ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದೋರ್ ಟೆಸ್ಟ್: ಮಯಂಕ್ ಅಗರವಾಲ್‌ ‘ಡಬಲ್‌’ ಕಮಾಲ್‌

ಪೂಜಾರ, ಅಜಿಂಕ್ಯ, ಜಡೇಜ ಅರ್ಧಶತಕಗಳ ಭರಾಟೆ; ಬಸವಳಿದ ಬಾಂಗ್ಲಾ; ಭಾರತಕ್ಕೆ 343 ರನ್‌ಗಳ ಮುನ್ನಡೆ
Last Updated 26 ಡಿಸೆಂಬರ್ 2019, 12:04 IST
ಅಕ್ಷರ ಗಾತ್ರ

ಇಂದೋರ್: ಬೆಂಗಳೂರಿನ ಮಯಂಕ್ ಅನುರಾಗ್ ಅಗರವಾಲ್ ಶುಕ್ರವಾರವಿಡೀ ದಿನ ಕ್ರಿಕೆಟ್‌ಪ್ರೇಮಿಗಳ ಹೃದಯವನ್ನು ಆವರಿಸಿಕೊಂಡರು.

ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನ ಮಯಂಕ್ (243; 330ಎಸೆತ, 28ಬೌಂಡರಿ, 8ಸಿಕ್ಸರ್) ದ್ವಿಶತಕ ಬಾರಿಸಿ ಸಾಲು ಸಾಲು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. ರನ್‌ಗಳ ಹೊಳೆಯಲ್ಲಿ ಪ್ರವಾಸಿ ಪಡೆಯು ಮುಳುಗೆದ್ದಿತು. ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತವು 114 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 493 ರನ್‌ ಗಳಿಸಿತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 343 ರನ್‌ಗಳ ಮುನ್ನಡೆ ಗಳಿಸಿದೆ. ಅರ್ಧಶತಕ ಗಳಿಸಿರುವ ರವೀಂದ್ರ ಜಡೇಜ (ಬ್ಯಾಟಿಂಗ್ 60; 76ಎಸೆತ, 6ಬೌಂಡರಿ, 2ಸಿಕ್ಸರ್) ಮತ್ತು ಉಮೇಶ್ ಯಾದವ್ (ಬ್ಯಾಟಿಂಗ್ 25; 10ಎಸೆತ, 1ಬೌಂಡರಿ, 3ಸಿಕ್ಸರ್) ಕ್ರೀಸ್‌ನಲ್ಲಿದ್ದಾರೆ.

ಮಯಂಕ್ ಮಾಯೆ: ಶುಕ್ರವಾರ ಬೆಳಿಗ್ಗೆ 24ನೇ ಓವರ್‌ನಲ್ಲಿ ತಮಗೆ ಲಭಿಸಿದ್ದ ಜೀವದಾನವನ್ನು ಮಯಂಕ್ ಅಗರವಾಲ್ ಭರ್ಜರಿಯಾಗಿಯೇ ಬಳಸಿಕೊಂಡರು. ಆ ಸಂದರ್ಭದಲ್ಲಿ ಕೇವಲ 32 ರನ್‌ಗಳನ್ನು ಗಳಿಸಿದ್ದ ಅವರ ಕ್ಯಾಚ್ ಬಿಟ್ಟ ಮೊದಲ ಸ್ಲಿಪ್ ಫೀಲ್ಡರ್‌ ಇಮ್ರುಲ್ ಕಯೆಸ್‌ ಕೈ ಕೈ ಹಿಸುಕಿಕೊಂಡರು. ಅವರೊಂದಿಗೆ ಉಳಿದ ಆಟಗಾರರೂ ಪರಿತಪಿಸಿದರು. ಮಯಂಕ್ ಆಟದ ಖದರ್‌ಗೆ ಬಾಂಗ್ಲಾ ಬಳಗ ಬಸವಳಿಯಿತು.

ಕೇವಲ 68 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ ಅವರು ಶತಕ ಬಾರಿಸಲು ತುಸು ಹೆಚ್ಚು ಸಮಯ ತೆಗೆದುಕೊಂಡರು. ತಾವೆದುರಿಸಿದ 183ನೇ ಎಸೆತದಲ್ಲಿ ನೂರರ ಗಡಿ ಮುಟ್ಟಿದರು. ಇದರಲ್ಲಿ 15 ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ನಂತರ ಎದುರಿಸಿದ 120 ಎಸೆತಗಳಲ್ಲಿ ಅವರು ತಮ್ಮ ಮೊತ್ತಕ್ಕೆ ನೂರು ರನ್‌ಗಳನ್ನು ಸೇರಿಸಿ ಸಂಭ್ರಮಿಸಿದರು. 196 ರನ್‌ ಗಳಿಸಿದ್ದ ಸಂದರ್ಭದಲ್ಲಿ ಎರಡು ಹೆಜ್ಜೆ ಮುಂದೆ ಲಂಘಿಸಿ ಸಿಕ್ಸರ್ ಎತ್ತಿ ದ್ವಿಶತಕ ಪೂರೈಸಿಕೊಂಡರು. ಪೆವಿಲಿಯನ್‌ನತ್ತ ಎರಡು ಬೆರಳು ತೋರಿಸಿ ನಕ್ಕರು. ಅಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ತಮ್ಮ ಮೂರು ಬೆರಳುಗಳನ್ನು (ತ್ರಿಶತಕ ಪೂರೈಸು ಎಂಬಂತೆ) ತೋರಿಸಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆಯನ್ನು ಮಯಂಕ್ ಮೀರಿ ನಿಂತರು. ಡಾನ್ 13 ಇನಿಂಗ್ಸ್‌ಗಳಲ್ಲಿ ಎರಡು ದ್ವಿಶತಕ ಹೊಡೆದಿದ್ದರು. ಮಯಂಕ್ 12 ಇನಿಂಗ್ಸ್‌ಗಳಲ್ಲಿ ಈ ಸಾಧನೆಮಾಡಿದರು. 43 ದಿನಗಳಲ್ಲಿ ಕರ್ನಾಟಕದ ’ರನ್‌ ಯಂತ್ರ’ ದಾಖಲಿಸಿದ ಎರಡನೇ ದ್ವಿಶತಕ ಇದು. ಅಕ್ಟೋಬರ್ 2ರಂದು ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ಎದುರು ಅವರು ಈ ಸಾಧನೆ ಮಾಡಿದ್ದರು.


ಈ ಹಾದಿಯಲ್ಲಿ ಮಯಂಕ್ ಮೂರು ಮಹತ್ವದ ಜೊತೆಯಾಟಗಳನ್ನೂ ಆಡಿದರು. ಎರಡನೇ ವಿಕೆಟ್‌ಗೆ ಚೇತೇಶ್ವರ್ ಪೂಜಾರ (54;72ಎ, 9ಬೌಂ) ಅವರೊಂದಿಗೆ 91 ರನ್‌ ಸೇರಿಸಿದರು. ಅಜಿಂಕ್ಯ ರಹಾನೆ (86; 172ಎ, 9ಬೌಂ) ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 190 ರನ್ ಗಳನ್ನು ಮತ್ತು ರವೀಂದ್ರ ಜಡೇಜ ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 123 ರನ್‌ಗಳನ್ನು ಸೇರಿಸಿದರು. ತಮ್ಮ ದ್ವಿಶತಕ ಪೂರೈಸಿದ ನಂತರ ಚುಟುಕು ಕ್ರಿಕೆಟ್ ಶೈಲಿಯಲ್ಲಿ ಬ್ಯಾಟ್ ಬೀಸಿದರು. ವೇಗವಾಗಿ ರನ್‌ ಗಳಿಸಿದರು. ಅವರು 108ನೇ ಓವರ್‌ನಲ್ಲಿ ಸಿಕ್ಸರ್ ಎತ್ತಲು ಮಾಡಿದ ಪ್ರಯತ್ನ ಕೈಕೊಟ್ಟಿತು. ಮಿಡ್‌ವಿಕೆಟ್‌ನಲ್ಲಿದ್ದ ಅಬು ಜಯೇದ್ ಕಷ್ಟಪಟ್ಟು ಪಡೆದ ಕ್ಯಾಚ್‌ಗೆ ಮಯಂಕ್ ಔಟಾದರು. ವಿಕೆಟ್ ಗಳಿಸಿದ ಮೆಹದಿ ಹಸನ್ ತಾವು ಸಂಭ್ರಮಿಸುವ ಮುನ್ನ ಮಯಂಕ್ ಅವರನ್ನು ಅಭಿನಂದಿಸಿದರು. ಬಾಂಗ್ಲಾದ ಉಳಿದ ಆಟಗಾರರೂ ಬಂದು ಕೈಕುಲುಕಿದರು.

2016ರಲ್ಲಿ ಇಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದ ವಿರಾಟ್ ಇವತ್ತು ಸೊನ್ನೆ ಸುತ್ತಿದರು. ರವೀಂದ್ರ ಜಡೇಜ ಅರ್ಧಶತಕ ಬಾರಿಸಿ ಕ್ರೀಸ್‌ನಲ್ಲಿದ್ದಾರೆ. ಬೀಸಾಟವಾಡುತ್ತಿರುವ ಉಮೇಶ್ ಯಾದವ್ ಕೂಡ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT