ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಎದುರು ಪಿಂಕ್‌ಬಾಲ್‌ ಟೆಸ್ಟ್‌ ಆಡಲು ಸ್ಟಾರ್ಕ್‌ ಕಾತರ

ಹಗಲು–ರಾತ್ರಿ ಟೆಸ್ಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಆಸ್ಟ್ರೇಲಿಯಾ
Last Updated 26 ಮೇ 2020, 20:00 IST
ಅಕ್ಷರ ಗಾತ್ರ

ಮೆಲ್ಬರ್ನ್‌: ‘ಪ್ರವಾಸಿ ಭಾರತ ತಂಡದ ವಿರುದ್ಧ ಮುಂದಿನ ಬೇಸಿಗೆ ಸರಣಿಯ ವೇಳೆ ನಸುಗೆಂಪು ಚೆಂಡಿನಲ್ಲಿ ಬೌಲ್‌ ಮಾಡಲು ಕಾತರದಿಂದ ಕಾಯುತ್ತಿದ್ದೇನೆ‘ ಎಂದು ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಮಂಗಳವಾರ ತಿಳಿಸಿದ್ದಾರೆ.

ಸ್ಟಾರ್ಕ್‌ ನಸುಗೆಂಪು ಚೆಂಡಿನಲ್ಲಿ ಯಶಸ್ವೀ ಬೌಲರ್‌ ಆಗಿದ್ದಾರೆ.

ಈ ಹಿಂದೆ, 2018–19ರ ಸರಣಿಯಲ್ಲಿ ಒಂದು ಪಿಂಕ್‌ ಬಾಲ್ (ಹಗಲು ರಾತ್ರಿ) ಟೆಸ್ಟ್‌ ಸೇರ್ಪಡೆಗೊಳಿಸುವ ಆಸ್ಟ್ರೇಲಿಯಾದ ಪ್ರಸ್ತಾವವನ್ನು ಭಾರತ ತಳ್ಳಿಹಾಕಿತ್ತು. ಆದರೆ ಮುಂದಿನ ಸರಣಿಯಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌ ಒಂದನ್ನು ಒಳಗೊಳ್ಳುವುದಕ್ಕೆ ಭಾರತದ ಸಮ್ಮತಿಯಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಫೆಬ್ರುವರಿಯಲ್ಲಿ ತಿಳಿಸಿದ್ದರು.

‘ಭಾರತ ವಿರುದ್ಧ ಸರಣಿಯಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌ ಇದ್ದರೆ ಬಹಳ ಚೆನ್ನಾಗಿರುತ್ತದೆ. ಅಭಿಮಾನಿಗಳೂ ಇಷ್ಟಪಡುತ್ತಾರೆ. ಇದು ಹಣಾಹಣಿಗೆ ಭಿನ್ನ ಆಯಾಮ ನೀಡುತ್ತದೆ‘ ಎಂದು ಸ್ಟಾರ್ಕ್‌ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಅಗ್ರಗಣ್ಯ ಎನಿಸಿದೆ. ಕಾಂಗರೂಗಳು 2015ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮೊದಲ ಬಾರಿ ನಸುಗೆಂಪು ಚೆಂಡಿನಲ್ಲಿ ಟೆಸ್ಟ್‌ ಆಡಿದ್ದರು. ಇದುವರೆಗೆ ಆಡಿರುವ ಏಳೂ ಟೆಸ್ಟ್‌ಗಳಲ್ಲಿ ಈ ತಂಡ ಅಜೇಯವಾಗುಳಿದಿದೆ.

ಇನ್ನೊಂದೆಡೆ ಕಳೆದ ವರ್ಷದ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ಆಡಿದ್ದ ಭಾರತ, ಆ ಪಂದ್ಯವನ್ನು ನಿರಾಯಾಸವಾಗಿ ಗೆದ್ದುಕೊಂಡಿತ್ತು.

‘ಭಾರತವೂ ಪಿಂಕ್‌ ಬಾಲ್‌ ಪಂದ್ಯ ಆಡಿದೆ. ಹೀಗಾಗಿ ಅವರೇನೂ ಈ ಮಾದರಿಗೆ ಅಪರಿಚಿತರಲ್ಲ. ಆದರೆ ಹೆಚ್ಚು ಪಂದ್ಯಗಳನ್ನು ಆಡಿರುವುದರಿಂದ ನಮಗೇ ಅನುಕೂಲ’ ಎಂದು ಸ್ಟಾರ್ಕ್ ಹೇಳಿದರು.

30 ವರ್ಷದ ಸ್ಟಾರ್ಕ್‌, ಆಸ್ಟ್ರೇಲಿಯಾ ಆಡಿರುವ ಎಲ್ಲ ಏಳೂ ಪಿಂಕ್‌ಬಾಲ್ ಟೆಸ್ಟ್‌ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 19.23 ಸರಾಸರಿಯಲ್ಲಿ 42 ವಿಕೆಟ್‌ಗಳನ್ನು ಕಬಳಿಸಿ ಅಮೋಘ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT