ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಸಲ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್: ಮಾಲಿಂಗ ದಾಖಲೆ ಮುರಿದ ಸ್ಟಾರ್ಕ್

Last Updated 20 ಮಾರ್ಚ್ 2023, 11:33 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಭಾರತ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೇಲ್‌ ಸ್ಟಾರ್ಕ್‌ ಅವರು 5 ವಿಕೆಟ್‌ಗಳನ್ನು ಉರುಳಿಸಿದರು. ಆ ಮೂಲಕ ಅವರು ಏಕದಿನ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಹೆಚ್ಚು ಬಾರಿ 5 ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿದರು.

ಇದುವರೆಗೆ 109 ಪಂದ್ಯಗಳಲ್ಲಿ ಬೌಲಿಂಗ್‌ ಮಾಡಿರುವ ಸ್ಟಾರ್ಕ್‌ ಒಟ್ಟು 9 ಬಾರಿ 5 ವಿಕೆಟ್‌ ಗೊಂಚಲು ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಘಾತಕ ವೇಗಿ ವಕಾರ್‌ ಯೂನಿಸ್‌ ಹಾಗೂ ಶ್ರೀಲಂಕಾದ ದಿಗ್ಗಜ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ ಅವರಷ್ಟೇ ಸ್ಟಾರ್ಕ್‌ಗಿಂತ ಮೇಲಿದ್ದಾರೆ.

262 ಪಂದ್ಯಗಳ 258 ಇನಿಂಗ್ಸ್‌ಗಳಲ್ಲಿ ಬೌಲಿಂಗ್‌ ಮಾಡಿರುವ ಯೂನಿಸ್‌ 13 ಬಾರಿ ಹಾಗೂ 350 ಪಂದ್ಯಗಳ 341 ಇನಿಂಗ್ಸ್‌ಗಳಲ್ಲಿ ಆಡಿರುವ ಮುರಳೀಧರನ್‌ 10 ಸಲ 5 ವಿಕೆಟ್‌ ಕಬಳಿಸಿದ್ದಾರೆ.

ಆಸ್ಟ್ರೇಲಿಯಾದವರೇ ಆದ ಮಾಜಿ ವೇಗದ ಬೌಲರ್‌ ಬ್ರೆಟ್‌ ಲೀ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಅವರು ತಲಾ 9 ಬಾರಿ ಹಾಗೂ ಮಾಲಿಂಗ 8 ಸಲ ಈ ಸಾಧನೆ ಮಾಡಿದ್ದಾರೆ.

ಸರಣಿ ಸಮಬಲ
ಇಲ್ಲಿನ ಡಾ. ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 10 ವಿಕೆಟ್‌ ಅಂತರದಿಂದ ಗೆದ್ದುಕೊಂಡಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತದ ಬ್ಯಾಟರ್‌ಗಳು, ಆಸಿಸ್‌ ವೇಗದ ಬೌಲಿಂಗ್‌ ಎದುರು ತತ್ತರಿಸಿದರು. ಮಾಜಿ ನಾಯಕ ವಿರಾಟ್‌ ಕೊಹ್ಲಿ ಗಳಿಸಿದ 31 ರನ್‌ಗಳೇ ಟೀಂ ಇಂಡಿಯಾ ಪರ ವೈಯಕ್ತಿಕ ಗರಿಷ್ಠ ಮೊತ್ತವೆನಿಸಿತು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ (ಅಜೇಯ 29 ರನ್‌) ಕೊಂಚ ಹೋರಾಟ ನಡೆಸಿದರು.

ರೋಹಿತ್‌ ಶರ್ಮಾ ಬಳಗದ ನಾಲ್ವರು ಬ್ಯಾಟರ್‌ಗಳು ಸೊನ್ನೆ ಸುತ್ತಿದರು. ಹೀಗಾಗಿ ಆತಿಥೇಯ ತಂಡ 117 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.

ಆಸ್ಟ್ರೇಲಿಯಾ ಪರ ಅಮೋಘ ಬೌಲಿಂಗ್‌ ಪ್ರದರ್ಶಿಸಿದ ಮಿಚೇಲ್‌ ಸ್ಟಾರ್ಕ್‌ 53 ರನ್‌ ನೀಡಿ 5 ವಿಕೆಟ್‌ ಪಡೆದರೆ, ಸೀನ್‌ ಅಬೋಟ್‌ 23 ರನ್‌ಗೆ 3 ಮತ್ತು ನಾಥನ್ ಎಲ್ಲಿಸ್‌ 13 ರನ್‌ಗೆ 2 ವಿಕೆಟ್‌ ಕಬಳಿಸಿದರು.

ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕ ಜೋಡಿ ಭರ್ಜರಿ ಬ್ಯಾಟಿಂಗ್‌ ನಡೆಸಿತು. ತಲಾ ಅರ್ಧಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ (51) ಹಾಗೂ ಮಿಚೇಲ್‌ ಮಾರ್ಶ್‌ (66) ಕೇವಲ 11 ಓವರ್‌ಗಳಲ್ಲೇ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.

ಮೊದಲ ಪಂದ್ಯದಲ್ಲಿ ಸೋತಿದ್ದ ಪ್ರವಾಸಿ ಪಡೆ, ಈ ಗೆಲುವಿನೊಂದಿಗೆ ಸರಣಿಯಲ್ಲಿ 1–1 ಅಂತರದಿಂದ ಸಮಬಲ ಸಾಧಿಸಿತು. ಅಂತಿಮ ಪಂದ್ಯವು ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮಾರ್ಚ್‌ 22 ರಂದು ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT