ಗುರುವಾರ , ಡಿಸೆಂಬರ್ 3, 2020
20 °C
ಮುಂಬೈ ಇಂಡಿಯನ್ಸ್‌ಗೆ ಐದನೇ ಪ್ರಶಸ್ತಿ ಮೇಲೆ ಕಣ್ಣು; ಡೆಲ್ಲಿ ಕ್ಯಾಪಿಟಲ್ಸ್‌ಗೆ ಇತಿಹಾಸ ಬರೆಯುವ ತವಕ

ಚಾಂಪಿಯನ್‌ ಪಟ್ಟಕ್ಕೆ ‘ಮುಂಬೈಕರ್’ ಕದನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಕೋವಿಡ್–19ರ ಸಂಕಷ್ಟದ ನಡುವೆಯೂ ಯಶಸ್ವಿಯಾಗಿ ಮುಕ್ತಾಯದತ್ತ ಸಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಮಂಗಳವಾರ ಸೆಣಸಲಿವೆ. ಎರಡೂ ತಂಡಗಳ ನಾಯಕರು ಮುಂಬೈಯವರಾಗಿದ್ದು ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಗೆದ್ದರೆ ಐಪಿಎಲ್‌ ಪ್ರಶಸ್ತಿಗೆ ಹೊಸ ವಾರಸುದಾರ ಆಗಲಿದೆ. ರೋಹಿತ್ ಶರ್ಮಾ ಮುನ್ನಡೆಸುತ್ತಿರುವ ಮುಂಬೈ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.

52 ದಿನ ‘ಪ್ರೈಂ ಟೈಮ್‌’ನಲ್ಲಿ ಟಿವಿ ವೀಕ್ಷಕರನ್ನು ರಂಜಿಸಿದ 13ನೇ ಆವೃತ್ತಿಯ ಟೂರ್ನಿ ರೋಚಕ ಹಣಾಹಣಿಗಳಿಗೆ ಸಾಕ್ಷಿಯಾಗಿದೆ. ಮುಂಬೈ ಇಂಡಿಯನ್ಸ್ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ್ದು ಲೀಗ್ ಹಂತ ಮುಗಿದಾಗ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿತ್ತು. ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದು ಸುಲಭವಾಗಿ ಫೈನಲ್ ಪಂದ್ಯದಲ್ಲಿ ಸ್ಥಾನವನ್ನು ಖಚಿತಪಿಡಿಸಿಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಏಳುತ್ತ–ಮುಗ್ಗರಿಸುತ್ತ ಪ್ರಶಸ್ತಿ ಸುತ್ತಿನ ಹಾಣಹಣಿಗೆ ಸಜ್ಜಾಗಿದೆ.

ಒಂದು ಡಜನ್ ಆವೃತ್ತಿಗಳಲ್ಲಿ ಆಡಿದರೂ ಫೈನಲ್ ಪ್ರವೇಶಿಸಲು ಸಾಧ್ಯವಾಗದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ಲೀಗ್ ಹಂತದ ಮೊದಲಾರ್ಧದಲ್ಲಿ ಅಮೋಘ ಆಟವಾಡಿದ ತಂಡ ಎರಡನೇ ಹಂತದ ಕೆಲವೆಡೆ ಎಡವಿತ್ತು. ಆದರೆ ಭಾನುವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಜಯ ಗಳಿಸಿ ಮುಂಬೈನ ಸವಾಲು ಎದುರಿಸಲು ಸಿದ್ಧವಾಗಿದೆ. ಟೂರ್ನಿಯಲ್ಲಿ ಮುಂಬೈ ಒಟ್ಟಾರೆ 15 ಪಂದ್ಯಗಳನ್ನು ಆಡಿದ್ದು 10ರಲ್ಲಿ ಗೆದ್ದಿದೆ. ಡೆಲ್ಲಿ ಒಟ್ಟು 16 ಪಂದ್ಯ ಆಡಿದ್ದು ಒಂಬತ್ತರಲ್ಲಿ ಗೆಲುವು ಸಾಧಿಸಿದೆ. ಎದುರಾಳಿ ಯಾವ ತಂಡವಾಗಿದ್ದರೂ ದಿಟ್ಟವಾಗಿ ಎದುರಿಸಿ ಗೆಲ್ಲುವ ಸಾಮರ್ಥ್ಯ ಇದೆ ಎಂದು ಮುಂಬೈ ಈಗಾಗಲೇ ಸಾಬೀತು ಮಾಡಿದೆ. ತಂಡದ ಬ್ಯಾಟಿಂಗ್ ಪಡೆ ಒಟ್ಟಾರೆ 130 ಸಿಕ್ಸರ್‌ಗಳನ್ನು ಸಿಡಿಸಿದ್ದು ಡೆಲ್ಲಿಗೆ ಒಟ್ಟು 84 ಬಾರಿ ಮಾತ್ರ ಚೆಂಡನ್ನು ಬೌಂಡರಿ ಗೆರೆಯಾಚೆ ಬೀಳಿಸಲು ಸಾಧ್ಯವಾಗಿದೆ.

ಹಿಟ್‌ಮ್ಯಾನ್‌ಗೆ ಕ್ವಿಂಟನ್–ಇಶಾನ್ ಸಹಕಾರ

ಹಿಟ್‌ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ ಗಾಯಗೊಂಡು ಕಣಕ್ಕೆ ಇಳಿಯದೇ ಇರುವುದಕ್ಕೂ ಮುನ್ನ ಅಮೋಘ ಆಟವಾಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿಕಾಕ್, ಸಿಕ್ಸರ್‌ಗಳ ಸರದಾರ ಸೂರ್ಯಕುಮಾರ್ ಯಾದವ್ ಮತ್ತು ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮುಂಬೈ ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ದೈತ್ಯ ಕೀರನ್ ಪೊಲಾರ್ಡ್ ಕೂಡ ಇದ್ದಾರೆ. ಈ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಕಗಿಸೊ ರಬಾಡ, ಆ್ಯನ್ರಿಚ್ ನಾಕಿಯಾ, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಯಶಸ್ವಿಯಾದರೆ ಡೆಲ್ಲಿ ತಂಡದ ಪ್ರಶಸ್ತಿ ಆಸೆ ಈಡೇರಲಿದೆ.

ಸತತ ಶತಕ ಸಿಡಿಸಿ ದಾಖಲೆ ಬರೆದಿರುವ ಶಿಖರ್ ಧವನ್ ಡೆಲ್ಲಿಗೆ ಉತ್ತಮ ಬುನಾದಿ ಹಾಕಿಕೊಡುತ್ತಿದ್ದಾರೆ. ಭಾನುವಾರ ಅವರೊಂದಿಗೆ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಕಣಕ್ಕೆ ಇಳಿಸಿ ಹೊಸ ಪ್ರಯೋಗ ಮಾಡಿದ ಡೆಲ್ಲಿ ತಂಡದ ಆಡಳಿತ ಅಮೋಘ ಯಶಸ್ಸು ಕಂಡಿತ್ತು. ಹೀಗಾಗಿ ಫೈನಲ್‌ನಲ್ಲಿ ತಂಡ ಯಾವ ತಂತ್ರಕ್ಕೆ ಮೊರೆ ಹೋಗುತ್ತದೆ ಎಂಬ ಕುತೂಹಲ ಮೂಡಿದೆ. ಶ್ರೇಯಸ್ ಅಯ್ಯರ್ ಅವರಿಗೆ ರಿಷಭ್ ಪಂತ್, ಅಜಿಂಕ್ಯ ರಹಾನೆ, ಶಿಮ್ರಾನ್ ಹೆಟ್ಮೆಯರ್ ಮತ್ತು ಪೃಥ್ವಿ ಶಾ ಅವರಿಂದ ಉತ್ತಮ ಸಹಕಾರ ಸಿಕ್ಕಿದರೆ ಸವಾಲಿನ ಮೊತ್ತ ಕಲೆ ಹಾಕುವುದು ತಂಡಕ್ಕೆ ಕಷ್ಟಕರವೇನೂ ಅಲ್ಲ. ಆದರೆ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬೂಮ್ರಾ, ಜೇಮ್ಸ್ ಪ್ಯಾಟಿನ್ಸನ್, ಕೀರನ್ ಪೊಲಾರ್ಡ್, ಪಾಂಡ್ಯ ಸಹೋದರರು ಮತ್ತು ಟ್ರೆಂಟ್ ಬೌಲ್ಟ್ ಅವರನ್ನು ಎದುರಿಸುವುದು ಅಷ್ಟು ಸುಲಭವೇನೂ ಅಲ್ಲ.

ದ್ವಿಶತಕದತ್ತ ರೋಹಿತ್

ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಲ್ಕು ಬಾರಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿರುವ ರೋಹಿತ್ ಶರ್ಮಾ ಈ ಬಾರಿಯ ಫೈನಲ್‌ನಲ್ಲಿ ಕಣಕ್ಕೆ ಇಳಿದರೆ ಮೈಲುಗಲ್ಲೊಂದನ್ನು ಸಾಧಿಸಲಿದ್ದಾರೆ. ಇದು ಅವರ 200ನೇ ಐಪಿಎಲ್ ಪಂದ್ಯ ಆಗಲಿದೆ. ಈ ಅಪರೂಪದ ಸಾಧನೆ ಮಾಡಿದ ಎರಡನೇ ಆಟಗಾರ ಎಂದೆನಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರ ಎಂಬ ಶ್ರೇಯಸ್ಸು ಮಹೇಂದ್ರ ಸಿಂಗ್ ಧೋನಿ ಅವರದು. ಈ ಬಾರಿಯ ಟೂರ್ನಿಯಲ್ಲಿ 200ರ ಗಡಿದ ದಾಟಿದ ಅವರು 204 ಪಂದ್ಯಗಳನ್ನು ಆಡಿದ್ದಾರೆ. ಮೊದಲ ಆವೃತ್ತಿಯಿಂದಲೇ ಆಡುತ್ತಿರುವ ರೋಹಿತ್ ಶರ್ಮಾ ಮೊದಲ ಕ್ವಾಲಿಫೈಯರ್‌ನಲ್ಲಿ ಆಡುವ ಮೂಲಕ 199ನೇ ಪಂದ್ಯ ಪೂರೈಸಿದ್ದಾರೆ. ಹೆಚ್ಚು ಪಂದ್ಯಗಳನ್ನು ಆಡಿದವರ ಪಟ್ಟಿಯ ಮೂರನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ ಇದ್ದಾರೆ. ಅವರು 196 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ಸುರೇಶ್ ರೈನಾ (193), ವಿರಾಟ್ ಕೊಹ್ಲಿ (192) ಮತ್ತು ರಾಬಿನ್ ಉತ್ತಪ್ಪ (189) ನಂತರದ ಸ್ಥಾನದಲ್ಲಿದ್ದಾರೆ. ಒಟ್ಟು 40 ಮಂದಿ ಐಪಿಎಲ್‌ನಲ್ಲಿ 100ಕ್ಕೂ ಹೆಚ್ಚು ಪಂದ್ಯ ಆಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು