ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿದ ಕೆಕೆಆರ್‌ ‘ಪ್ಲೇ ಆಫ್’ ಕನಸು

ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್‌
Last Updated 5 ಮೇ 2019, 20:15 IST
ಅಕ್ಷರ ಗಾತ್ರ

ಮುಂಬೈ: ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ‘ಪ್ಲೇ ಆಫ್‌’ ಕನಸು ಕಮರಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನಿರ್ಣಾಯಕ ಹೋರಾಟದಲ್ಲಿ ದಿನೇಶ್‌ ಕಾರ್ತಿಕ್‌ ಬಳಗವು 9 ವಿಕೆಟ್‌ಗಳಿಂದ ಆತಿಥೇಯ ಮುಂಬೈ ಇಂಡಿಯನ್ಸ್‌ಗೆ ಮಣಿಯಿತು.

ರೋಹಿತ್‌ ಶರ್ಮಾ (ಔಟಾಗದೆ 55; 48ಎ, 8ಬೌಂ) ಮತ್ತು ಸೂರ್ಯಕುಮಾರ್‌ ಯಾದವ್‌ (ಔಟಾಗದೆ 46; 27ಎ, 5ಬೌಂ, 2ಸಿ) ತವರಿನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದರು.

ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 133ರನ್‌ ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಗುರಿಯನ್ನು ಆತಿಥೇಯರು 16.1 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಮುಟ್ಟಿದರು.

ಗುರಿ ಬೆನ್ನಟ್ಟಿದ ಮುಂಬೈಗೆ ರೋಹಿತ್‌ ಮತ್ತು ಕ್ವಿಂಟನ್‌ ಡಿ ಕಾಕ್‌ (30; 23ಎ, 1ಬೌಂ, 3ಸಿ) ಉತ್ತಮ ಆರಂಭ ನೀಡಿದರು. ಇವರು 37 ಎಸೆತಗಳಲ್ಲಿ ತಂಡದ ಖಾತೆಗೆ 46ರನ್‌ ಸೇರ್ಪಡೆ ಮಾಡಿದರು. ಪ್ರಸಿದ್ಧ ಕೃಷ್ಣ ಬೌಲ್‌ ಮಾಡಿದ ಏಳನೇ ಓವರ್‌ನ ಮೊದಲ ಎಸೆತದಲ್ಲಿ ಡಿ ಕಾಕ್‌ ವಿಕೆಟ್‌ ಕೀಪರ್‌ ಕಾರ್ತಿಕ್‌ಗೆ ಕ್ಯಾಚ್‌ ನೀಡಿದರು.

ನಂತರ ರೋಹಿತ್‌ ಮತ್ತು ಸೂರ್ಯಕುಮಾರ್‌ ಆಟ ರಂಗೇರಿತು. ಈ ಜೋಡಿ ಕಲಾತ್ಮಕ ಬ್ಯಾಟಿಂಗ್ ಮೂಲಕ ಕೆಕೆಆರ್‌ ಬೌಲರ್‌ಗಳನ್ನು ಕಾಡಿತು. ಮುರಿಯದ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 88ರನ್‌ ಕಲೆಹಾಕಿತು. ಆ್ಯಂಡ್ರೆ ರಸೆಲ್‌ ಬೌಲ್‌ ಮಾಡಿದ 17ನೇ ಓವರ್‌ನ ಮೊದಲ ಎಸೆತವನ್ನು ಸೂರ್ಯಕುಮಾರ್‌ ಫೈನ್‌ ಲೆಗ್‌ನತ್ತ ಸಿಕ್ಸರ್‌ಗೆ ಅಟ್ಟಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ಮುಂಬೈ ಇಂಡಿಯನ್ಸ್‌ ಧ್ವಜಗಳು ರಾರಾಜಿಸಿದವು.

ಆತಿಥೇಯ ಆಟಗಾರರು ಮತ್ತು ನೆರವು ಸಿಬ್ಬಂದಿ ಕ್ರೀಡಾಂಗಣವನ್ನು ಸುತ್ತು ಹಾಕಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ರೋಹಿತ್‌ ಪಡೆ ಈ ಬಾರಿ ತವರಿನ ಅಂಗಳದಲ್ಲಿ ಆಡಿದ ಕೊನೆಯ ಪಂದ್ಯ ಇದಾಗಿತ್ತು.

ಮಹತ್ವದ ಹಣಾಹಣಿಯಲ್ಲಿ ಕೆಕೆಆರ್‌ ಬ್ಯಾಟಿಂಗ್‌ ಪಡೆ ಮಂಕಾಯಿತು.

ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಶುಭಮನ್ ಗಿಲ್ ಕೇವಲ 9 ರನ್ ಗಳಿಸಿ ಔಟಾದರು. ಕ್ರಿಸ್ ಲಿನ್ (41; 29ಎ, 2ಬೌಂ, 4ಸಿ) ಅರ್ಧಶತಕದ ಹಾದಿಯಲ್ಲಿ ಎಡವಿದರು. ನಾಯಕ ಕಾರ್ತಿಕ್‌ (3) ಆಟ ಕೂಡಾ ನಡೆಯಲಿಲ್ಲ.

ಟೂರ್ನಿಯುದ್ದಕ್ಕೂ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಆ್ಯಂಡ್ರೆ ರಸೆಲ್ ಇಲ್ಲಿ ಖಾತೆ ತೆರೆಯಲಿಲ್ಲ. ಅವರಿಗೆ ಲಸಿತ್ ಮಾಲಿಂಗ ಡಗ್‌ಔಟ್ ದಾರಿ ತೋರಿಸಿದರು. ಇದು ಕೆಕೆಆರ್‌ಗೆ ದುಬಾರಿಯಾಯಿತು.

ರಾಬಿನ್ ಉತ್ತಪ್ಪ (40; 47ಎ, 1ಬೌಂ, 3ಸಿ) ಏಕಾಂಗಿ ಹೋರಾಟ ನಡೆಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಸನ್‌ರೈಸರ್ಸ್‌ ಒಲಿದ ಅದೃಷ್ಟ

ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಕೋಲ್ಕತ್ತ ಸೋತಿದ್ದರಿಂದ ಸನ್‌ರೈಸರ್ಸ್‌ ಹೈದರಾಬಾದ್‌ಗೆ ‘ಪ್ಲೇ ಆಫ್’ ಅದೃಷ್ಟ ಒಲಿಯಿತು.

ಉಭಯ ತಂಡಗಳು ತಲಾ ಆರು ಪಂದ್ಯಗಳಲ್ಲಿ ಗೆದ್ದು 12 ಪಾಯಿಂಟ್ಸ್‌ ಸಂಗ್ರಹಿಸಿವೆ. ಆದರೆ ಉತ್ತಮ ರನ್‌ ಸರಾಸರಿಯಲ್ಲಿ ಕೆಕೆಆರ್‌ ಹಿಂದೆ ಬಿದ್ದಿದೆ. ಕೇನ್‌ ವಿಲಿಯಮ್ಸನ್‌ ಬಳಗ +0.577 ರನ್‌ರೇಟ್‌ ಹೊಂದಿದ್ದು, ಕಾರ್ತಿಕ್‌ ಪಡೆ +0.028 ರನ್‌ರೇಟ್‌ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT