ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್; ಆಸ್ಟ್ರೇಲಿಯಾ ಟಿ20 ಸರಣಿಯಿಂದ ಹೊರಬಿದ್ದ ಶಮಿ, ಉಮೇಶ್ ಯಾದವ್‌ಗೆ ಕರೆ

Last Updated 18 ಸೆಪ್ಟೆಂಬರ್ 2022, 1:08 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಅನುಭವಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ಕೋವಿಡ್–19 ದೃಢಪಟ್ಟಿದ್ದು, ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್‌ 20ರಿಂದ ಮೊಹಲಿಯಲ್ಲಿ ಆರಂಭವಾಗಲಿರುವ ಟಿ20 ಕ್ರಿಕೆಟ್‌ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಬದಲು ವೇಗಿ ಉಮೇಶ್‌ ಯಾದವ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಇದುವರೆಗೆ 7 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ಪರ ಆಡಿರುವ ಉಮೇಶ್, 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಕೊನೆಯ ಸಲ ಅಂ.ರಾ ಚುಟುಕು ಕ್ರಿಕೆಟ್‌ ಆಡಿದ್ದರು.

ಶಮಿಗೆ ಕೋವಿಡ್ ಖಚಿತವಾಗಿರುವ ವಿಚಾರವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

'ಹೌದು, ಶಮಿಗೆ ಕೋವಿಡ್–19 ದೃಢಪಟ್ಟಿದೆ. ಸೌಮ್ಯ ಲಕ್ಷಣಗಳಷ್ಟೇ ಕಾಣಿಸಿಕೊಂಡಿರುವುದರಿಂದ ಚಿಂತಿಸುವಂತಹದ್ದೇನಿಲ್ಲ. ಆದರೆ, ಪ್ರತ್ಯೇಕವಾಸದಲ್ಲಿ ಉಳಿಯಬೇಕಿದೆ ಮತ್ತು ಗುಣಮುಖರಾದ ನಂತರವಷ್ಟೇ ತಂಡ ಸೇರಿಕೊಳ್ಳಬಹುದಾಗಿದೆ. ಇದು ದುರದೃಷ್ಟಕರವಾದರೂ ಜೀವನ ಇರುವುದೇ ಹೀಗೆ' ಎಂದು ಬಿಸಿಸಿಐನ ಉನ್ನತ ಮೂಲಗಳು ಪಿಟಿಐಗೆ ತಿಳಿಸಿವೆ.

ಆಸ್ಟ್ರೇಲಿಯಾ ಸರಣಿ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಮೂರು ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಆ ಸರಣಿ ಆರಂಭಕ್ಕೆ ಇನ್ನೂ ಹತ್ತು ದಿನಗಳಿವೆ. ಅದಕ್ಕೂ ಮುನ್ನ ಶಮಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದೂ ವಿಶ್ವಾಸ ವ್ಯಕ್ತಪಡಿಸಿವೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರು ಪಂದ್ಯಗಳು ಸೆ.20, ಸೆ.23 ಹಾಗೂ ಸೆ.25ರಂದು ನಡೆಯಲಿವೆ. ಮೂರು ದಿನಗಳ ಬಳಿಕ (ಸೆ.28ರಿಂದ) ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭವಾಗಲಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ–20 ಸರಣಿಗೆ ಭಾರತ ತಂಡ:ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್‌ಪ್ರೀತ್ ಬುಮ್ರಾ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ–20 ಸರಣಿಗೆ ಭಾರತ ತಂಡ:ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್‌ಪ್ರೀತ್ ಬುಮ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT