ಮಂಗಳವಾರ, ಮಾರ್ಚ್ 21, 2023
29 °C

ಮ್ಯಾಕ್ಸ್‌ವೆಲ್, ಕ್ಯಾರಿ ದ್ವಿಶತಕದ ಜೊತೆಯಾಟ; ಆಸ್ಟ್ರೇಲಿಯಾಗೆ ಏಕದಿನ ಸರಣಿ

ಎಪಿ Updated:

ಅಕ್ಷರ ಗಾತ್ರ : | |

ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ (ಎಡ) ಮತ್ತು ಅಲೆಕ್ಸ್ ಕ್ಯಾರಿ –ರಾಯಿಟರ್ಸ್ ಚಿತ್ರ

ಮ್ಯಾಂಚೆಸ್ಟರ್: ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡರೂ 300 ರನ್‌ಗಳ ಗಡಿ ದಾಟಿದ ಆತಿಥೇಯರು; 73 ರನ್‌ಗಳಿಗೆ ಐದು ವಿಕೆಟ್ ಉರುಳಿದರೂ ಎದೆಗುಂದದೆ ಗುರಿ ಬೆನ್ನತ್ತಿ ಗೆದ್ದ ಪ್ರವಾಸಿ ತಂಡ. ಓಲ್ಡ್ ಟ್ರಾಫರ್ಡ್‌ನಲ್ಲಿ ಬುಧವಾರ ರಾತ್ರಿ ಮುಕ್ತಾಯಗೊಂಡ ರಾಯಲ್‌ ಇಂಗ್ಲೆಂಡ್‌ ಏಕದಿನ ಸರಣಿಯ ರೋಚಕ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೂರು ವಿಕೆಟ್‌ಗಳಿಂದ ಜಯ ಗಳಿಸಿ ಸರಣಿ ತನ್ನದಾಗಿಸಿಕೊಂಡಿತು. 

303 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಶತಕವೀರರಾದ ಅಲೆಕ್ಸ್ ಕ್ಯಾರಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಜಯ ತಂದುಕೊಟ್ಟರು. ಆರನೇ ವಿಕೆಟ್‌ಗೆ ಇವರಿಬ್ಬರು ಸೇರಿಸಿದ 212 ರನ್‌ಗಳು ಇಂಗ್ಲೆಂಡ್‌ನ ಕನಸನ್ನು ನುಚ್ಚುನೂರು ಮಾಡಿತು. ಕ್ಯಾರಿ (106; 114 ಎಸೆತ, 2 ಸಿಕ್ಸರ್, 7 ಬೌಂಡರಿ) ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಶತಕದ ಸಂಭ್ರಮದಲ್ಲಿ ಮಿಂದರೆ, ಮ್ಯಾಕ್ಸ್‌ವೆಲ್‌ (108; 90ಎ, 7 ಸಿ, 4 ಬೌಂ) ಎರಡನೇ ಶತಕ ಸಿಡಿಸಿದರು. 

ಆರನೇ ವಿಕೆಟ್‌ಗೆ ಆಸ್ಟ್ರೇಲಿಯಾ ಪರ ದಾಖಲೆಯ ಜೊತೆಯಾಟ ಆಡಿದ ಮ್ಯಾಕ್ಸ್‌ವೆಲ್ ಗೆಲುವಿಗೆ 18 ರನ್‌ ಬೇಕಾಗಿದ್ದಾಗ ಔಟಾದರು. ಬೆನ್ನಲ್ಲೇ ಕ್ಯಾರಿ ಕೂಡ ಕ್ರೀಸ್ ತೊರೆದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರಿತು. ಆದರೆ ಮೂರು ಎಸೆತಗಳಲ್ಲಿ 11 ರನ್ ಗಳಿಸಿದ ಮಿಷೆಲ್ ಸ್ಟಾರ್ಕ್ ಇನ್ನೂ ಎರಡು ಎಸೆತಗಳು ಬಾಕಿ ಇದ್ದಾಗ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಓಲ್ಡ್ ಟ್ರಾಫರ್ಡ್ ಅಂಗಣದಲ್ಲಿ ಗರಿಷ್ಠ ಮೊತ್ತದ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ದಾಖಲೆ ಆಸ್ಟ್ರೇಲಿಯಾ ಪಾಲಾಯಿತು. 

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಪಂದ್ಯದ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿದ ವೇಗಿ ಮಿಷೆಲ್ ಸ್ಟಾರ್ಕ್ ಆಘಾತ ನೀಡಿದರು. ಜೇಸನ್ ರಾಯ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್ ನೀಡಿ ಮರಳಿದರು. ನಂತರದ ಎಸೆತದಲ್ಲಿ ಜೋ ರೂಟ್ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿದರು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇಸ್ಟೊ (112; 126 ಎಸೆತ, 2 ಸಿಕ್ಸರ್‌, 12 ಬೌಂಡರಿ) ನಾಯಕ ಏಯಾನ್ ಮಾರ್ಗನ್ ಮತ್ತು ಆರನೇ ಕ್ರಮಾಂಕದ ಆಟಗಾರ ಸ್ಯಾಮ್ ಬಿಲಿಂಗ್ಸ್ ಅವರೊಂದಿಗೆ ಉತ್ತಮ ಜೊತೆಯಾಟ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. 

ಬೇಸ್ಟೊ ಮತ್ತು ಮಾರ್ಗನ್ ಮೂರನೇ ವಿಕೆಟ್‌ಗೆ 67 ರನ್ ಸೇರಿಸಿದರು. ವಿಕೆಟ್ ಕೀಪರ್ ಜೋಸ್ ಬಟ್ಲರ್‌ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಬೇಸ್ಟೊ ಜೊತೆಗೂಡಿದ ಬಿಲಿಂಗ್ಸ್ (57; 58 ಎ, 2 ಸಿ, 4 ಬೌಂ) ಐದನೇ ವಿಕೆಟ್‌ಗೆ 114 ರನ್ ಸೇರಿಸಿ ತಂಡವನ್ನು 200ರ ಗಡಿ ದಾಟಿಸಿದರು. ಬಿಲಿಂಗ್ಸ್ ಬೆನ್ನಲ್ಲೇ ಬೇಸ್ಟೊ ಕೂಡ ವಾಪಸಾದರು. ಅಂತಿಮ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ವೋಕ್ಸ್ (53; 39 ಎ, 6 ಬೌಂ) ತಂಡವನ್ನು 300ರ ಗಡಿ ದಾಟಿಸಿದರು.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 19 ರನ್‌ಗಳಿಂದ ಜಯ ಗಳಿಸಿದ್ದರೆ, ಎರಡನೇ ಪಂದ್ಯವನ್ನು ಇಂಗ್ಲೆಂಡ್ 24 ರನ್‌ಗಳಿಂದ ಗೆದ್ದುಕೊಂಡಿತ್ತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 7ಕ್ಕೆ 302 (ಜಾನಿ ಬೇಸ್ಟೊ 112, ಏಯಾನ್ ಮಾರ್ಗನ್ 23, ಸ್ಯಾಮ್ ಬಿಲಿಂಗ್ಸ್ 57, ಕ್ರಿಸ್ ವೋಕ್ಸ್ ಔಟಾಗದೆ 53; ಮಿಷೆಲ್ ಸ್ಟಾರ್ಕ್‌ 74ಕ್ಕೆ3, ಪ್ಯಾಟ್ ಕಮಿನ್ಸ್ 53ಕ್ಕೆ1, ಆ್ಯಡಂ ಜಂಪಾ 51ಕ್ಕೆ3). ಆಸ್ಟ್ರೇಲಿಯಾ: 49.4 ಓವರ್‌ಗಳಲ್ಲಿ 7ಕ್ಕೆ 305 (ಡೇವಿಡ್ ವಾರ್ನರ್ 24, ಆ್ಯರನ್ ಫಿಂಚ್‌ 12, ಮಾರ್ನಸ್ ಲಾಬುಶೇನ್ 20, ಅಲೆಕ್ಸ್ ಕ್ಯಾರಿ 106, ಗ್ಲೆನ್ ಮ್ಯಾಕ್ಸ್‌ವೆಲ್ 108, ಮಿಷೆಲ್ ಸ್ಟಾರ್ಕ್ ಔಟಾಗದೆ 11; ಕ್ರಿಸ್ ವೋಕ್ಸ್ 46ಕ್ಕೆ2, ಜೊಫ್ರಾ ಆರ್ಚರ್ 60ಕ್ಕೆ1, ಜೋ ರೂಟ್‌ 46ಕ್ಕೆ2, ಆದಿಲ್ ರಶೀದ್ 68ಕ್ಕೆ1). ಫಲಿತಾಂಶ: ಆಸ್ಟ್ರೇಲಿಯಾಗೆ ಮೂರು ವಿಕೆಟ್‌ಗಳ ಜಯ. ಮೂರು ಪಂದ್ಯಗಳ ಸರಣಿಯಲ್ಲಿ 2–1ರ ಗೆಲುವು. ಪಂದ್ಯ ಶ್ರೇಷ್ಠ ಮತ್ತು ಸರಣಿಯ ಉತ್ತಮ ಆಟಗಾರ: ಗ್ಲೆನ್ ಮ್ಯಾಕ್ಸ್‌ವೆಲ್. 

* ತಂಡದಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸುವುದಕ್ಕೇ ಇರುವವರು ಮ್ಯಾಕ್ಸ್‌ವೆಲ್. ಪಂದ್ಯಕ್ಕೆ ತಿರುವು ನೀಡುವ ಕಲೆ ಅವರಿಗೆ ಕರಗತ. ಮೈದಾನದ ಎಲ್ಲ ಮೂಲೆಗಳಿಗೂ ಚೆಂಡನ್ನು ಅಟ್ಟಬಲ್ಲ ಅಪರೂಪದ ಬ್ಯಾಟ್ಸ್‌ಮನ್‌ ಮ್ಯಾಕ್ಸ್‌ವೆಲ್‌. 

-ಆ್ಯರನ್ ಫಿಂಚ್‌, ಆಸ್ಟ್ರೇಲಿಯಾ ತಂಡದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು