿ 39ಕ್ಕೆ2, ಖಲೀಲ್‌ ಅಹಮದ್‌ 32ಕ್ಕೆ1, ಕುಲದೀಪ್‌ ಯಾದವ್‌ 59ಕ್ಕೆ2, ರವೀಂದ್ರ ಜಡೇಜ 15ಕ್ಕೆ1).

ಫಲಿತಾಂಶ: ಭಾರತಕ್ಕೆ 59ರನ್‌ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT